ರಾಜೀವ್ ಗಾಂಧಿ ರೀತಿ ಮೋದಿ, ಅಮಿತ್ ಶಾ ಹತ್ಯೆಗೆ ಸಂಚು

By Web DeskFirst Published Aug 29, 2018, 9:03 AM IST
Highlights

ಪುಣೆ ಪೊಲೀಸರಿಂದ ದೇಶದ ವಿವಿಧ ನಗರಗಳಲ್ಲಿ ದಾಳಿ | ನಕ್ಸಲ್ ಪರ ಚಿಂತಕ, ಪ್ರಗತಿಪರರ ಬಂಧನ | ಕೋರೆಗಾಂವ್ ಹಿಂಸೆಗೆ ಪ್ರಚೋದನೆ ಹಿನ್ನೆಲೆಯಲ್ಲಿ ದಾಳಿ | ಸೆರೆಗೆ ಅರುಂಧತಿ ರಾಯ್, ಗುಹಾ ಖಂಡನೆ

ನವದೆಹಲಿ (ಆ. 29): ಮಾಜಿ ಪ್ರಧಾನಿ ರಾಜೀವ್ ಗಾಂಧಿ ರೀತಿ ಹಾಲಿ ಪ್ರಧಾನಿ ನರೇಂದ್ರ ಮೋದಿ, ಬಿಜೆಪಿ ಅಧ್ಯಕ್ಷ ಅಮಿತ್ ಶಾ ಹಾಗೂ ಕೇಂದ್ರ ಗೃಹ ಸಚಿವ ರಾಜನಾಥ ಸಿಂಗ್ ಅವರ ಹತ್ಯೆಗೆ ಸಂಚು ರೂಪಿಸಲು ಯತ್ನಿಸಿದ ಆರೋಪದ ಮೇರೆಗೆ ಹಾಗೂ ಭೀಮಾ-ಕೋರೆಗಾಂವ್ ಹಿಂಸೆಗೆ ಪ್ರಚೋದಿಸಿದ ಆರೋಪದ ಮೇರೆಗೆ ಮಾವೋವಾದಿ ನಕ್ಸಲ್ ಸಿದ್ಧಾಂತದ ಪ್ರತಿಪಾದಕ, ತೆಲುಗಿನ ಕ್ರಾಂತಿಕಾರಿ ಕವಿ ವರವರ ರಾವ್, ಕಾರ್ಮಿಕ ಹಕ್ಕುಗಳ ಹೋರಾಟಗಾರ್ತಿ ಸುಧಾ ಭಾರದ್ವಾಜ್ ಸೇರಿಂದಂತೆ ಐವರನ್ನು ಪುಣೆ ಪೊಲೀಸರು ಮಂಗಳವಾರ ಬಂಧಿಸಿದ್ದಾರೆ.

"

ದೇಶದ 6 ರಾಜ್ಯಗಳಲ್ಲಿ ಏಕಕಾಲದಲ್ಲಿ ಕಾರ್ಯಾರಚಣೆ ನಡೆಸಿ ಕ್ರಮ ಜರುಗಿಸಲಾಗಿದೆ. ಇದರ ಬೆನ್ನಲ್ಲೇ ಬಂಧಕ್ಕೆ ಆಕ್ರೋಶ ವ್ಯಕ್ತವಾಗಿದ್ದು, ಪ್ರಗತಿಪರ ಹಾಗೂ ಎಡಪಂಥೀಯ ಚಿಂತಕರು ಈ ಬಂಧನಗಳನ್ನು ಖಂಡಿಸಿದ್ದಾರೆ. ‘ದೇಶದಲ್ಲಿ ಅಘೋಷಿತ ತುರ್ತುಸ್ಥಿತಿ ನಿರ್ಮಾಣವಾಗಿದೆ’ ಎಂದು ಕಿಡಿಕಾರಿದ್ದಾರೆ.

ವರವರವಾವ್ ಅವರನ್ನು ಹೈದರಾಬಾದ್‌ನಲ್ಲಿ, ಸುಧಾ ಭಾರದ್ವಾಜ್ ಅವರನ್ನು ಫರೀದಾಬಾದ್‌ನಲ್ಲಿ ಬಂಧಿಸಲಾಗಿದೆ. ಇನ್ನು ಪ್ರಗತಿಪರ ಚಿಂತಕರಾದ ಅರುಣ್ ಫೆರೀರಾ, ವೆರ್ನನ್ ಗೊನ್ಸಾಲ್ವಿಸ್ ಅವರನ್ನು ಮುಂಬೈನಲ್ಲಿ ಹಾಗೂ ಗೌತಮ್ ನವಲಖ ಅವರನ್ನು ದಿಲ್ಲಿಯಲ್ಲಿ ಬಂಧಿಸಲಾಗಿದೆ. 

ಇನ್ನೂ ಹಲವರನ್ನು ವಿಚಾರಣೆಗೆ ವಶಕ್ಕೆ ತೆಗೆದುಕೊಳ್ಳಲಾಗಿದ್ದು, ಅವರನ್ನು ಇನ್ನೂ ಬಂಧಿಸಿಲ್ಲ.  ಭೀಮಾ- ಕೋರೆಗಾಂವ್ ಸಮರದ 200 ನೇ ವರ್ಷಾಚರಣೆ ವೇಳೆ ಕಳೆದ ಜನವರಿಯಲ್ಲಿ ನಡೆದಿದ್ದ ಹಿಂಸಾಚಾರ ಸಂಬಂಧ ತನಿಖೆ ನಡೆಸುತ್ತಿರುವ ಪುಣೆ ಪೊಲೀಸರು, ಮಂಗಳವಾರ ದೆಹಲಿ, ಫರೀದಾಬಾದ್, ಗೋವಾ, ಮುಂಬೈ, ಥಾಣೆ, ರಾಂಚಿ ಹಾಗೂ ಹೈದರಾಬಾದ್‌ನಲ್ಲಿ ದಾಳಿ ನಡೆಸಿದ್ದಾರೆ.  ಹಲವು ದಾಖಲೆಗಳನ್ನು ವಶಕ್ಕೆ ತೆಗೆದುಕೊಂಡಿದ್ದಾರೆ.

ವ್ಯಾಪಕ ಖಂಡನೆ:

ಹೋರಾಟಗಾರರ ಬಂಧನವನ್ನು ಸಾಹಿತಿ ಹಾಗೂ ಹೋರಾಟಗಾರ್ತಿ ಅರುಂಧತಿ ರಾಯ್ ಖಂಡಿಸಿದ್ದಾರೆ. ಜನರನ್ನು ಬಡಿದುಕೊಲ್ಲುವ ತಂಡಗಳನ್ನು ಸೃಷ್ಟಿ ಮಾಡುವವರು ಹಾಗೂ ಹಾಡಹಗಲೇ ಜನರನ್ನು ಹತ್ಯೆ ಮಾಡುವವರ ಮೇಲೆ ದಾಳಿ ನಡೆಯಬೇಕಿತ್ತು. ಇಂದಿನ ದಾಳಿಗಳನ್ನು ಗಮನಿಸಿದರೆ ದೇಶ ಎತ್ತ ಸಾಗುತ್ತಿದೆ ಎಂಬುದು ಸ್ಪಷ್ಟವಾಗಿ ಗೊತ್ತಾಗುತ್ತಿದೆ. ಕೊಲೆಗಡುಗರನ್ನು ಗೌರವಿಸಿ, ಸಂಭ್ರಮಿಸಲಾಗುತ್ತಿದೆ.

ನ್ಯಾಯದ ಬಗ್ಗೆ ಅಥವಾ ಹಿಂದು ಪಾರಮ್ಯದ ವಿರುದ್ಧ ಮಾತನಾಡಿದರೆ, ಅಂಥವರನ್ನು ಕ್ರಿಮಿನಲ್‌ಗಳನ್ನಾಗಿಸಲಾಗುತ್ತಿದೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಇನ್ನು ಇತಿಹಾಸಕಾರ ರಾಮಚಂದ್ರ ಗುಹಾ ಪ್ರತಿಕ್ರಿಯಿಸಿ, ‘ಮಹಾತ್ಮಾ ಗಾಂಧೀಜಿ ಈಗ ಬದುಕಿದ್ದರೆ ಅವರನ್ನೂ ಬಂಧಿಸಲಾಗುತ್ತಿತ್ತು’ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ದೇಶದಲ್ಲಿ ಭಯದ ವಾತಾವರಣ ನಿರ್ಮಾಣವಾಗುತ್ತಿದೆ ಎಂದು ‘ಆ್ಯಮ್ನೆಸ್ಟಿ ಇಂಟರ್‌ನ್ಯಾಷನಲ್’ ಟೀಕಿಸಿದೆ. ಎಡಪಕ್ಷಗಳು ಕೂಡ ಬಂಧನವನ್ನು ತೀವ್ರವಾಗಿ ಖಂಡಿಸಿವೆ. ಕಾಂಗ್ರೆಸ್ ಆಧ್ಯಕ್ಷ ರಾಹುಲ್ ಗಾಂಧಿ ‘ಭಾರತದಲ್ಲಿ ಆರೆಸ್ಸೆಸ್ ಬಿಟ್ರೆ ಬೇರೆ ಸಂಸ್ಥೆಗೆ ಅವಕಾಶವಿಲ್ಲ. ಇದು ಹೊಸ ಭಾರತ’ ಎಂದಿದ್ದರೆ, ಎಡಪಕ್ಷಗಳು ಕೂಡ ಬಂಧನವನ್ನು ಖಂಡಿಸಿವೆ.

click me!