ರಸ್ತೆ ಮಾಡಿ ಒಂದು ವರ್ಷವಾಗಿಲ್ಲ : ಸಾಲು ಸಾಲು ಹೊಂಡಗಳು

Published : Nov 23, 2017, 09:49 AM ISTUpdated : Apr 11, 2018, 01:08 PM IST
ರಸ್ತೆ ಮಾಡಿ ಒಂದು ವರ್ಷವಾಗಿಲ್ಲ : ಸಾಲು ಸಾಲು ಹೊಂಡಗಳು

ಸಾರಾಂಶ

ನಗರೋತ್ಥಾನದ ಎರಡನೇ ಹಂತದ ಯೋಜನೆಯಡಿ ಸುಮಾರು 25 ಕೋಟಿ ರುಪಾಯಿ ವೆಚ್ಚದಲ್ಲಿ ಕೈಗೆತ್ತಿಕೊಳ್ಳಲಾದ ರಸ್ತೆಗಳು ಹೆಚ್ಚು ಕಡಿಮೆ ಒಂದೇ ವರ್ಷದಲ್ಲಿ ಹಾಳಾಗಿ ಹೋಗಿವೆ. ಈ ರಸ್ತೆಗಳು ಹೆಚ್ಚಾಗಿ ಗುಂಡಿ ಬಿದ್ದಿದ್ದು ಗುತ್ತಿಗೆದಾರ ಓಡಿ ಹೋಗಿರುವುದರಿಂದ ನಿರ್ವಹಣೆ ಸಾಧ್ಯವಾಗದೇ ಹೋಗಿದೆ.

ಚಿತ್ರದುರ್ಗ(ನ.23): ಚಿತ್ರದುರ್ಗ ನಗರದಲ್ಲಿ ಹೊಸದಾಗಿ ರಸ್ತೆ ಕಾಮಗಾರಿ ಕೈಗೆತ್ತಿಕೊಳ್ಳುವ ಹಾಗೂ ಗುಂಡಿ ಬಿದ್ದ ರಸ್ತೆಗಳನ್ನು ಮುಚ್ಚುವ ಕೆಲಸ ಸದ್ಯಕ್ಕೆ ಆರಂಭವಾದಂತೆ ಕಾಣಿಸುತ್ತಿಲ್ಲ. ಕುಂಟು ನೆಪಗಳ ಮುಂದಿಟ್ಟುಕೊಂಡು ಕಳೆದ ಒಂದು ವರ್ಷದಿಂದ ಕಾಮಗಾರಿ ಆರಂಭದ ಕಾರ್ಯ ಮುಂದೂಡುತ್ತಿರುವ ಅಧಿಕಾರಿಗಳು ಒಂದೆಡೆಯಾದರೆ, ನಿತ್ಯ ತಗ್ಗು ಗುಂಡಿಗಳಲ್ಲಿ ಬಿದ್ದು ಮೇಲೆದ್ದು ಹೋಗುವ ಹೈರಾಣಾದ ನಾಗರಿಕರು ಮತ್ತೊಂದೆಡೆ. ಜಿಲ್ಲಾ ಉಸ್ತುವಾರಿ ಸಚಿವ ಎಚ್. ಆಂಜನೇಯ ಮೊದಲು ಗುಂಡಿಗಳ ಮುಚ್ಚಿ ಎಂದು ನಗರಸಭೆ ಪೌರಾಯುಕ್ತರಿಗೆ ಖಡಕ್ ಸೂಚನೆ ನೀಡಿ ಹದಿನೈದು ದಿನ ಕಳೆದರೂ ಪಾಲನೆ ಆಗದಷ್ಟರ ಮಟ್ಟಿಗೆ ವಾತಾವರಣ ಜಡ್ಡುಗಟ್ಟಿ ಹೋಗಿದೆ.

ನಗರೋತ್ಥಾನದ ಎರಡನೇ ಹಂತದ ಯೋಜನೆಯಡಿ ಸುಮಾರು 25 ಕೋಟಿ ರುಪಾಯಿ ವೆಚ್ಚದಲ್ಲಿ ಕೈಗೆತ್ತಿಕೊಳ್ಳಲಾದ ರಸ್ತೆಗಳು ಹೆಚ್ಚು ಕಡಿಮೆ ಒಂದೇ ವರ್ಷದಲ್ಲಿ ಹಾಳಾಗಿ ಹೋಗಿವೆ. ಈ ರಸ್ತೆಗಳು ಹೆಚ್ಚಾಗಿ ಗುಂಡಿ ಬಿದ್ದಿದ್ದು ಗುತ್ತಿಗೆದಾರ ಓಡಿ ಹೋಗಿರುವುದರಿಂದ ನಿರ್ವಹಣೆ ಸಾಧ್ಯವಾಗದೇ ಹೋಗಿದೆ. ನಿತ್ಯ ಗುಂಡಿಗಳು ವಾಹನ ಚಾಲಕರಿಗೆ ಅಪಾಯದ ಆಹ್ವಾನ ನೀಡುತ್ತಿವೆ. ಚಿತ್ರದುರ್ಗ ನಗರದ ರಸ್ತೆ ಅಭಿವೃದ್ದಿಗೆ ಸಂಬಂಧಿಸಿದಂತೆ ಶಾಸಕ ತಿಪ್ಪಾರೆಡ್ಡಿ ಬೆಳಗಾವಿ ಅಧಿವೇಶನದಲ್ಲಿ ಪ್ರಶ್ನೆ ಕೇಳಿದ್ದು ಸಚಿವ ಈಶ್ವರ ಖಂಡ್ರೆ ನೀಡಿರುವ ಉತ್ತರಗಳು ಇಡೀ ವ್ಯವಸ್ಥೆ ಹದಗೆಟ್ಟು ಹೋಗಿರುವುದನ್ನು ರಾಚಿಸಿದೆ. ಅನುದಾನ, ಕಳಪೆ ಕಾಮಗಾರಿ, ಅಧಿಕಾರಿಗಳ ಮೇಲೆ ಶಿಸ್ತು ಕ್ರಮ ಕೈಗೊಂಡ ಬಗ್ಗೆ ತಿಪ್ಪಾರೆಡ್ಡಿ ಕೇಳಿದ ಪ್ರಶ್ನೆಗಳನ್ನು ಸರ್ಕಾರ ಮೌನ ದಿಂದಲೇ ಸ್ವೀಕರಿಸಿದೆ.

ಕಳಪೆ ಆಗಿರುವುದನ್ನು ಒಪ್ಪಿಕೊಂಡಿದೆ. ನಗರೋತ್ಥಾನ ಹಂತ ಎರಡರಲ್ಲಿ ಚಿತ್ರದುರ್ಗ ನಗರಸಭೆಗೆ 30 ಕೋಟಿ ರುಪಾಯಿ ಅನುದಾನ ಬಿಡುಗಡೆಯಾಗಿದ್ದು 25 ಕೋಟಿ ರುಪಾಯಿ ಖರ್ಚು ಮಾಡಲಾಗಿದೆ. ಕ್ರಿಯಾಯೋಜನೆಯಲ್ಲಿ 28 ಕಾಮಗಾರಿಗಳು ಅನುಮೋದನೆಯಾಗಿದ್ದು 19 ಪೂರ್ಣಗೊಂಡಿವೆ. 9 ಪ್ರಗತಿಯಲ್ಲಿವೆ. ಎಲ್ಲ ಕಾಮಗಾರಿಗಳು ಕಳಪೆಯಿಂದ ಕೂಡಿರುವುದು ಸರ್ಕಾರದ ಗಮನಕ್ಕೆ ಬಂದಿದೆ ಎಂದು ಸಚಿವ ಈಶ್ವರ ಖಂಡ್ರೆ ಶಾಸಕ ತಿಪ್ಪಾರೆಡ್ಡಿ ಅವರ ಪ್ರಶ್ನೆಗೆ ಉತ್ತರ ನೀಡಿದ್ದಾರೆ. ನಗರೋತ್ಥಾನದ ಎರಡನೇ ಹಂತದ ಕಾಮಗಾರಿ ಅನುಷ್ಠಾನಗೊಳಿಸುವಾಗ ಪರಿಮಾಣ ಹಾಗೂ ಗುಣಮಟ್ಟವನ್ನು ಕಾಪಾಡಲು ವಿಫಲರಾದ ಕಾರ್ಯಪಾಲಕ ಎಂಜಿನಿಯರ್ ಮರಡಿ ರಂಗಪ್ಪ, ಸಹಾಯಕ

ಕಾರ್ಯಪಾಲಕ ಇಂಜಿನಿಯರ್‌'ಗಳಾದ ಎಸ್.ಎಸ್. ಬಿರದಾರ, ಕೆ.ಎನ್ ಸ್ವಾಮಿ, ಸಹಾಯಕ ಎಂಜಿನಿಯರ್ ಎಚ್.ಎಂ. ರಂಗನಾಥ್, ಕಿರಿಯ ಎಂಜಿನಿಯರ್ ಶೃತಿ ಅವರನ್ನು ಸೇವೆಯಿಂದ ಅಮಾನತು ಪಡಿಸಲಾಗಿದೆ. ಇವರ ಮೇಲಿನ ಇಲಾಖಾ ವಿಚಾರಣೆ ಕಾಯ್ದಿರಿಸಿ ನಂತರ ಸೇವೆಗೆ ಮರು ಸೇರ್ಪಡೆ ಮಾಡಿಕೊಳ್ಳಲಾಗಿದೆ.

ಗುತ್ತಿಗೆದಾರರ ವಿರುದ್ಧ ಕ್ರಮ ಕೈಗೊಳ್ಳಲು ಶಿಫಾರಸು ಮಾಡಲಾಗಿದೆ ಎಂದು ಸಚಿವರು ಉತ್ತರಿಸಿದ್ದಾರೆ. ಸರ್ಕಾರದ 25 ಕೋಟಿ ರುಪಾಯಿ ಹಣ ಖರ್ಚು ಆಗಿರುವುದ ಬಿಟ್ಟರೆ ಇಡೀ ವ್ಯವಸ್ಥೆ ಎಂದಿನಂತೆ ಯಥಾಸ್ಥಿತಿಯಲ್ಲಿದೆ ಎಂಬುದು ಸಚಿವ ಖಂಡ್ರೆ ನೀಡಿದ ಉತ್ತರದಿಂದ ಸಾಬೀತಾಗಿದೆ. ಆದರೆ ಚಿತ್ರದುರ್ಗದ ರಸ್ತೆಗಳು ಮಾತ್ರ ಸುಧಾರಣೆಯಾಗಿಲ್ಲ, ನಗರೋತ್ಥಾನದ ಅಡಿ ಕೈಗೆತ್ತಿಕೊಳ್ಳಲಾದ ರಸ್ತೆ ಅಭಿವೃದ್ಧಿ ಕಾಮಗಾರಿಗಳನ್ನು ಹಠಕ್ಕೆ ಬಿದ್ದು ಕಳಪೆಗಳನ್ನಾಗಿ ಮಾಡಿದಂತಿದೆ. ನಗರದ ಗಾಯತ್ರಿ ಸರ್ಕಲ್ ನಿಂದ ಜೆಸಿಆರ್ ಬಡಾವಣೆಗೆ ಹೋಗುವ ಮಾರ್ಗದಲ್ಲಿ ಅರಣ್ಯ ಇಲಾಖೆ ಕಚೇರಿ ತಿರುವಿನಲ್ಲಿ ಈ ಮೊದಲು ಫೈಬರ್ ಹಂಪ್ಸ್ (ರಸ್ತೆ ಉಬ್ಬುಗಳು) ಹಾಕಲಾಗಿತ್ತು. ನಗರೋತ್ಥಾನದ ಅಡಿ ಈ ರಸ್ತೆ ಅಭಿವೃದ್ಧಿ ಕೈಗೆತ್ತಿಕೊಂಡಾಗ ಈ ಫೈಬರ್ ಹಂಪ್ಸ್ ಗಳನ್ನು ಕಿತ್ತು ಅದರ ಮೇಲೆ ರಸ್ತೆ ಮಾಡಬೇಕೆಂಬ ಕನಿಷ್ಠ ತಿಳಿವಳಿಕೆ ಗುತ್ತಿಗೆದಾರರು ಹಾಗೂ ಎಂಜಿನಿಯರ್'ಗಳಿಗೆ ಬಂದಂತೆ ಕಂಡಿಲ್ಲ.

ಫೈಬರ್ ಹಂಪ್ಸ್ ಮೇಲೆಯೇ ಡಾಂಬರ್ ಎಳೆದುಕೊಂಡು ಹೋಗಿದ್ದಾರೆ. ಪರಿಣಾಮ ಈ ಜಾಗದಲ್ಲಿ ರಸ್ತೆ ಗುಂಡಿ ಬಿದ್ದಿದ್ದು ದ್ವಿಚಕ್ರ ವಾಹನ ಸವಾರರು ನಿತ್ಯ ಎದ್ದು ಬಿದ್ದು ಹೋಗುತ್ತಿದ್ದಾರೆ. ಇದೇ ರಸ್ತೆಯಲ್ಲಿ ಹತ್ತಕ್ಕೂ ಹೆಚ್ಚು ದೊಡ್ಡ ಪ್ರಮಾಣದ ಗುಂಡಿಗಳು ಬಿದ್ದಿದ್ದು ನಾಗರಿಕರು ಈ ಗುಂಡಿಗಳ ಬಳಿ ದೊಡ್ಡದಾದ ಸೈಜುಗಲ್ಲುಗಳನ್ನಿಟ್ಟು ದ್ವಿಚಕ್ರ ವಾಹನ ಚಾಲಕರ ನೆರವಿಗೆ ಧಾವಿಸಿದ್ದಾರೆ.

ಕನಿಷ್ಠ ಗುಂಡಿಗಳನ್ನಾದರೂ ಮುಚ್ಚೋಣ ಎಂಬ ಕಾಳಜಿ ನಗರಸಭೆ ತೋರಿಲ್ಲ. ನವೆಂಬರ್ ಒಂದರಂದು ನಡೆದ ರಾಜ್ಯೋತ್ಸವ ಸಮಾರಂಭದ ವೇಳೆ ವಾರದೊಳಗೆ ಚಿತ್ರದುರ್ಗದ ಎಲ್ಲ ಗುಂಡಿ ಗಳನ್ನು ಮುಚ್ಚಲಾಗುವುದು. ನಗರೋತ್ಥಾನದ ಮೂರನೇ ಹಂತದ ಕಾಮಗಾರಿ ಆರಂಭಿಸಲಾಗುವುದೆಂದು ಸಚಿವ ಆಂಜನೇಯ ಹೇಳಿದ್ದರು. ಮೂರನೇ ಹಂತದ ಕಾಮಗಾರಿ ಒತ್ತಟ್ಟಿಗಿರಲಿ, ಬಿದ್ದ ಗುಂಡಿಗಳನ್ನಾದರೂ ಮುಚ್ಚಿದರೆ ಸಚಿವರ ಮಾತಿಗೆ ತೂಕ ಬರುತ್ತದೆ ಎಂಬುದು ನಾಗರಿಕರ ಅಂಬೋಣ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

ಅಟಲ್‌ಜೀ ಹಾಕಿದ ಬುನಾದಿಯ ಮೇಲೆ ನಿಂತ ವಿಕಸಿತ ಭಾರತ: ಬಿ.ವೈ.ವಿಜಯೇಂದ್ರ
ಚಿತ್ರದುರ್ಗ ಬಸ್‌ ದುರಂತ, ಕಣ್ಣು ಬಿಟ್ಟಾಗ ಸುತ್ತಲೂ ಬೆಂಕಿಯ ಜ್ವಾಲೆ! ಗಾಯಾಳು ಕಿರಣ್ ಬಿಚ್ಚಿಟ್ಟ ಭಯಾನಕ ಅನುಭವ