
ಮಂಗಳೂರು(ಆ. 10): ಪ್ರಸಕ್ತ ಸಾಲಿನಲ್ಲಿ ಮಂಗಳೂರು ವಿವಿ ಪ್ರಕಟಿಸಿರುವ ಪ್ರಥಮ ಬಿಸಿಎ ಕನ್ನಡ ಪಠ್ಯ ಪುಸ್ತಕದಲ್ಲಿ ಗಡಿ ಕಾಯುವ ಸೈನಿಕರನ್ನು ಅತ್ಯಾಚಾರಿಗಳೆಂದು ಬಿಂಬಿಸಿರುವ ಆಘಾತಕಾರಿ ವಿಚಾರ ಬೆಳಕಿಗೆ ಬಂದಿದೆ. ಅಲ್ಲದೇ ವಿವಿಯ ಈ ಯಡವಟ್ಟಿನ ಬಗ್ಗೆ ಮಾಜಿ ಸೈನಿಕರಿಂದ ವ್ಯಾಪಕ ಆಕ್ರೋಶ ಕೇಳಿ ಬಂದಿದೆ. ಪಠ್ಯಪುಸ್ತಕದಲ್ಲಿ ಖ್ಯಾತ ಸಾಹಿತಿ ಬರಗೂರು ರಾಮಚಂದ್ರಪ್ಪನವರು ಬರೆದಿರುವ 'ಯುದ್ಧ ಒಂದು ಉದ್ಯಮ' ಎಂಬ ಪಠ್ಯವೊಂದರಲ್ಲಿರುವ ಅಂಶ ಈಗ ವಿವಾದಕ್ಕೆ ಕಾರಣವಾಗಿದೆ. ಈ ಲೇಖನದಲ್ಲಿ ಬರಗೂರು ರಾಮಚಂದ್ರಪ್ಪನವರು ತಮ್ಮ ಸ್ನೇಹಿತನಾಗಿರುವ ಸೈನಿಕನ ಮಾತುಗಳನ್ನು ಉಲ್ಲೇಖಿಸಿ ಬರೆದಿದ್ದಾರೆ. ಗಡಿಗಳಲ್ಲಿ ಯುದ್ಧ ನಡೆದಾಗ ಅತ್ಯಾಚಾರವೂ ನಡೆಯುತ್ತದೆ ಎಂದು ಬರೆಯಲಾಗಿದೆ. ಹೀಗಾಗಿ ಇದು ಭಾರೀ ಟೀಕೆಗೆ ಕಾರವಾಗಿದ್ದು, ವಿವಿ ಪ್ರಸಾರಂಗದ ವಿರುದ್ಧ ಟೀಕೆ ಕೇಳಿ ಬಂದಿದೆ. ಅಲ್ಲದೇ ವಿದ್ಯಾರ್ಥಿಗಳು ಓದುವ ಪಠ್ಯದಲ್ಲಿ ಆಧಾರರಹಿತ ಹೇಳಿಕೆಗಳನ್ನು ದಾಖಲಿಸಿರುವುದು ಟೀಕೆಗೆ ಕಾರಣವಾಗಿದೆ. ಅದರಲ್ಲೂ ಯಾರೋ ಒಬ್ಬನ ವೈಯಕ್ತಿಕ ಅಭಿಪ್ರಾಯವನ್ನ ವಿದ್ಯಾರ್ಥಿಗಳಿಗೆ ಪಠ್ಯದ ರೂಪದಲ್ಲಿ ನೀಡಿರೋದು ಆಕ್ರೋಶಕ್ಕೆ ಎಡೆ ಮಾಡಿದೆ.
ಪಠ್ಯದಲ್ಲಿರುವುದೇನು?
"....ಗಡಿ ಪ್ರದೇಶದಲ್ಲಿ ಪರಸ್ಪರ ಕ್ರೌರ್ಯದ ಪ್ರದರ್ಶನ ಮಾಡುವ ಪರಾಕ್ರಮಿಗಳು ಇದ್ದೇ ಇರುತ್ತಾರೆಂಬುದು ನನ್ನ ಗೆಳೆಯನ ಅನುಭವದ ಅಭಿಪ್ರಾಯ. ಪರಸ್ಪರ ಮುತ್ತಿಗೆ ನಡೆದಾಗ ಗಡಿಯ ಗ್ರಾಮಗಳಲ್ಲಿ ಅತ್ಯಾಚಾರವೂ ನಡೆಯುತ್ತದೆಯೆಂದೂ ಎರಡೂ ರಾಷ್ಟ್ರಗಳ ಕೆಲವು ಸೈನಿಕರು ಇದರಲ್ಲಿ ಭಾಗಿಗಳೆಂದೂ ಈ ಗೆಳೆಯ ಘಟನೆಗಳ ಸಮೇತ ವಿವರಿಸುತ್ತಾನೆ. ನಾವು ಸಾಮಾನ್ಯವಾಗಿ ನಮ್ಮವರೆಲ್ಲ ಸಜ್ಜನರೂ ಸಂಭಾವಿತರೂ ಎಂದು ನಂಬಿರುತ್ತೇವೆ ಅಥವಾ ಹಾಗೆ ನಂಬಿಸಲಾಗಿರುತ್ತದೆ...."
ಬರಗೂರು ಕ್ಷಮೆ ಯಾಚನೆ:
ಸುವರ್ಣನ್ಯೂಸ್'ನಲ್ಲಿ ಈ ಬಗ್ಗೆ ವರದಿ ಪ್ರಸಾರವಾದ ಬಳಿಕ ಬರಗೂರು ರಾಮಚಂದ್ರಪ್ಪನವರು ಸೈನಿಕರ ಕ್ಷಮೆ ಕೋರಿದ್ದಾರೆ. ಸುವರ್ಣನ್ಯೂಸ್ ಜೊತೆ ಮಾತನಾಡಿದ ಬರಗೂರು ರಾಮಚಂದ್ರಪ್ಪ, ತಾನು ಸೈನಿಕರನ್ನು ಅತ್ಯಾಚಾರಿ ಎಂದು ಹೇಳಿದರೆ ತನ್ನನ್ನು ತಾನು ಅವಮಾನ ಮಾಡಿಕೊಂಡಂತೆಯೇ. ಗಡಿ ಕಾಯುವ ಸಂದರ್ಭದಲ್ಲಿ ಸೈನಿಕರಿಗೆ ಕಾಡುವ ಒಂಟಿತನದ ಬಗ್ಗೆ ತಾನು ಬರೆದದ್ದು ಎಂದು ಸ್ಪಷ್ಟಪಡಿಸಿದ್ದಾರೆ. ಅಷ್ಟೇ ಅಲ್ಲ, ತಾನು ಬೇರೆಲ್ಲೋ ಬರೆದ ಲೇಖನವನ್ನ ತನ್ನ ಗಮನಕ್ಕೆ ತಾರದೆಯೇ ಪಠ್ಯಪುಸ್ತಕಕ್ಕೆ ಅಳವಡಿಸಲಾಗಿದೆ. ತಾನು ಯಾರಿಗೂ ಲಿಖಿತ ಅನುಮತಿ ಕೊಟ್ಟಿರಲಿಲ್ಲ. ಸಂಭಾವನೆಯನ್ನೂ ಪಡೆದಿಲ್ಲ. ಲೇಖನವನ್ನು ಪಠ್ಯಪುಸ್ತಕಕ್ಕೆ ಜೋಡಿಸುವ ಮುನ್ನ ಪಠ್ಯಪುಸ್ತಕ ಸಮಿತಿಯು ಅದನ್ನು ಸರಿಯಾಗಿ ಪರಾಮರ್ಶಿಸಬೇಕಿತ್ತು. ವೈಚಾರಿಕ ಭಾಷಣಗಳೇ ಬೇರೆ, ಪಠ್ಯಪುಸ್ತಕದ ಲೇಖನಗಳೇ ಬೇರೆ. ಪಠ್ಯಪುಸ್ತಕದಲ್ಲಿ ಪ್ರಕಟಿಸುವಾಗ ಯಾರ ಭಾವನೆಗೂ ಧಕ್ಕೆ ಬಾರದಂತೆ ಎಚ್ಚರ ವಹಿಸಬೇಕು ಎಂದು ಬರಗೂರು ರಾಮಚಂದ್ರಪ್ಪ ಹೇಳಿದ್ದಾರೆ. ಅಲ್ಲದೇ, ತಮ್ಮ ಲೇಖನದಿಂದ ಸೈನಿಕರಿಗೆ ನೋವಾಗಿದ್ದರೆ ತಾನು ಬೇಷರತ್ ಕ್ಷಮೆ ಕೇಳುತ್ತೇನೆ ಎಂದೂ ಅವರು ತಿಳಿಸಿದ್ದಾರೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.