
ನವದೆಹಲಿ(ಏ.8): ಪ್ರಧಾನಿ ನರೇಂದ್ರ ಮೋದಿ ಹಾಗೂ ಭಾರತ ಪ್ರವಾಸದಲ್ಲಿರುವ ಬಾಂಗ್ಲಾದೇಶ ಪ್ರಧಾನಮಂತ್ರಿ ಶೇಖ್ ಹಸೀನಾ ನಡುವೆ ಶನಿವಾರ ದ್ವಿಪಕ್ಷೀಯ ಮಾತುಕತೆ ನಡೆದಿದ್ದು, 22 ಒಪ್ಪಂದಗಳಿಗೆ ಉಭಯ ದೇಶಗಳಿಗೂ ಸಹಿ ಹಾಕಿವೆ. ಇದೇ ವೇಳೆ ಬಾಂಗ್ಲಾದೇಶದ ಆದ್ಯತಾ ಕ್ಷೇತ್ರದ ಯೋಜನೆಗಳನ್ನು ಪೂರ್ಣಗೊಳಿಸಲು ಪ್ರಧಾನಿ ಮೋದಿ ಅವರು 29 ಸಾವಿರ ಕೋಟಿ ರು. ರಿಯಾಯಿತಿ ಬಡ್ಡಿ ದರದ ಸಾಲ ಘೋಷಣೆ ಮಾಡಿದ್ದಾರೆ. ಜತೆಗೆ ಬಾಂಗ್ಲಾದೇಶ ಸೇನೆಯ ಉಪಕರಣ ಖರೀದಿಗೆ ನೆರವಾಗಲು ಪ್ರತ್ಯೇಕವಾಗಿ 3200 ಕೋಟಿ ರು. ಸಾಲ ಪ್ರಕಟಿಸಿದ್ದಾರೆ.
ಬೇರೊಂದು ದೇಶಕ್ಕೆ ಭಾರತ ಇಷ್ಟೊಂದು ಮೊತ್ತದ ಸಾಲ ನೀಡುತ್ತಿರುವುದು ಇದೇ ಮೊದಲು. ಭಾರತದ ಈ ಉದಾರತೆಯಿಂದಾಗಿ ಬಾಂಗ್ಲಾದೇಶಕ್ಕೆ ಕಳೆದ ಆರು ವರ್ಷಗಳಲ್ಲಿ ಬರೋಬ್ಬರಿ 51 ಸಾವಿರ ಕೋಟಿ ರು. ಸಾಲ ಸಿಕ್ಕಂತಾಗಿದೆ. ಮತ್ತೊಂದೆಡೆ, ಬಾಂಗ್ಲಾದೇಶಕ್ಕೆ ಅತ್ಯಂತ ಮಹತ್ವದ್ದಾಗಿರುವ, ಕಳೆದ ಏಳು ವರ್ಷಗಳಿಂದ ಅನಿಶ್ಚಿತತೆಯಲ್ಲಿರುವ ತೀಸ್ತಾ ಜಲ ಒಪ್ಪಂದ ಕುರಿತು ಯಾವುದೇ ಪ್ರಗತಿಯಾಗಿಲ್ಲ. ಈ ವಿಷಯಕ್ಕೆ ಆದಷ್ಟು ಬೇಗ ಪರಿಹಾರ ಹುಡುಕುವುದಾಗಿ ಮೋದಿ ಅವರು ಭರವಸೆ ನೀಡಿದ್ದಾರೆ.
ಉಭಯ ದೇಶಗಳ ಪ್ರಧಾನಿಗಳ ಸಮ್ಮುಖ ಒಟ್ಟು 22 ಒಪ್ಪಂದಗಳು ಏರ್ಪಟ್ಟಿವೆ. ಆ ಪೈಕಿ ಮೂರು ರಕ್ಷಣಾ ಸಹಕಾರಕ್ಕೆ ಸಂಬಂಧಿಸಿದವಾಗಿವೆ. ಇದರಡಿ ತಮಿಳುನಾಡಿನ ವೆಲ್ಲಿಂಗ್ಟನ್‌ನಲ್ಲಿರುವ ರಕ್ಷಣಾ ಸಿಬ್ಬಂದಿ ಕಾಲೇಜು ಹಾಗೂ ಢಾಕಾದಲ್ಲಿನ ಮೀರ್‌ಪುರದ ರಕ್ಷಣಾ ಕಮಾಂಡ್ ಮತ್ತು ಸಿಬ್ಬಂದಿ ಕಾಲೇಜು ನಡುವೆ ಒಪ್ಪಂದವಾಗಿದೆ. ಮತ್ತೊಂದೆಡೆ ಢಾಕಾದ ರಾಷ್ಟ್ರೀಯ ರಕ್ಷಣಾ ಕಾಲೇಜು ಹಾಗೂ ನವೆಹಲಿಯ ರಾಷ್ಟ್ರೀಯ ರಕ್ಷಣಾ ಕಾಲೇಜುಗಳ ನಡುವೆ ಮತ್ತೊಂದು ಒಪ್ಪಂದಕ್ಕೆ ಅಂಕಿತ ಬಿದ್ದಿದೆ.
ಪರಮಾಣು ವಿದ್ಯುತ್ ಸ್ಥಾವರ ಸ್ಥಾಪನೆಯಿಂದ ಹಿಡಿದು, ಅಣ್ವಸ ಸುರಕ್ಷತೆಗೆ ಸಂಬಂಸಿದ ವಿಷಯಗಳನ್ನು ಬಗೆಹರಿಸುವವರೆಗೆ ಬಾಂಗ್ಲಾದೇಶಕ್ಕೆ ನಾಗರಿಕ ಪರಮಾಣು ಇಂಧನ ಯೋಜನೆಯಡಿ ನೆರವು ನೀಡಲು ಮೂರು ಒಪ್ಪಂದಗಳಿಗೆ ಸಹಿ ಹಾಕಲಾಗಿದೆ. ಸೈಬರ್ ಭದ್ರತೆ ಸಹಕಾರ, ಕೋಲ್ಕತಾ- ಖುಲ್ನಾ- ಢಾಕಾ ನಡುವೆ ಬಸ್ ಸಂಚಾರಕ್ಕಾಗಿಯೂ ಒಪ್ಪಂದಗಳನ್ನು ಮಾಡಿಕೊಳ್ಳಲಾಗಿದೆ.
ಬಾಂಗ್ಲಾದೇಶದ ಮೂರನೇ ಅತಿದೊಡ್ಡ ನಗರ ಖುಲ್ನಾದಿಂದ ಕೋಲ್ಕತಾಗೆ ಭಾರತದ ಪೆಟ್ರಾಪೋಲ್ ಹಾಗೂ ಬಾಂಗ್ಲಾದೇಶದ ಬೆನಾಪೋಲ್ ಮೂಲಕ ಹೊಸ ಪ್ಯಾಸೆಂಜರ್ ರೈಲು ಸೇವೆ, ಗೂಡ್ಸ್ ರೈಲುಗಳ ಓಡಾಟಕ್ಕಾಗಿ ರಾಕಾಪುರ ಹಾಗೂ ಬಿರೋಲ್ ನಡುವೆ ಹೊಸ ಮಾರ್ಗ ನಿರ್ಮಾಣಕ್ಕಾಗಿಯೂ ಒಪ್ಪಂದ ಮಾಡಿಕೊಳ್ಳಲಾಗಿದೆ. ಪ್ರಯಾಣಿಕ ಹಡಗು ಓಡಾಟಕ್ಕೆ, ಹೈಸ್ಪೀಡ್ ಡೀಸೆಲ್ ಸರಬರಾಜು ಕುರಿತೂ ಒಡಂಬಡಿಕೆಗಳು ಏರ್ಪಟ್ಟಿವೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.