
ಪಣಜಿ, [ಅ.28]: ಕಳೆದ ಹಲವು ತಿಂಗಳುಗಳಿಂದ ಅನಾರೋಗ್ಯಪೀಡಿತರಾಗಿರುವ ಗೋವಾ ಮುಖ್ಯಮಂತ್ರಿ ಮನೋಹರ ಪರಿಕ್ಕರ್ ಅವರು ಮೇದೋಜೀರಕ ಗ್ರಂಥಿಯ ಕ್ಯಾನ್ಸರ್‌ನಿಂದ ಬಳಲುತ್ತಿದ್ದಾರೆ ಎಂದು ಇದೇ ಮೊದಲ ಬಾರಿಗೆ ಬಿಜೆಪಿ ಬಹಿರಂಗಪಡಿಸಿದೆ.
ಮುಂಬೈ, ಅಮೆರಿಕ ಹಾಗೂ ದೆಹಲಿಯಲ್ಲಿ ಹಲವು ದಿನಗಳ ಕಾಲ ಚಿಕಿತ್ಸೆ ಪಡೆದು ಸದ್ಯ ಗೋವಾದ ತಮ್ಮ ನಿವಾಸದಲ್ಲಿರುವ ಮನೋಹರ ಪರಿಕ್ಕರ್ ಅವರಿಗೆ ಬಾಧಿಸುತ್ತಿರುವ ಆರೋಗ್ಯ ಸಮಸ್ಯೆ ಯಾವುದು ಎಂಬುದು ಈವರೆಗೂ ಅಧಿಕೃತವಾಗಿ ಗೊತ್ತಾಗಿರಲಿಲ್ಲ.
ಪರಿಕ್ಕರ್ ಮೇಲೆ ಬಿಜೆಪಿ ಒತ್ತಡ: ಆರ್‌ಎಸ್‌ಎಸ್ ಮಾಜಿ ಮುಖ್ಯಸ್ಥ ಆರೋಪ!
ಇದನ್ನು ಬಹಿರಂಗಪಡಿಸಬೇಕು ಎಂಬ ಆಗ್ರಹ ಪ್ರತಿಪಕ್ಷಗಳಿಂದ ಕೇಳಿಬಂದಿತ್ತು. ಈ ನಡುವೆ, ಶನಿವಾರ ಸುದ್ದಿಗಾರರ ಜತೆ ಮಾತನಾಡಿದ ಗೋವಾದ ಆರೋಗ್ಯ ಸಚಿವ ವಿಶ್ವಜಿತ್ ರಾಣೆ ಅವರು, ಪರಿಕ್ಕರ್ ಅವರಿಗೆ ಮೇದೋಜೀರಕ ಗ್ರಂಥಿಯ ಕ್ಯಾನ್ಸರ್ ಇದೆ.
ಇದರಲ್ಲಿ ಮುಚ್ಚಿಡುವಂತಹದ್ದೇನೂ ಇಲ್ಲ ಎಂದು ಹೇಳಿದ್ದಾರೆ. ಅ.14ರಂದು ದೆಹಲಿಯ ಏಮ್ಸ್ ಆಸ್ಪತ್ರೆಯಿಂದ ಡಿಸ್ಚಾಜ್‌ರ್ ಆದ ಬಳಿಕ ಗೋವಾದ ತಮ್ಮ ನಿವಾಸದಲ್ಲಿ ಪರ್ರಿಕರ್ ಚಿಕಿತ್ಸೆ ಪಡೆಯುತ್ತಿದ್ದಾರೆ. ಅವರು ಹಾಸಿಗೆ ಹಿಡಿದಿದ್ದು, ದಿನದ ಇಪ್ಪತ್ನಾಲ್ಕೂ ತಾಸು ವೈದ್ಯರ ತೀವ್ರ ನಿಗಾದಲ್ಲಿ ಇದ್ದಾರೆ ಎಂದು ಹೇಳಲಾಗಿದೆ. ಪರಿಕ್ಕರ್ ಅವರು ಆರೋಗ್ಯದಿಂದ ಇದ್ದಾರೆ.
ಸರ್ಕಾರ ನಡೆಸುವಷ್ಟುಶಕ್ತರಾಗಿದ್ದಾರೆ ಎಂಬುದನ್ನು ಸಾಬೀತುಪಡಿಸುವಂತೆ ಬಿಜೆಪಿಗೆ ಕಾಂಗ್ರೆಸ್ 4 ದಿನಗಳ ಗಡುವು ನೀಡಿತ್ತು. ಈ ಸಂದರ್ಭದಲ್ಲೇ ಅವರಿಗೆ ಕ್ಯಾನ್ಸರ್ ಇದೆ ಎಂದು ಸರ್ಕಾರ ತಿಳಿಸಿದೆ.
ಈ ನಡುವೆ, ಅ.30ರಂದು ತಮ್ಮ ನಿವಾಸದಲ್ಲೇ ಪರಿಕ್ಕರ್ ಅವರು ಹೂಡಿಕೆ ಉತ್ತೇಜನಾ ಮಂಡಳಿ ಹಾಗೂ ಅ.31ರಂದು ಸಚಿವ ಸಂಪುಟದ ಸಭೆಯನ್ನು ನಡೆಸಲಿದ್ದಾರೆ ಎಂದು ಮುಖ್ಯಮಂತ್ರಿ ಕಾರ್ಯಾಲಯದ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.