ಚೆಲುವರಾಯಸ್ವಾಮಿ ಜಾಗಕ್ಕೆ ಕಾಂಗ್ರೆಸ್'ನ ಇಬ್ಬರ ಸೇರ್ಪಡೆ

By Suvarna web DeskFirst Published Apr 8, 2017, 6:11 PM IST
Highlights

2008ರ ಚುನಾವಣೆಯಲ್ಲಿ ಸುರೇಶ ಗೌಡ ಅವರು ಕಾಂಗ್ರೆಸ್ ಪಕ್ಷದಿಂದ ಸ್ಪರ‌್ಸಿ ಆಯ್ಕೆಯಾಗಿದ್ದರು. ಇತ್ತೀಚಿನ ದಿನಗಳಲ್ಲಿ ಹಾಲಿ ಶಾಸಕ ಚಲುವರಾಯಸ್ವಾಮಿ ಅವರು ಮುಖ್ಯಮಂತ್ರಿ ಸಿದ್ದರಾಮಯ್ಯ ಸೇರಿದಂತೆ ಕಾಂಗ್ರೆಸ್ ಪಕ್ಷದ ನಾಯಕರೊಂದಿಗೆ ಹೆಚ್ಚು ಒಡನಾಟ ಹೊಂದಿದ್ದರು.

ಬೆಂಗಳೂರು(ಏ.08):ಇದುವರೆಗೆ ಕಾಂಗ್ರೆಸ್ ಪಕ್ಷದಿಂದ ಬಿಜೆಪಿಗೆ ನಡೆಯುತ್ತಿದ್ದ ವಲಸೆ ಇದೀಗ ಜೆಡಿಎಸ್‌ನತ್ತ ತಿರುಗಿದ್ದು, ಮಂಡ್ಯ ಜಿಲ್ಲೆ ನಾಗಮಂಗಲ ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್ಸಿನ ಮಾಜಿ ಶಾಸಕರಾದ ಸುರೇಶ ಗೌಡ ಮತ್ತು ಎಲ್.ಆರ್. ಶಿವರಾಮೇಗೌಡ ಅವರು ಸೋಮವಾರ ಜೆಡಿಎಸ್ ಸೇರ್ಪಡೆಯಾಗಲಿದ್ದಾರೆ.

ಈ ಮೂಲಕ ಪಕ್ಷದಿಂದ ಅಮಾನತುಗೊಂಡು ಕಾಂಗ್ರೆಸ್ ಸೇರಲು ತುದಿಗಾಲ ಮೇಲೆ ನಿಂತಿರುವ ಹಾಲಿ ಶಾಸಕ ಎನ್.ಚಲುವರಾಯಸ್ವಾಮಿ ಅವರಿಗೆ ಬಲವಾದ ಹೊಡೆತ ನೀಡಲು ವೇದಿಕೆ ಸಜ್ಜಾದಂತಾಗಿದೆ.

ಈ ಸಂಬಂಧ ಇಬ್ಬರೂ ಮುಖಂಡರು ಶನಿವಾರ ಜೆಡಿಎಸ್ ರಾಷ್ಟ್ರೀಯ ಅಧ್ಯಕ್ಷ ಎಚ್.ಡಿ. ದೇವೇಗೌಡ ಹಾಗೂ ರಾಜ್ಯಾಧ್ಯಕ್ಷ ಎಚ್.ಡಿ.ಕುಮಾರಸ್ವಾಮಿ ಅವರನ್ನು ಭೇಟಿ ಮಾಡಿ ಚರ್ಚೆ ನಡೆಸಿದರು. ಇಬ್ಬರ ಪೈಕಿ ಒಬ್ಬರಿಗೆ ನಾಗಮಂಗಲ ಕ್ಷೇತ್ರದ ಟಿಕೆಟ್ ನೀಡಲಾಗುತ್ತದೆ.

2008ರ ಚುನಾವಣೆಯಲ್ಲಿ ಸುರೇಶ ಗೌಡ ಅವರು ಕಾಂಗ್ರೆಸ್ ಪಕ್ಷದಿಂದ ಸ್ಪರ‌್ಸಿ ಆಯ್ಕೆಯಾಗಿದ್ದರು. ಇತ್ತೀಚಿನ ದಿನಗಳಲ್ಲಿ ಹಾಲಿ ಶಾಸಕ ಚಲುವರಾಯಸ್ವಾಮಿ ಅವರು ಮುಖ್ಯಮಂತ್ರಿ ಸಿದ್ದರಾಮಯ್ಯ ಸೇರಿದಂತೆ ಕಾಂಗ್ರೆಸ್ ಪಕ್ಷದ ನಾಯಕರೊಂದಿಗೆ ಹೆಚ್ಚು ಒಡನಾಟ ಹೊಂದಿದ್ದರು. ಅಲ್ಲದೆ ನಾಗಮಂಗಲ ಕ್ಷೇತ್ರದ ಅಭಿವೃದ್ಧಿಗೆ ಸಂಬಂಸಿದಂತೆ ಪ್ರತಿಪಕ್ಷದ ಶಾಸಕರಾಗಿದ್ದರೂ, ಅವರ ಮಾತೇ ನಡೆಯುತ್ತಿತ್ತು. ಇಷ್ಟೇ ಆಗಿದ್ದರೆ ಸಮಸ್ಯೆ ಬರುತ್ತಿರಲಿಲ್ಲ. ಮುಂದಿನ ಚುನಾವಣೆಯಲ್ಲಿ ಚಲುವರಾಯಸ್ವಾಮಿ ಅವರಿಗೆ ಕಾಂಗ್ರೆಸ್ ಟಿಕೆಟ್ ಸಿಗುವುದು ಖಚಿತವಾಗುತ್ತಿದ್ದಂತೆ ಸುರೇಶ ಗೌಡ ಅವರು ತಮ್ಮ ರಾಜಕೀಯ ಭವಿಷ್ಯಕ್ಕಾಗಿ ಜೆಡಿಎಸ್ ಬಾಗಿಲು ತಟ್ಟಿದರು.

ಕಳೆದ ಹಲವು ದಿನಗಳಿಂದ ತೆರೆಮರೆಯಲ್ಲಿ ಮಾತುಕತೆ ನಡೆದಿದ್ದು, ಶನಿವಾರ ಅಂತಿಮ ಹಂತಕ್ಕೆ ಬಂದು ನಿಂತಿತು. ಇದೇ ಕ್ಷೇತ್ರದ ಮಾಜಿ ಶಾಸಕರಾಗಿರುವ ಶಿವರಾಮೇಗೌಡ ಅವರು ಹಿಂದೆ ಬಿಜೆಪಿಗೆ ಹೋಗಿ ಕಾಂಗ್ರೆಸ್ಸಿಗೆ ವಾಪಸ್ಸಾಗಿದ್ದರು. ಅವರೂ ಮತ್ತೊಮ್ಮೆ ಸ್ಪರ‌್ಸುವ ಆಕಾಂಕ್ಷೆ ಹೊಂದಿದ್ದಾರೆ.

ಶನಿವಾರ ಜೆಡಿಎಸ್ ಹಾಲಿ ಸಂಸದ ಪುಟ್ಟರಾಜು ಮತ್ತಿತರ ಮುಖಂಡರೊಂದಿಗೆ ಇವರಿಬ್ಬರೂ ದೇವೇಗೌಡ ಮತ್ತು ಕುಮಾರಸ್ವಾಮಿ ಅವರ ನಿವಾಸಕ್ಕೆ ತೆರಳಿ ಮಾತುಕತೆ ನಡೆಸಿದರು. ಪಕ್ಷದ ಉಭಯ ವರಿಷ್ಠ ನಾಯಕರು ಕಾಂಗ್ರೆಸ್ ಮುಖಂಡರ ಸೇರ್ಪಡೆಗೆ ಸಹಮತ ಮತ್ತು ಸಂತಸ ವ್ಯಕ್ತಪಡಿಸಿದರು.

ಭೇಟಿಯ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಸುರೇಶಗೌಡ, ಯಾವುದೇ ಷರತ್ತಿಲ್ಲದೆ ಜೆಡಿಎಸ್ ಸೇರ್ಪಡೆಯಾಗುತ್ತಿದ್ದೇನೆ. ಕಾಂಗ್ರೆಸ್ ಪಕ್ಷವು ಶಾಸಕ ಚಲುವರಾಯಸ್ವಾಮಿ ಮಾತಿಗೆ ಮಣೆ ಹಾಕುವ ಮೂಲಕ ನನ್ನನ್ನು ಕಡೆಗಣಿಸಿತ್ತು. ಇದರಿಂದ ಬೇಸತ್ತು ಜೆಡಿಎಸ್ ಸೇರಲು ನಿರ್ಧರಿಸಿದೆ. ಸೋಮವಾರ ಜೆಡಿಎಸ್ ಸೇರುವೆ. ಮುಂದಿನ ಚುನಾವಣೆಯಲ್ಲಿ ನಾಗಮಂಗಲ ಕ್ಷೇತ್ರದಿಂದ ಕಣಕ್ಕಿಳಿಯುವ ಆಸೆ ಇದೆ ಎಂದು ತಿಳಿಸಿದರು.

ಶಿವರಾಮೇಗೌಡ ಮಾತನಾಡಿ, ಜೆಡಿಎಸ್ ಪಕ್ಷ ಸೇರಿ ಸಂಘಟನೆ ಬಲಪಡಿಸುವ ಕೆಲಸ ಮಾಡುತ್ತೇವೆ. ನಾನು ಮತ್ತು ಸುರೇಶಗೌಡ ಪೈಕಿ ಒಬ್ಬರು ನಾಗಮಂಗಲ ಕ್ಷೇತ್ರದಿಂದ ಸ್ಪರ‌್ಸುತ್ತೇವೆ. ಅಲ್ಲಿ ಬೃಹತ್ ಸಮಾವೇಶ ನಡೆಸಿ ಅಭ್ಯರ್ಥಿ ಹೆಸರು ಘೋಷಿಸಲಾಗುತ್ತದೆ. ಯಾರನ್ನು ಅಭ್ಯರ್ಥಿಯನ್ನಾಗಿ ಘೋಷಿಸಿದರೂ ಅದಕ್ಕೆ ಇಬ್ಬರೂ ಬದ್ಧರಾಗಿರುತ್ತೇವೆ ಎಂದರು.

ಇದೆ ವೇಳೆ ಮಾತನಾಡಿದ ಸಂಸದ ಪುಟ್ಟರಾಜು, ಸುರೇಶಗೌಡ ಮತ್ತು ಶಿವರಾಮೇಗೌಡ ಅವರಿಬ್ಬರೂ ದೇವೇಗೌಡ ಹಾಗೂ ಕುಮಾರಸ್ವಾಮಿ ಅವರೊಂದಿಗೆ ಸಮಾಲೋಚನೆ ನಡೆಸಿದ್ದಾರೆ. ಸೋಮವಾರ ಜೆಡಿಎಸ್ ಕಚೇರಿಯಲ್ಲಿ ನಡೆಯುವ ಸಮಾರಂಭದಲ್ಲಿ ಸೇರ್ಪಡೆ ಅಗಲಿದ್ದಾರೆ ಎಂದು ಹೇಳಿದರು.

(ಕನ್ನಡಪ್ರಭ ವಾರ್ತೆ)

click me!