
ನವದೆಹಲಿ (ಸೆ.18): 2002ರ ಗುಜರಾತ್ ಗಲಭೆ ಸಂದರ್ಭದಲ್ಲಿ ನಡೆದ ನರೋಡಾ ಗಾಮ್ ಹತ್ಯಾಕಾಂಡದ ಆರೋಪಿ ಗುಜರಾತ್ ಮಾಜಿ ಬಿಜೆಪಿ ಸಚಿವೆ ಮಾಯಾ ಕೋಡ್ನಾನಿ ಪರವಾಗಿ ಅಮಿತ್ ಶಾ ಇಂದು ನ್ಯಾಯಾಲಯದಲ್ಲಿ ಸಾಕ್ಷ್ಯ ಹೇಳಿದ್ದಾರೆ.
2002, ಫೆ.28 ರಂದು ನರೋಡಾ ಗಾಮ್ ಹತ್ಯಾಕಾಂಡ ನಡೆದ ದಿನ ಮಾಯಾ ಕೋಡ್ನಾನಿ ಬೆಳಿಗ್ಗೆ 8.30 ರ ಸುಮಾರಿಗೆ ರಾಜ್ಯ ವಿಧಾನಸಭೆಯಲ್ಲಿದ್ದರು. 11 ರಿಂದ 11.30 ರವರೆಗೆ ಸೋಲಾ ಸಿವಿಲ್ ಆಸ್ಪತ್ರೆಯಲ್ಲಿದ್ದರು ಎಂದು ಅಮಿತ್ ಶಾ ನ್ಯಾಯಾಲಯದ ಮುಂದೆ ಹೇಳಿದ್ದಾರೆ. ಎಸ್’ಐಟಿ ಸಲ್ಲಿಸಿದ ಚಾರ್ಜ್’ಶೀಟ್ ಪ್ರಕಾರ ಕೋಡ್ನಾನಿ 8.40 ಕ್ಕೆ ವಿಧಾನಸಭೆಯಿಂದ ನಿರ್ಗಮಿಸಿದ್ದು 9.30 ರ ವೇಳೆಗೆ ನರೋಡಾ ಗಾಮ್’ನಲ್ಲಿದ್ದರು. ಇದಕ್ಕೆ ಪೂರಕವಾಗಿ ಸಾಕಷ್ಟು ಜನ ಪ್ರತ್ಯಕ್ಷದರ್ಶಿಗಳನ್ನು ಎಸ್’ಐಟಿ ನ್ಯಾಯಾಲಯಕ್ಕೆ ಹಾಜರುಪಡಿಸಿದೆ. ಕೋಡ್ನಾನಿಯವರ ಮೊಬೈಲ್ ಸಿಗ್ನಲ್’ಗಳನ್ನು ಟ್ರಾಕ್ ಮಾಡಿದಾಗ 10.30 ವರೆಗೆ ಅವರು ನರೋಡಾದಲ್ಲೇ ಇದ್ದಾರೆ ಎಂದು ತಿಳಿದು ಬಂದಿದೆ. ಆದರೆ ಇಂದು ಕೋರ್ಟ್’ಗೆ ಹಾಜರಾದ ಅಮಿತ್ ಶಾ ಹತ್ಯಾಕಾಂಡ ನಡೆದಾಗ ಕೋಡ್ನಾನಿ ವಿಧಾನಸಭೆಯಲ್ಲಿದ್ದರು ಎಂದು ಅವರ ಪರವಾಗಿ ಸಾಕ್ಷ್ಯ ನುಡಿದಿದ್ದಾರೆ.
ನರೋಡಾ ಹತ್ಯಾಕಾಂಡದ ದಿನ ಬೆಳಿಗ್ಗೆ ಸೋಲಾ ಸಿವಿಲ್ ಆಸ್ಪತ್ರೆಗೆ ಘಟನೆಯಲ್ಲಿ ಮೃತಪಟ್ಟವರ ದೇಹವನ್ನು ತೆಗೆದುಕೊಂಡು ಬರುತ್ತಿದ್ದರು. ಆಗ ಕೋಡ್ನಾನಿಯವರು ಆಸ್ಪತ್ರೆಯಲ್ಲಿದ್ದರು. ನಾನು ಅವರನ್ನು ನೋಡಿದ್ದೇನೆ. ಈ ಸಂದರ್ಭದಲ್ಲಿ ಮೃತರ ಸಂಬಂಧಿಕರು ಸಿಟ್ಟುಗೊಂಡಿದ್ದರು. ಆಸ್ಪತ್ರೆಯಲ್ಲಿ ಉದ್ವಿಗ್ನ ವಾತಾವರಣ ನಿರ್ಮಾಣವಾಗಿತ್ತು. ಜನರ ಕಣ್ತಪ್ಪಿಸಿ ಪೊಲೀಸರು ಕೊಡ್ನಾನಿಯವರನ್ನು ತಮ್ಮ ವಾಹನದಲ್ಲಿ ಕರೆದೊಯ್ದರು ಎಂದು ಅಮಿತ್ ಶಾ ಹೇಳಿದ್ದಾರೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.