
ನವದೆಹಲಿ (ಮೇ. 25): ಕಾಶ್ಮೀರ ಕಣಿವೆಯಲ್ಲಿ ಶಾಂತಿ ಮರುಸ್ಥಾಪಿಸುವ ನಿಟ್ಟಿನಲ್ಲಿ ಕಾಂಗ್ರೆಸ್ ನಾಯಕ ಮಣಿಶಂಕರ್ ಅಯ್ಯರ್ ನೇತೃತ್ವದ 5 ಮಂದಿ ನಿಯೋಗವು ಕಾಶ್ಮೀರಿ ನಾಯಕರೊಂದಿಗೆ ಮಾತುಕತೆಯನ್ನಾರಂಭಿಸಿದೆ.
ಇಂದು ಹುರ್ರಿಯತ್ ನಾಯಕ ಮಿರ್ವೈಝ್ ಉಮರ್ ಫಾರೂಕ್ ಅವರನ್ನು ಭೇಟಿಯಾದ ನಿಯೋಗ, ಕಣಿವೆಯ ಪ್ರಸಕ್ತ ವಿದ್ಯಮಾನಗಳ ಬಗ್ಗೆ ಮಾತುಕತೆ ನಡೆಸಿ, ಪ್ರತಿಭಟನಕಾರರನ್ನು ಸಮಾಧಾನಗೊಳಿಸುವ ಕ್ರಮಗಳ ಬಗ್ಗೆ ಚರ್ಚಿಸಿದರು.
ಕಾಶ್ಮೀರದಲ್ಲಿ ಪರಿಸ್ಥಿತಿ ದಿನೇದಿನೆ ಬಿಗಡಾಯಿಸುತ್ತಿದ್ದು, ವಿದ್ಯಾರ್ಥಿಗಳು ಕೂಡಾ ಪ್ರತಿಭಟನೆಗಳಲ್ಲಿ ತೊಡಗಿರುವ ಕಳವಳಕಾರಿ ಹಿನ್ನೆಲೆಯಲ್ಲಿ, ಸಂಬಂಧಪಟ್ಟ ಕಾಶ್ಮೀರಿ ನಾಯಕರ ಜತೆ ಮಾತುಕತೆ ನಡೆಸಬೇಕೆಂದು ಅಯ್ಯರ್ ಕೇಂದ್ರ ಸರ್ಕಾರಕ್ಕೆ ಆಗ್ರಹಿಸಿದ್ದರು. ಆ ಮೂಲಕ ಕಾಶ್ಮೀರದಲ್ಲಿ ಸಹಜ ಸ್ಥಿತಿಯನ್ನು ಮರಳಿ ತರಬಹುದು ಹಾಗೂ ಭಾರತ-ಪಾಕಿಸ್ತಾನ ನಡುವೆ ಉಂಟಾಗಿರುವ ಉದ್ವಿಗ್ನತೆಯನ್ನು ಕೂಡಾ ಕಡಿಮೆ ಮಾಡಬಹುದು ಎಂದು ಅವರು ಹೇಳಿದ್ದಾರೆ.
ನಿಯೋಗದಲ್ಲಿ ಮಾಜಿ ವಾಯುಸೇನಾ ಮುಖ್ಯಸ್ಥ ಓ.ಪಿ.ಶಾ, ಕಪಿಲ್ ಕಾಕ್, ವಿನೋದ್ ಶರ್ಮಾ ಇದ್ದಾರೆ. ನಿಯೋಗವು ಇನ್ನೊಬ್ಬ ಪ್ರಮುಖ ಕಾಶ್ಮೀರಿ ನಾಯಕ ಸೈಯದ್ ಅಲೀ ಶಾ ಗೀಲಾನಿಯನ್ನು ಭೇಟಿಯಾಗಲಿದೆ. ಸ್ವತಂತ್ರ-ಕಾಶ್ಮೀರ ಚಳುವಳಿ ನಾಯಕ ಯಾಸೀನ್ ಮಲಿಕ್’ನ್ನು ಕೂಡಾ ನಿಯೋಗವು ಭೇಟಿಯಾಗಲು ಬಯಸಿದ್ದು, ಆದರೆ ಯಾಸಿನ್ ಮಲಿಕ್ ಭೇಟಿಯಾಗಲು ನಿರಾಕರಿಸಿದ್ದಾರೆನ್ನಲಾಗಿದೆ.
ಕಳೆದ ವರ್ಷ ಹಿರಿಯ ಬಿಜೆಪಿ ನಾಯಕ ಯಶ್ವಂತ್ ಸಿನ್ಹಾ ನೇತೃತ್ವದ ನಿಯೋಗವು ಕೂಡಾ ಕಾಶ್ಮೀರಿ ನಾಯಕರನ್ನು ಭೇಟಿಯಾಗಿತ್ತು. ಆದರೆ ಮಾತುಕತೆಗೆ ಮುನ್ನ ಬಂಧಿಸಲ್ಪಟ್ಟ ಯುವಕರನ್ನು ಹಾಗೂ ಪ್ರತ್ಯೇಕತಾವಾದಿ ನಾಯಕರನ್ನು ಬಿಡುಗಡೆಮಾಡಬೇಕೆಂದು ಶರತ್ತು ಇಟ್ಟಿದ್ದರು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.