ಪ್ರತ್ಯೇಕ ಲಿಂಗಾಯತ ಧರ್ಮ ಘೋಷಣೆಗೆ ಡಿ. 31ರ ಗಡುವು ನೀಡಿದ ಮಾತೆ ಮಹಾದೇವಿ

By Suvarna Web DeskFirst Published Nov 19, 2017, 1:38 PM IST
Highlights

ಲಿಂಗಾಯತ ಧರ್ಮಕ್ಕೆ ಸ್ವತಂತ್ರ ಧರ್ಮ ಸ್ಥಾನಮಾನ ನೀಡುವಂತೆ ಆಗ್ರಹಿಸಿ ಬೆಂಗಳೂರಿನ ನ್ಯಾಷನಲ್ ಕಾಲೆಜು ಮೈದಾನದಲ್ಲಿ ಹಮ್ಮಿಕೊಂಡಿರುವ ಸಮಾವೇಶದಲ್ಲಿ ಸರ್ಕಾರದ ವಿರುದ್ಧ ಮಾತೆ ಮಹಾದೇವಿ ಮತ್ತೆ ಗುಡುಗಿದ್ದಾರೆ.

ಬೆಂಗಳೂರು: ಲಿಂಗಾಯತ ಧರ್ಮಕ್ಕೆ ಸ್ವತಂತ್ರ ಧರ್ಮ ಸ್ಥಾನಮಾನ ನೀಡುವಂತೆ ಆಗ್ರಹಿಸಿ ಬೆಂಗಳೂರಿನ ನ್ಯಾಷನಲ್ ಕಾಲೆಜು ಮೈದಾನದಲ್ಲಿ ಹಮ್ಮಿಕೊಂಡಿರುವ ಸಮಾವೇಶದಲ್ಲಿ ಸರ್ಕಾರದ ವಿರುದ್ಧ ಮಾತೆ ಮಹಾದೇವಿ ಮತ್ತೆ ಗುಡುಗಿದ್ದಾರೆ.

ವೀರಶೈವರು ಲಿಂಗಾಯತರು ಒಮ್ಮತಕ್ಕೆ ಬರಲಿ ಎನ್ನುತ್ತಿದ್ದಾರೆ ಸಿಎಂ, ಆದರೆ ವೀರಶೈವರು ಲಿಂಗಾಯತರು ಮಧ್ಯೆ ಒಮ್ಮತ ಸಾಧ್ಯವಿಲ್ಲ. ಒಮ್ಮತಕ್ಕೆ ಬೆಲೆ ಕೊಡಬೇಡಿ ಬಹುಮತಕ್ಕೆ ಬೆಲೆ ಕೊಡಿ. ಪ್ರತ್ಯೇಕ ಧರ್ಮದ ವಿಚಾರದಲ್ಲಿ ಬಿಎಸ್​ವೈ ಮೌನ ಅಚ್ಚರಿ ತಂದಿದೆ ಎಂದು ಹೇಳಿದ ಅವರು, ಈ ವಿವಾದವನ್ನು ಡಿಸೆಂಬರ್ ಅಂತ್ಯದೊಳಗೆ ಬಗೆಹರಿಸಲು ಗಡುವು ನೀಡಿದ್ದಾರೆ.  

ವೀರಶೈವ ಅನ್ನುವಂತದ್ದು ಶೈವರ ಒಂದು ಶಾಖೆ. ವೀರಶೈವರದ್ದು ಆಗಮಶಾಸ್ತ್ರಕ್ಕೆ ಸಂಬಂಧಿಸಿದ್ದು, ಲಿಂಗಾಯತ ಧರ್ಮ ವಚನಗಳಿಂದ ಜನ್ಮ ಪಡೆದದ್ದು. ಲಿಂಗಾಯತ ವರ್ಣಾಶ್ರಮಕ್ಕೆ ಸೇರಿದ್ದಲ್ಲ, ಜಾತ್ಯಾತೀತವಾದದ್ದು. ಗೋಳಾಕಾರದ ಲಿಂಗವನ್ನು ಪೂಜಿಸುವವರು ನಾವು. ದೇವಸ್ಥಾನದ ಶಿವ ಲಿಂಗ ಪೂಜೆ ಮಾಡುವುದಿಲ್ಲ. ನಮ್ಮ ಧರ್ಮ ಇಡೀ ಜಗತ್ತಿಗೇ ತಿಳಿಯಬೇಕು ಎಂದು ಅವರು ಹೇಳಿದ್ದಾರೆ.

ದೇವರಿಗೆ ಕನ್ನಡ ಕಲಿಸಿದವರು ಬಸವಣ್ಣನವರು. ಆ ಕನ್ನಡ ಭಾಷೆಯಲ್ಲೇ ಧರ್ಮ ಕಟ್ಟಿದ್ದಾರೆ. ಸ್ವಾತಂತ್ರ್ಯ ಪೂರ್ವದಲ್ಲಿ ಲಿಂಗಾಯತ ಧರ್ಮ ಸ್ವಾತಂತ್ರ್ಯ ಧರ್ಮವಾಗಿತ್ತು. ಬ್ರಿಟಿಷರು ಕೂಡ ಪ್ರತ್ಯೇಕ ಧರ್ಮ ಅಂತ ಗುರುತಿಸಿ, ಜನಗಣತಿ ಕೂಡ ಮಾಡುತ್ತಿದ್ದರು. ಮೈಸೂರಿನಲ್ಲಿ ಕೆಲ ವೀರಶೈವರು ಮಹಾರಾಜರಿಗೆ ಮನವಿ ಮಾಡೋ ಮೂಲಕ, ಹಿಂದೂ ಲಿಂಗಾಯತ ಅಂತ ಸೇರಿಸಿದರು. ಈ ಅನ್ಯಾಯ ಸರಿಪಡಿಸಲು ಹೋರಾಟ ನಡೆಯುತ್ತಿದೆ ಎಂದು ಅವರು ಹೇಳಿದ್ದಾರೆ.

ವೀರಶೈವ ಅಂತ ಹೇಳಿಕೊಳ್ಳಿ, ಆದರೆ ವೀರಶೈವ ಲಿಂಗಾಯತ ಅಂತ ಹೇಳಿಕೊಳ್ಳೋದಕ್ಕೆ ನಮ್ಮ ವಿರೋಧವಿದೆ. ಒಂದು ಮಗು ಹುಟ್ಟಿದರೆ, ಅದು ಗಂಡಾಗಿರಬೇಕು ಇಲ್ಲ ಹೆಣ್ಣಾಗಿರಬೇಕು, ಎಂದು ವೀರಶೈವ ಲಿಂಗಾಯತರಿಗೆ ಟಾಂಗ್ ನೀಡಿದ್ದಾರೆ.

ಲಿಂಗಾಯತ ಪ್ರತ್ಯೇಕ ಧರ್ಮ ರಾಜಕೀಯ ಸೋಂಕಿನಿಂದ ಕೂಡಿಲ್ಲ, ರಾಜಕೀಯ ಉದ್ದೇಶಕ್ಕಾಗಿ ಪ್ರತ್ಯೇಕ ಧರ್ಮ ಕೇಳುತ್ತಿಲ್ಲ ಎಂದು ಹೇಳಿದ ಮಾತೆ ಮಹಾದೇವಿ,  ಗುರಿ ಮುಟ್ಟುವ ತನಕ ನಮ್ಮ ಈ ಚಳವಳಿ ಮುಂದುವರೆಯುತ್ತೆ ಎಂದು ಎಚ್ಚರಿಸಿದ್ದಾರೆ.

ಬೀದರ್, ಮಹಾರಾಷ್ಟ್ರದ ಲಾತೂರು, ಕಲಬುರ್ಗಿ ಹಾಗೂ ಹುಬ್ಬಳ್ಳಿಯಲ್ಲಿ ಸ್ವತಂತ್ರ ಧರ್ಮ ನೀಡುವಂತೆ ಒತ್ತಾಯಿಸಿ ನಡೆದ ರ್ಯಾಲಿಯಿಂದ ಉತ್ತೇಜಿತರಾಗಿರುವ ಮುಖಂಡರು ನಗರದ ಬಸವನಗುಡಿಯ ನ್ಯಾಷನಲ್ ಕಾಲೇಜು ಮೈದಾನದಲ್ಲಿ ಲಿಂಗಾಯತ ಧರ್ಮೀಯರ ರಾಷ್ಟ್ರೀಯ ಸಮಾವೇಶ ಆಯೋಜಿಸಿದ್ದಾರೆ.

click me!