ಓಎಲ್'ಎಕ್ಸ್ ಜಾಲತಾಣದ ಮೂಲಕ ವಂಚಿಸುತ್ತಿದ್ದವ ಸೆರೆ

Published : Oct 10, 2016, 10:22 AM ISTUpdated : Apr 11, 2018, 12:55 PM IST
ಓಎಲ್'ಎಕ್ಸ್ ಜಾಲತಾಣದ ಮೂಲಕ ವಂಚಿಸುತ್ತಿದ್ದವ ಸೆರೆ

ಸಾರಾಂಶ

* ವಿದ್ಯಾರ್ಥಿ ವೀಸಾ ಆಧಾರದಲ್ಲಿ ನಗರಕ್ಕೆ ಬಂದಿದ್ದ ಆರೋಪಿ * ಹಿಂದೆ ಹಲವು ಅಪರಾಧ ಕೃತ್ಯಗಳಲ್ಲಿ ಭಾಗಿಯಾಗಿದ್ದ * ಆತನ ಬಂಧನಕ್ಕೆ ಲುಕ್‌ಔಟ್‌ ನೋಟಿಸ್‌ ಹೊರಡಿಸಿದ್ದ ಪೊಲೀಸರು * ನೈಜೀರಿಯಾ ವಿಮಾನ ನಿಲ್ದಾಣ ಭದ್ರತಾ ಸಿಬ್ಬಂದಿಯಿಂದ ಬಂಧನ * ಪರರ ಕಾರಿನ ಫೋಟೋ ತೆಗೆದು ತನ್ನದೆಂದು ಹೇಳಿ ಮಾರಾಟ ಜಾಹೀರಾತು ನೀಡುತ್ತಿದ್ದ ಆರೋಪಿ * ಗ್ರಾಹಕರೊಬ್ಬರಿಂದ 5 ಲಕ್ಷ ರೂ. ಪಡೆದು ವಂಚಿಸಿದ್ದ ವಿದೇಶಿ ಪ್ರಜೆ

ಬೆಂಗಳೂರು: ಓಎಲ್‌ಎಕ್ಸ್‌ ಜಾಲತಾಣದಲ್ಲಿ ಬೇರೆಯವರ ಐಷಾರಾಮಿ ಕಾರುಗಳ ಫೋಟೋ ಹಾಕಿ, ಗ್ರಾಹಕ ರಿಂದ ಹಣ ಪಡೆದು ವಂಚನೆ ಮಾಡುತ್ತಿದ್ದ ನೈಜೀರಿಯಾ ಪ್ರಜೆಯನ್ನು ಸಿಐಡಿ ಪೊಲೀಸರು ಬಂಧಿಸಿದ್ದಾರೆ. 
ಸತತ ಒಂದು ವರ್ಷ ಕಾಲ ತನಿಖೆ ನಡೆಸಿದ ಪೊಲೀಸರು ಕೊನೆಗೂ ಆರೋಪಿಯನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದು, ಅ.19ರವರೆಗೆ ಆರೋಪಿಯನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿ​ದ್ದಾರೆ. ನೈಜಿರಿಯಾ ಮೂಲದ ಡಿಗೂ ಕ್ರಿಸ್ಟಿಯಾ (28) ಬಂಧಿತ. ವಿದ್ಯಾರ್ಥಿ ವೀಸಾದಡಿ ನಗರದ ಟಿ.ಸಿ.ಪಾಳ್ಯದಲ್ಲಿ ಕಳೆದ ಹಲವು ವರ್ಷಗಳಿಂದ ನೆಲೆಸಿದ್ದ ಕ್ರಿಸ್ಟಿಯಾ, ಕೆಲವು ಅಪರಾಧ ಪ್ರಕರಣ​ಗಳಲ್ಲಿ ಭಾಗಿಯಾಗಿದ್ದ. ಈ ಸಂಬಂಧ 2015ರ ಸೆಪ್ಟೆಂಬರ್‌ನಲ್ಲಿ ಆತನನ್ನು ಹಿಡಿಯಲು ಹೋಗಿದ್ದ ಪೊಲೀಸರ ಕಣ್ಣು ತಪ್ಪಿಸಿ ಪರಾರಿಯಾಗಿದ್ದ. ಹೀಗಾಗಿ ಆರೋಪಿ ಪತ್ತೆಗಾಗಿ ಲುಕ್‌ಔಟ್‌ ನೋಟೀಸ್‌ ಹೊರಡಿಸಲಾಗಿತ್ತು. ಈ ಹಿನ್ನೆಲೆಯಲ್ಲಿ ನೈಜೀರಿಯಾಗೆ ತೆರಳಿದ್ದ ಆರೋಪಿ​ಯನ್ನು ಅಲ್ಲಿನ ವಿಮಾನ ನಿಲ್ದಾಣದ ಭದ್ರತಾ ಸಿಬ್ಬಂದಿ ವಶಕ್ಕೆ ಪಡೆದು ರಾಜ್ಯದ ಪೊಲೀಸರಿಗೆ ಹಸ್ತಾಂತರಿಸಿದ್ದಾರೆ. ಆತನಿಂದ ಲ್ಯಾಪ್‌ಟಾಪ್‌, ಮೊಬೈಲ್‌ ಜಪ್ತಿ ಮಾಡಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಆರೋಪಿ ಕ್ರಿಸ್ಟಿಯಾ ಎಂ.ಜಿ.ರಸ್ತೆ, ಎಲೆಕ್ಟ್ರಾನಿಕ್‌ ಸಿಟಿ ಸೇರಿ ನಗರದ ಪ್ರಮುಖ ರಸ್ತೆಗಳಲ್ಲಿ ನಿಲ್ಲಿಸುತ್ತಿದ್ದ ಕಾರುಗಳು ಹಾಗೂ ಶೋರೂಮ್‌'ಗಳಲ್ಲಿದ್ದ ಹೊಸ ಕಾರುಗಳ ಫೋಟೋ ತೆಗೆದು ಓಎಲ್‌'ಎಕ್ಸ್‌'ನಲ್ಲಿ ಹಾಕಿ, ಅದು ತನ್ನ ಕಾರೆಂದು, ಅದನ್ನು ಮಾರಾಟ ಮಾಡುತ್ತಿ​ರುವುದಾಗಿ ಪ್ರಕಟಣೆ ನೀಡುತ್ತಿದ್ದ. ಇದೇ ರೀತಿ ಕಳೆದ ವರ್ಷ ಉದ್ಯಮಿಯೊಬ್ಬರು ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ಪಾರ್ಕಿಂಗ್‌'​ನಲ್ಲಿ ವಿದೇಶಿ ಬ್ರಾಂಡ್‌'ನ ಐಶಾರಾಮಿ ಕಾರು ನಿಲ್ಲಿಸಿ ಹೋಗಿದ್ದರು. ಆ ಕಾರಿನ ಫೋಟೋ ತೆಗೆದ ಆರೋಪಿ, ಓಎಲ್‌ಎಕ್ಸ್‌'ನಲ್ಲಿ ಫೋಟೋ​ದೊಂದಿಗೆ ಜಾಹಿರಾತು ಪ್ರಕಟಿಸಿದ್ದ. ನಂತರ ಗ್ರಾಹಕರೊಬ್ಬರು ಕರೆ ಮಾಡಿ ಕಾರಿನ ಬಗ್ಗೆ ವಿಚಾ​ರಿಸಿದ್ದರು. ಈ ವೇಳೆ ‘ನಾನು ವಿದೇಶಕ್ಕೆ ಹೋಗುತ್ತಿ​ದ್ದೇನೆ. ಏರ್‌ಪೋರ್ಟ್‌ನಲ್ಲಿ ಕಾರು ನಿಲ್ಲಿಸಿದ್ದೇನೆ. ನೋಡಿಕೊಂಡು ಹೋಗಿ' ಎಂದು ಹೇಳಿದ್ದ. ಅದ​ರಂಥೆ ಏರ್‌ಪೋರ್ಟ್‌'ಗೆ ತೆರಳಿ ಕಾರು ನೋಡಿದ್ದ ವ್ಯಕ್ತಿ, ಕೊಳ್ಳಲು ಒಪ್ಪಿಕೊಂಡಿ​ದ್ದರು. ಈ ವೇಳೆ ಅವ​ರಿಂದ ತನ್ನ ಖಾತೆಗೆ 5 ಲಕ್ಷ ರೂ. ಜಮಾ ಮಾಡಿಸಿಕೊಂಡ ಆರೋಪಿ, ನಂತರ ಮೊಬೈಲ್‌ ಸ್ವಿಚ್‌ ಆಫ್‌ ಮಾಡಿ ಪರಾರಿಯಾಗಿದ್ದ ಎಂದು ತನಿಖಾಧಿಕಾರಿಗಳು ತಿಳಿಸಿದ್ದಾರೆ. ಕ್ರಿಸ್ಟಿಯಾ ಇದೇ ರೀತಿ ಈ ಹಿಂದೆ ಸಾಕಷ್ಟುಮಂದಿಗೆ ವಂಚನೆ ಮಾಡಿ ಪರಾರಿ​ಯಾಗಿದ್ದ. ಬಳಿಕ ಸ್ಥಳ ಬದಲಾಯಿಸಿ ಮತ್ತೆ ಕೆಲವ​ರಿಗೆ ಮೋಸ ಮಾಡುತ್ತಿದ್ದ ಎಂದು ಪೊಲೀಸರು ತಿಳಿಸಿದ್ದಾರೆ.

(ಕನ್ನಡಪ್ರಭ ವಾರ್ತೆ)

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

ಡಿಜಿಪಿಯಾಗಿ ಅಲೋಕ್‌ ಕುಮಾರ್ ಮುಂಬಡ್ತಿ, ಸರ್ಕಾರದ ವಿರುದ್ಧ 8 ತಿಂಗಳ ಕಾನೂನು ಹೋರಾಟಕ್ಕೆ ಜಯ!
ರಾಮನಗರ: ರಸ್ತೆಗೆ ಕುರಿಗಳು ಅಡ್ಡಿ, ಹಾರ್ನ್ ಮಾಡಿದ್ದಕ್ಕೆ ಬಸ್ ಚಾಲಕನ ಮೇಲೆ ಗ್ರಾಮಸ್ಥರಿಂದ ಹಲ್ಲೆ!