
ಶಿವಮೊಗ್ಗ(ನ.23): ದೇಶದ ಪವಿತ್ರ ಸಂವಿಧಾನವನ್ನು ಅವಮಾನಿಸಿ ದೇಶದ್ರೋಹಿ ಹೇಳಿಕೆ ನೀಡಿರುವ ಬಿಜೆಪಿ ವಕ್ತಾರ ಗೊ.ಮಧುಸೂದನ್ ವಿರುದ್ಧ ಪರಿಶಿಷ್ಟ ಜಾತಿ ದೌರ್ಜನ್ಯ ವಿರೋಧಿ ಕಾಯ್ದೆಯಡಿ ಕ್ರಿಮಿನಲ್ ಕೇಸ್ ದಾಖಲಿಸಿ ಶಿಕ್ಷೆಗೆ ಒಳಪಡಿಸಬೇಕೆಂದು ಒತ್ತಾಯಿಸಿ ಕರ್ನಾಟಕ ದಲಿತ ಸಂಘರ್ಷ ಸಮಿತಿ, ಕರ್ನಾಟಕ ದಲಿತ ನೌಕರರ ಒಕ್ಕೂಟದಿಂದ ಬುಧವಾರ ಜಿಲ್ಲಾಧಿಕಾರಿ ಕಚೇರಿ ಎದುರು ಪ್ರತಿಭಟನೆ ನಡೆಯಿತು.
ಸಂವಿಧಾನ ಶಿಲ್ಪಿ ಡಾ. ಅಂಬೇಡ್ಕರ್ ವಿರಚಿತ ಭಾರತದ ಸಂವಿಧಾನವನ್ನು ಗೋ. ಮಧುಸೂದನ್ ತಾನು ಒಪ್ಪುವುದಿಲ್ಲವೆಂದು ಹೇಳುವ ಮೂಲಕ ದೇಶದ್ರೋಹ ಮೆರೆದಿದ್ದಾರೆ. ಆ ಮುಖಾಂತರ ಭಾರತದ ಸಂವಿಧಾನವನ್ನು ಅವಮಾನಿಸಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು. ಸಂವಿಧಾನ ದೇಶದ ನಾಗರಿಕರ ಪಾಲಿಗೆ ಅತ್ಯಂತ ಶ್ರೇಷ್ಟ ಮತ್ತು ಪವಿತ್ರವಾದ ಗ್ರಂಥವಾಗಿದೆ. ಪ್ರತಿಯೊಬ್ಬ ಭಾರತೀಯರು ಸಂವಿಧಾನ ಗೌರವಿಸ ಬೇಕಾದ್ದು ಕರ್ತವ್ಯವಾಗಿದೆ. ಸಂವಿಧಾನದ ಕಾರಣದಿಂದಲೇ ದೇಶ ಅಖಂಡ ಭಾರತವಾಗಿ ಉಳಿದಿದೆ. ಧರ್ಮಾತೀತ, ಜಾತ್ಯಾತೀತವಾಗಿ ನಾವೆಲ್ಲರೂ ಬದುಕುತ್ತಿದ್ದೇವೆ ಎಂದು ಹೇಳಿದರು. ಸರ್ವರಿಗೂ ಸಮಾನತೆ, ಸ್ವಾತಂತ್ರ್ಯ ಮತ್ತು ಸಹೋದರತೆಯನ್ನು ನೀಡಿರುವ ಸಂವಿಧಾನದಿಂದಲೇ ಸರ್ಕಾರದ ಎಲ್ಲ ಹಂತದ ಸಾಂವಿಧಾನಿಕ ಹುದ್ದೆಗಳು ಸೃಷ್ಟಿಯಾಗಿದೆ.
ಭಾರತೀಯರ ಅಸ್ತಿತ್ವವೇ ಸಂವಿಧಾನ ದಲ್ಲಿದೆ.ಗೋ. ಮಧುಸೂದನ್ ಇಂತಹ ಹೇಳಿಕೆ ನೀಡಿದ್ದು ಎಳ್ಳಷ್ಟು ಸರಿಯಲ್ಲ ಎಂದು ತಿಳಿಸಿದರು. ಸಂವಿಧಾನದ ಅನುಸಾರವಾಗಿಯೇ ಇರುವ ಎಂಎಲ್‌ಸಿ ಹುದ್ದೆಯಲ್ಲಿ ಹಲವು ವರ್ಷಗಳ ಕಾಲ ಅಧಿಕಾರ ಅನುಭವಿಸಿದ ಮಧುಸೂದನ್ ಸಾಮಾಜಿಕ, ರಾಜಕೀಯವಾಗಿ ಮಾನ, ಸಮ್ಮಾನಗಳನ್ನು ಪಡೆದಿರುವುದು ಸಂವಿಧಾನದ ಕಾರಣದಿಂದ. ಇಂತಹ ಜವಾಬ್ದಾರಿಯುತ ಸ್ಥಾನದಲ್ಲಿದ್ದ ಮಧುಸೂದನ್ ಭಾರತ ಸಂವಿಧಾನವನ್ನು ಒಪ್ಪುವುದಿಲ್ಲ ಎಂದು ಹೇಳಿರುವುದು ಶಿಕ್ಷಾರ್ಹ ಅಪರಾಧ, ದೇಶದ್ರೋಹವಾಗಿದೆ ಎಂದು ತಿಳಿಸಿದರು. ದಸಂಸ ರಾಜ್ಯ ಸಂಚಾಲಕ ಎಂ. ಗುರುಮೂರ್ತಿ, ಶಿವಬಸಪ್ಪ, ಹರಿಗೆ ರವಿ, ಎನ್. ಮಂಜುನಾಥ್, ಟಿ.ಎಚ್.ಹಾಲೇಶಪ್ಪ, ಎಂ.ರಮೇಶ್, ರೇವಪ್ಪ ಮೊದಲಾದವರು ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.