
ಜೈಪುರ್ (ಮೇ 28): ದುಡಿಯುವ ವರ್ಗದ ಸಮವಸ್ತ್ರ ಕೆಂಬಣ್ಣದ ಶರ್ಟ್ ತೊಟ್ಟು ಜೈಪುರ್ ರೈಲು ನಿಲ್ದಾಣದಲ್ಲಿ ಈ ಮಹಿಳೆ ಕೂಲಿ ಕೂಲಿ ಎಂದು ಕರೆಯುತ್ತಿದ್ದರೆ, ನಿಲ್ದಾಣದಲ್ಲಿರುವವರೆಲ್ಲಾ ಇವರತ್ತ ಒಮ್ಮೆ ಅಚ್ಚರಿಯ ಕಣ್ಣೋಟ ಬೀರುತ್ತಾರೆ.
ಹೌದು, ರಾಜಸ್ಥಾನದ ಜೈಪುರ್ ರೈಲು ನಿಲ್ದಾಣದಲ್ಲಿ ಮಂಜು ದೇವಿ ಎಂಬ ಮಹಿಳಾ ಕೂಲಿಯೊಬ್ಬರು ಇದೀಗ ಗಮನ ಸೆಳೆಯುತ್ತಿದ್ದು, ವಾಯುವ್ಯ ರೈಲ್ವೆಯ ದೇಶದ ಮೊದಲ ಮಹಿಳಾ ಕೂಲಿ ಎಂಬ ಕೀರ್ತಿಗೂ ಪಾತ್ರರಾಗಿದ್ದಾರೆ. ಆ ಮೂಲಕ ಸಾಕಷ್ಟು ಮಹಿಳೆಯರಿಗೆ ಮನಸ್ಸಿದ್ದರೆ ದುಡಿಯಲ್ಲೊಂದು ಉದ್ಯೋಗವಿದೆ, ಎಂದೂ ತೋರಿಸಿಕೊಟ್ಟಿದ್ದಾರೆ. ಸ್ವಾಭಿಮಾನದಿಂದ ಬದುಕುವ ಇಚ್ಛೆ ಇದ್ದರೆ, ಶ್ರಮದಿಂದ ದಿನದೂಟ ಸಂಪಾದಿಸಬಹುದೆಂಬುದನ್ನು ಜಗತ್ತಿಗೆ ಸಾರಿ ಹೇಳುತ್ತಿದ್ದಾರೆ.
ವಾಯುವ್ಯ ರೈಲ್ವೆಯ ಮೊದಲ ಮಹಿಳಾ ಕೂಲಿ ಎಂಬ ಹೆಗ್ಗಳಿಕೆ ಕೂಡ ಇವರ ಪಾಲಿಗೆ ಸಂದಿದೆ. ಮಂಜು ದೇವಿ ಪತಿ ಇದೇ ರೈಲು ನಿಲ್ದಾಣದಲ್ಲಿ ಕೂಲಿಯಾಗಿ ಕೆಲಸ ಮಾಡುತ್ತಿದ್ದರು. ಆದರೆ ಅವರ ಅನಾರೋಗ್ಯದ ಕಾರಣ ಅವರ ಲೈನ್ಸೆನ್ಸ್ (ನಂ.15)ಅಡಿಯಲ್ಲಿ ಮಂಜು ದೇವಿ ಕೂಲಿಯಾಗಿ ಕರ್ತವ್ಯಕ್ಕೆ ಹಾಜರಾಗಿದ್ದಾರೆ. ಮೂರು ಮಕ್ಕಳ ವಿದ್ಯಾಭ್ಯಾಸ, ಪತಿಯ ಆರೋಗ್ಯ ರಕ್ಷಣೆಗಾಗಿ ಕೂಲಿಯಾಗಿ ಕೆಲಸ ನಿರ್ವಹಿಸುತ್ತಿರುವುದಾಗಿ ಮಂಜು ದೇವಿ ಹೇಳುತ್ತಾರೆ.
ಪುರುಷ ಪ್ರಧಾನವಾಗಿರುವ ಈ ಉದ್ಯೋಗದಲ್ಲಿ ಮಂಜು ದೇವಿ ಜೀವನೋಪಾಯಕ್ಕಾಗಿ ದಿಟ್ಟತನದಿಂದ ಕರ್ತವ್ಯ ನಿರ್ವಹಿಸುತ್ತಿದ್ದಾರೆ. ಪುರುಷರು ಹೊರುವ ಭಾರದಷ್ಟೇ ವಸ್ತುಗಳನ್ನು ಹೊತ್ತು ನಡೆಯುವ ಮಂಜು, ಜನರಲ್ಲಿ ಕೂಲಿ ಕೆಲಸ ಕೀಳು ಎಂಬ ಭಾವನೆ ಇರುವುದನ್ದ್ದುನು ಹೋಗಲಾಡಿಸಲು ಶ್ರಮಿಸುವುದಾಗಿ ಹೇಳುತ್ತಾರೆ.
ಮೂವರೂ ಮಕ್ಕಳಿಗೆ ಉತ್ತಮ ವಿದ್ಯಾಭ್ಯಾಸ ಕೊಡಿಸಬೇಕೆಂಬ ಹಂಬಲ ಹೊಂದಿರುವ ಮಂಜು ದೇವಿ, ಮಕ್ಕಳ ಉಜ್ವಲ ಭವಿಷ್ಯಕ್ಕಾಗಿ ಈ ಕೆಂಪಂಗಿ ತೊಟ್ಟಿರುವುದು ಎಂದು ಮುಗುಳ್ನಗೆ ಬೀರುತ್ತಾರೆ. ಭಾರವಾದ ವಸ್ತುಗಳನ್ನು ಹೊತ್ತೊಯ್ಯುವ ಅವರು, ಸಂಸಾರದ ಭಾರದ ಮುಂದೆ ಈ ಭಾರ ಯಾವ ಲೆಕ್ಕ ಎನ್ನುತ್ತಾರೆ.
ಒಟ್ಟಿನಲ್ಲಿ ಜೀವನೋಪಾಯಕ್ಕಾಗಿ, ಮಕ್ಕಳ ಉಜ್ವಲ ಭವಿಷ್ಯಕ್ಕಾಗಿ, ಪತಿಯ ಆರೋಗ್ಯಕ್ಕಾಗಿ ರೈಲು ನಿಲ್ದಾಣದಲ್ಲಿ ಕೂಲಿಯಾಗಿ ಕೆಲಸ ಮಾಡುತ್ತಿರುವ ಮಂಜು ದೇವಿ, ಪುರುಷ ಪ್ರಧಾನ ಸಮಾಜದಲ್ಲಿ ಭಿನ್ನವಾಗಿ ನಿಲ್ಲುತ್ತಾರೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.