ಮಂಡ್ಯ ಕಾಂಗ್ರೆಸ್‌ ಬಂಡಾಯಕ್ಕೆ ಸಿದ್ದರಾಮಯ್ಯ ಮದ್ದು ಏನು..?

By Web DeskFirst Published Oct 25, 2018, 10:53 AM IST
Highlights

ಸಿದ್ದರಾಮಯ್ಯ ಅವರು ತಾವೊಬ್ಬ ‘ಟ್ರಬಲ್‌ ಶೂಟರ್‌’ ಎಂಬುದನ್ನು ಮತ್ತೊಮ್ಮೆ ಸಾಬೀತುಪಡಿಸಿದ್ದಾರೆ.

ಮಂಡ್ಯ/ಮೈಸೂರು :  ಬೆಳಗಾವಿ, ಜಮಖಂಡಿ, ಬಳ್ಳಾರಿಯಲ್ಲಿ ಕಾಂಗ್ರೆಸ್‌ ಪಕ್ಷದೊಳಗಿನ ಆಂತರಿಕ ಬಂಡಾಯವನ್ನು ತಣ್ಣಗಾಗಿಸಿದ್ದ ಕಾಂಗ್ರೆಸ್‌- ಜೆಡಿಎಸ್‌ ಸಮನ್ವಯ ಸಮಿತಿ ಅಧ್ಯಕ್ಷ ಸಿದ್ದರಾಮಯ್ಯ ಇದೀಗ ಮಂಡ್ಯದಲ್ಲಿ ಉಂಟಾಗಿದ್ದ ಮೈತ್ರಿ ಪಕ್ಷಗಳ ನಡುವಿನ ಅಸಮಾಧಾನಕ್ಕೂ ತೇಪೆ ಹಚ್ಚುವಲ್ಲಿ ಯಶಸ್ವಿಯಾಗಿದ್ದಾರೆ.

ಸಿದ್ದರಾಮಯ್ಯ ಒತ್ತಡ, ಕಟ್ಟಪ್ಪಣೆಗೆ ಮಣಿದು ಜಿಲ್ಲಾ ಕಾಂಗ್ರೆಸ್‌ನ ಪ್ರಮುಖ ನಾಯಕರು ಅಳೆದು, ಕೊನೆಗೂ ತೂಗಿ ಒಲ್ಲದ ಮನಸ್ಸಿನಿಂದಲೇ ಮೈತ್ರಿ ಅಭ್ಯರ್ಥಿ ಶಿವರಾಮೇಗೌಡರನ್ನು ಬೆಂಬಲಿಸಲು ನಿರ್ಧರಿಸಿದ್ದಾರೆ. ತನ್ಮೂಲಕ ಸಿದ್ದರಾಮಯ್ಯ ಅವರು ತಾವೊಬ್ಬ ‘ಟ್ರಬಲ್‌ ಶೂಟರ್‌’ ಎಂಬುದನ್ನು ಮತ್ತೊಮ್ಮೆ ಸಾಬೀತುಪಡಿಸಿದ್ದಾರೆ.

ರಾಜ್ಯದಲ್ಲಿ ಜೆಡಿಎಸ್‌- ಕಾಂಗ್ರೆಸ್‌ ಮೈತ್ರಿ ಸರ್ಕಾರವಿದ್ದರೂ ಮಂಡ್ಯದಲ್ಲಿ ಅನೇಕ ಕಾಂಗ್ರೆಸ್‌ ಮುಖಂಡರು ಜೆಡಿಎಸ್‌ ಜೊತೆ ಸೇರಿ ಕಾರ್ಯ ನಿರ್ವಹಿಸಲು ಬಲವಾದ ವಿರೋಧ ವ್ಯಕ್ತಪಡಿಸಿದ್ದರು. ಸ್ಥಳೀಯ ನಾಯಕರ ಈ ಹಠಮಾರಿ ಧೋರಣೆಯಿಂದ ಕಾಂಗ್ರೆಸ್‌ಗೆ ಭಾರೀ ಇರುಸು ಮುರುಸಾಗಿತ್ತು. ಇದೀಗ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅಖಾಡಕ್ಕೆ ಇಳಿದು ಕಾಂಗ್ರೆಸ್‌ ಮುಖಂಡರಿಗೆ ಮೈತ್ರಿ ಧರ್ಮದ ಪಾಠ ಬೋಧಿಸಿದ ಬಳಿಕ ಪಾಲಿಸಿದ ಬಳಿಕ ಮುಖಂಡರು ಕಾರ್ಯ ನಿರ್ವಹಿಸಲು ಒಪ್ಪಿದ್ದಾರೆ.

ಗೌಪ್ಯ ಸಭೆಯಲ್ಲಿ ಮೈತ್ರಿಪಾಠ:

ನಗರದ ಕನಕಭವನದಲ್ಲಿ ಜಿಲ್ಲೆಯ 8 ವಿಧಾನಸಭಾ ಕ್ಷೇತ್ರಗಳ ಪರಾಜಿತ ಕಾಂಗ್ರೆಸ್‌ ಅಭ್ಯರ್ಥಿಗಳಾದ ಎನ್‌.ಚಲುವರಾಯಸ್ವಾಮಿ, ಪಿ.ಎಂ.ನರೇಂದ್ರಸ್ವಾಮಿ, ಕೆ.ಬಿ.ಚಂದ್ರಶೇಖರ್‌, ರಮೇಶ್‌ ಬಂಡಿಸಿದ್ದೇಗೌಡ, ರವಿಗಣಿಗ ಸೇರಿದಂತೆ ಪ್ರಮುಖ ನಾಯಕರೊಂದಿಗೆ ಸಿದ್ದರಾಮಯ್ಯ ಗೌಪ್ಯಸಭೆ ನಡೆಸಿದರು. ಮಾಧ್ಯಮದವರು ಹಾಗೂ ಬೆಂಬಲಿಗರನ್ನು ದೂರ ಇಟ್ಟಈ ಗೌಪ್ಯ ಸಭೆಯಲ್ಲಿ, ಮುನಿಸಿಕೊಂಡ ಕಾಂಗ್ರೆಸ್‌ ನಾಯಕರನ್ನು ಒಂದುಗೂಡಿಸಲು ಯತ್ನಿಸಿದರು. ಮೈತ್ರಿ ಅನಿವಾರ್ಯತೆಯನ್ನು ವಿವರಿಸಿದರು. ‘ಸಿದ್ಧಾಂತ ಮತ್ತು ಸ್ವಾಭಿಮಾನಕ್ಕೆ ಧಕ್ಕೆ ಆಗದಂತೆ ಕೆಲಸ ಮಾಡಿ. ನಿಮ್ಮ ಭಾವನೆಗಳು ನನಗೆ ಅರ್ಥವಾಗುತ್ತವೆ. ಆದರೆ, ಈಗ ಮೈತ್ರಿ ಧರ್ಮವನ್ನು ಪಾಲಿಸಬೇಕು. ಬೇರೆ ದಾರಿ ಇಲ್ಲ. ಜೆಡಿಎಸ್‌ ಅಭ್ಯರ್ಥಿಯನ್ನು ಗುರಿ ಇಟ್ಟುಕೊಂಡು ಕೆಲಸ ಮಾಡಿ’ ಎಂದು ಹೇಳಿದ್ದಾರೆ ಎಂದು ಗೊತ್ತಾಗಿದೆ.

ಮೈತ್ರಿ ಬಗ್ಗೆ ಅಪಾರವಾಗಿ ಮುನಿಸಿಕೊಂಡಿದ್ದ ಮಾಜಿ ಸಚಿವ ಚಲುವರಾಯ ಸ್ವಾಮಿ ಕೂಡ ಮೈತ್ರಿ ಧರ್ಮ ಪಾಲಿಸುವುದಾಗಿ ಮಾಧ್ಯಮಗಳ ಮುಂದೆ ತಿಳಿಸಿದ್ದಾರೆ. ನಮ್ಮ ನಿಷ್ಠೆ ಏನೇ ಇದ್ದರೂ ಕಾಂಗ್ರೆಸ್‌ ಪಕ್ಷ ಹಾಗೂ ಸಿದ್ದರಾಮಯ್ಯನವರಿಗೆ ಮಾತ್ರ. ಅವರ ನಿರ್ದೇಶನವನ್ನು ಅನುಸರಿಸುವುದು ನಮ್ಮ ಕೆಲಸ. ಮಂಡ್ಯ ಜಿಲ್ಲೆಗೆ ಸೀಮಿತವಾಗಿ ನಿರ್ದೇಶನ ಕೊಟ್ಟಿದ್ದಾರೆ. ಅದನ್ನು ಅನುಸರಿಸುತ್ತೇವೆ ಎಂದಿದ್ದಾರೆ.

ಈ ನಡುವೆ ಸಿದ್ದರಾಮಯ್ಯ ನಡೆಸಿದ ಗೌಪ್ಯ ಸಭೆಗೆ ಮದ್ದೂರು ಕ್ಷೇತ್ರದ ಪರಾಜಿತ ಅಭ್ಯರ್ಥಿ ಮಧು, ಮೇಲುಕೋಟೆ ಸ್ವರಾಜ್‌ ಇಂಡಿಯಾ ಅಭ್ಯರ್ಥಿಯಾಗಿದ್ದ ದರ್ಶನ್‌ ಪುಟ್ಟಣ್ಣಯ್ಯ ಗೈರಾಗಿದ್ದರು.

ಮೈಸೂರಲ್ಲೇ ಸೂಚನೆ:

ಇದಕ್ಕೆ ಮೊದಲು ಮೈಸೂರಿನಲ್ಲೇ ಬಂಡಾಯ ಶಮನದ ಸೂಚನೆ ನೀಡಿದ್ದ ಸಿದ್ದರಾಮಯ್ಯ ಅವರು, ಮಂಡ್ಯ ಕಾಂಗ್ರೆಸ್‌ ಮುಖಂಡರೆಲ್ಲರೂ ಮೈತ್ರಿ ಅಭ್ಯರ್ಥಿ ಪರವಾಗಿ ಕೆಲಸ ಮಾಡಲಿದ್ದಾರೆ ಎಂದು ಘೋಷಿಸಿದ್ದರು. ಮಂಡ್ಯದ ಕಾಂಗ್ರೆಸ್‌ ನಾಯಕರು ಈಗಾಗಲೇ ವಿದೇ​ಶ​ಕ್ಕೆ ಹೋಗಿ ಬಂದಿದ್ದಾರೆ. ಅವರೆಲ್ಲರೂ ಜೆಡಿಎಸ್‌ ಪರವಾಗಿ ಕೆಲಸ ಮಾಡುತ್ತಾರೆ. ಹಲವು ವರ್ಷಗಳ ಕಾಲ ಪ್ರತ್ಯೇಕವಾಗಿ ಚುನಾವಣೆ ಎದುರಿಸುವುದರಿಂದ ಸಹಜವಾಗಿಯೇ ಒಟ್ಟಿಗೆ ಕೆಲಸ ಮಾಡಲು ಇರಿಸು ಮುರಿಸುವುದು ಆಗುವುದು ಸಹಜ. ಆದರೆ ಎದುರಾಳಿ ಒಬ್ಬರೇ ಆಗಿರುವುದರಿಂದ ಮೈತ್ರಿ ಅವಶ್ಯ ಎಂದು ಹೇಳಿದ್ದರು.

ಸಿದ್ದು ಪಾದಕ್ಕೆರಗಿದ ಅಭ್ಯರ್ಥಿ

ಬುಧವಾರ ಮಂಡ್ಯದ ಖಾಸಗಿ ಹೋಟೆಲ್‌ನಲ್ಲಿ ಏರ್ಪಡಿಸಿದ್ದ ಕಾಂಗ್ರೆಸ್‌- ಜೆಡಿಎಸ್‌ ನಾಯಕರ ಸಭೆಗೆ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಆಗಮಿಸಿದರು. ಈ ವೇಳೆ ಮೈತ್ರಿಕೂಟದ ಅಭ್ಯರ್ಥಿ ಎಲ್‌.ಆರ್‌. ಶಿವರಾಮೇಗೌಡ ಅವರು ಸಿದ್ದರಾಮಯ್ಯನವರ ಕಾಲಿಗೆ ನಮಸ್ಕಾರ ಮಾಡಿದರು.

ಸುದ್ದಿಗೋಷ್ಠಿಯಲ್ಲಿ ಹಿಂದಿನಸಾಲಿಗೆ ಹೋಗಿದ್ದ ನರೇಂದ್ರಸ್ವಾಮಿ

ಮಂಡ್ಯ ಲೋಕಸಭಾ ಉಪಚುನಾವಣೆ ಪ್ರಚಾರಕ್ಕೂ ಮುನ್ನ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಸುದ್ದಿಗೋಷ್ಠಿ ಮಾಡಿದರು. ಗೋಷ್ಠಿಯ ಆರಂಭಕ್ಕೂ ಮುನ್ನ ಮುಂದಿನ ಸಾಲಿಗೆ ಬರಲು ಮಾಜಿ ಶಾಸಕ ನರೇಂದ್ರಸ್ವಾಮಿ ನಿರಾಕರಿಸಿದರು. ಸಿದ್ದರಾಮಯ್ಯ ಕರೆದರೂ ಮುಂದೆ ಬರಲಿಲ್ಲ. ಹಿಂದಿನ ಸಾಲಿನಲ್ಲಿ ಕುಳಿತರು. ಬಾರಯ್ಯ ನರೇಂದ್ರ ಸ್ವಾಮಿ ಎಂದು ಸಿದ್ದರಾಮಯ್ಯನವರೇ ಸ್ವಲ್ಪ ಜೋರಾಗಿ ಕರೆದಾಗ, ಕೊಂಚ ಮುನಿಸಿಕೊಂಡಿದ್ದ ಸ್ವಾಮಿ ಸಾವರಿಸಿ ಮುಂದಿನ ಸಾಲಿಗೆ ಬಂದು ಕುಳಿತರು.

click me!