
ಬೆಂಗಳೂರು: ಕುಟುಂಬ ಸದಸ್ಯರ, ಸಹೋದ್ಯೋಗಿಗಳ, ಅಧಿಕಾರಿಗಳ ಅಥವಾ ರಾಜಕಾರಣಿಗಳ ದಾಖಲೆ ಅಥವಾ ಸಹಿ ಫೋರ್ಜರಿ ಮಾಡಿದ ಉದಾಹರಣೆಗಳನ್ನು ನಾವು ಕಂಡಿದ್ದೇವೆ. ಆದರೆ, ಇಲ್ಲೊಂದು ಅಪರೂಪದ ಪ್ರಕರಣದಲ್ಲಿ ನ್ಯಾಯಾಲಯದ ತೀರ್ಪು ಮತ್ತು ನ್ಯಾಯಾಧೀಶರ ಸಹಿಯನ್ನೇ ಫೋರ್ಜರಿ ಮಾಡಿ ನ್ಯಾಯಾಂಗಕ್ಕೆ ವಂಚಿಸಲು ಯತ್ನಿಸಿದ ಗಂಭೀರ ವಿಚಾರ ತಡವಾಗಿ ಬೆಳಕಿಗೆ ನಡೆದಿದೆ.
ಸಿವಿಲ್ ವ್ಯಾಜ್ಯ ವಿಚಾರಕ್ಕೆ ಸಂಬಂಧಿಸಿದಂತೆ ಚಿಕ್ಕಬಳ್ಳಾಪುರದ ಎರಡನೇ ಹೆಚ್ಚುವರಿ ಜಿಲ್ಲಾ ಹಾಗೂ ಸೆಷನ್ಸ್ ನ್ಯಾಯಾಲಯ ಹೊರಡಿಸಿದ ತೀರ್ಪು ಮತ್ತು ನ್ಯಾಯಾಧೀಶರ ಸಹಿಯನ್ನು ಪೋರ್ಜರಿ ಮಾಡಿದ ಆರೋಪ ಕುರಿತು ಚಿಂತಾಮಣಿ ಟೌನ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದ್ದು, ಶಿಡ್ಲಘಟ್ಟ ತಾಲೂಕಿನ ನಿವಾಸಿ ರಾಮಣ್ಣ (ಹೆಸರು ಬದಲಿಸಲಾಗಿದೆ) ಎಂಬುವರು ಆರೋಪಿಯಾಗಿದ್ದಾರೆ.
ಈ ಮಧ್ಯೆ ನ್ಯಾಯಾಂಗಕ್ಕೆ ವಂಚಿಸುವಂತಹ ಗಂಭೀರ ಅಪರಾಧ ಕೃತ್ಯ ಎಸಗಿದ ಆರೋಪವಿದ್ದರೂ, ಮುಂದಿನ ತಿಂಗಳು ರಾಮಣ್ಣ ಅವರ ಸಹೋದರನ ಮಗಳ ಮದುವೆ ನಿಗದಿಯಾಗಿರುವ ಹಿನ್ನೆಲೆಯಲ್ಲಿ ಈ ಪ್ರಕರಣದಿಂದ ಶುಭ ಕಾರ್ಯಕ್ಕೆ ಅಡಚಣೆಯಾಗಬಾರದು ಎಂಬ ಸದುದ್ದೇಶದಿಂದ ಆರೋಪಿಗೆ ಹೈಕೋರ್ಟ್ ಸುಮಾರು 18 ದಿನ ಮಧ್ಯಂತರ ನಿರೀಕ್ಷಣಾ ಜಾಮೀನು ನೀಡಿದೆ. ಆ ಮೂಲಕ ಹೈಕೋರ್ಟ್ ಮಾನವೀಯತೆ ಮೆರೆದಿದೆ.
ಪ್ರಕರಣವೇನು?:
ಚಿಕ್ಕಬಳ್ಳಾಪುರದಲ್ಲಿರುವ 8 ಎಕರೆ 63 ಗುಂಟೆಗೆ ತನಗೆ ಸೇರಿದೆ ಎಂದು ಘೋಷಿಸುವಂತೆ ಕೋರಿ ರಾಮಣ್ಣ 2012ರಲ್ಲಿ ಶಿಡ್ಲಘಟ್ಟ ಹಿರಿಯ ಸಿವಿಲ್ ನ್ಯಾಯಾಲಯದಲ್ಲಿ ದಾವೆ ಹೂಡಿದ್ದರು. ಆ ದಾವೆಯನ್ನು 2014ರ ಏಪ್ರಿಲ್ 25ರಂದು ನ್ಯಾಯಾಲಯ ವಜಾಗೊಳಿಸಿತ್ತು. ಈ ತೀರ್ಪು ಪ್ರಶ್ನಿಸಿ 2014ರಲ್ಲಿ ಚಿಕ್ಕಬಳ್ಳಾಪುರದ ಎರಡನೇ ಹೆಚ್ಚುವರಿ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಲಯಕ್ಕೆ (ಆಗಿನ ಚಿಂತಾಮಣಿಯ ಎರಡನೇ ತ್ವರಿತಗತಿ ನ್ಯಾಯಾಲಯ) ರಾಮಣ್ಣ ಮೇಲ್ಮನವಿ ಸಲ್ಲಿಸಿದ್ದರು.
ಈ ಮೇಲ್ಮನವಿಯ ವಿಚಾರಣೆ ನಡೆಸಿದ್ದ ನ್ಯಾಯಾಧೀಶರಾದ ಎ.ಕೆ.ನವೀನ ಕುಮಾರಿ ಅವರು, 2015ರ ಮಾರ್ಚ್ 6ರಂದು ಮೇಲ್ಮನವಿ ವಜಾಗೊಳಿಸಿ, ರಾಮಣ್ಣಗೆ 10 ಸಾವಿರ ರು. ದಂಡ ಸಹ ವಿಧಿಸಿದ್ದರು. ಇದಾದ ಕೆಲ ದಿನಗಳ ಬಳಿಕ ನ್ಯಾ.ಎ.ಕೆ. ನವೀನ ಕುಮಾರಿ ಅವರು ಆ ನ್ಯಾಯಾಲಯದಿಂದ ವರ್ಗಾವಣೆಗೊಂಡಿದ್ದರು. ಆ ವೇಳೆ ರಾಮಣ್ಣನು ಕೋರ್ಟ್'ನ ಸಿಬ್ಬಂದಿಯ ಸಹಾಯದಿಂದ ತೀರ್ಪಿನ ಮೂಲ ಪ್ರತಿಯನ್ನು ಅಕ್ರಮವಾಗಿ ಪಡೆದು, ಅದರಲ್ಲಿ ತೀರ್ಪನ್ನು ತನ್ನ ಪರವಾಗಿ ತಿದ್ದಿಕೊಂಡಿದ್ದರು. ಆ ಮೂಲಕ ತಮ್ಮ ಬಳಿಯಿದ್ದ ವಿವಾದಿತ ಜಮೀನು ತಮ್ಮಲ್ಲೇ ಉಳಿಯುವಂತೆ ನೋಡಿಕೊಂಡಿದ್ದರು. ಅಷ್ಟೇ ಅಲ್ಲ, ತಿದ್ದಿದ ಪ್ರತಿಯನ್ನೇ ಕೋರ್ಟ್'ನ ಪತ್ರಾಗಾರಕ್ಕೆ ಸೇರಿಸಿದ್ದರು.
ಕೆಲ ತಿಂಗಳ ನಂತರ ಚಿಕ್ಕಬಳ್ಳಾಪುರ ಕೋರ್ಟ್'ಗೆ ಹೊಸ ನ್ಯಾಯಾಧೀಶರಾಗಿ ಜಿ.ಆರ್.ಪಾಟೀಲ್ ಎಂಬುವರು ಆಗಮಿಸಿದರು. ಅವರಿಗೆ ಈ ಅಕ್ರಮದ ಬಗ್ಗೆ ಸುಳಿವು ದೊರೆತಿತ್ತು. ಈ ಹಿನ್ನೆಲೆಯಲ್ಲಿ ಅವರು ತೀರ್ಪಿನ ಪ್ರತಿಯನ್ನು ತೆಗೆಸಿ ನೋಡಿದಾಗ, ತೀರ್ಪಿನಲ್ಲಿರುವ ನ್ಯಾ.ನವೀನ ಕುಮಾರಿ ಅವರ ಸಹಿಯ ಬಗ್ಗೆ ಅನುಮಾನ ಬಂದಿತು. ಅವರು ಸ್ಪಷ್ಟನೆ ಕೋರಿ ತೀರ್ಪಿನ ಪ್ರತಿಯನ್ನು ಸ್ಕ್ಯಾನ್ ಮಾಡಿ ಇ-ಮೇಲ್ ಮೂಲಕ ನ್ಯಾ.ನವೀನ ಕುಮಾರಿ ಅವರಿಗೆ ಕಳುಹಿಸಿಕೊಟ್ಟಿದ್ದರು.
ತೀರ್ಪಿನ ಸ್ಕ್ಯಾನ್ ಪ್ರತಿ ಪರಿಶೀಲಿಸಿದ್ದ ನ್ಯಾ.ನವೀನ ಕುಮಾರಿ ಅವರು, ತೀರ್ಪಿನ ಪ್ರತಿಯಲ್ಲಿರುವ ಸಹಿ ನನ್ನದಲ್ಲ ಎಂದು ಸ್ಪಷ್ಟಪಡಿಸಿರುತ್ತಾರೆ. ಇದರಿಂದ ನ್ಯಾಯಾಧೀಶ ಜಿ.ಆರ್. ಪಾಟೀಲ್ ಅವರು, 2017ರ ಜೂನ್ 2ರಂದು ಚಿಂತಾಮಣಿ ಟೌನ್ ಪೊಲೀಸ್ ಠಾಣೆಗೆ ದೂರು ನೀಡಿದ್ದರು.
ರಾಮಣ್ಣ ಅವರು ಸರ್ಕಾರಕ್ಕೆ ಸೇರಿದ ಬೆಲೆ ಬಾಳುವ ಜಮೀನನ್ನು ಕಬಳಿಸುವ ದುರುದ್ದೇಶದಿಂದ ಆಗಿನ ನ್ಯಾಯಾಧೀಶರಾದ ಎ.ಕೆ.ನವೀನ ಕುಮಾರಿ ಅವರು ಹೊರಡಿಸಿದ್ದ ಅಸಲಿ ತೀರ್ಪು ಹಾಗೂ ಡಿಕ್ರಿ ಕಡತವನ್ನು ತೆಗೆದುಕೊಂಡು, ತಮ್ಮ ಅನುಕೂಲಕ್ಕೆ ತಕ್ಕಂತೆ ತೀರ್ಪು ಹಾಗೂ ನ್ಯಾಯಾಧೀಶರ ಸಹಿ ಪೋರ್ಜರಿ ಮಾಡಿದ್ದಾರೆ ಎಂದು ದೂರಿನಲ್ಲಿ ಆರೋಪಿಸಲಾಗಿತ್ತು. ಪೊಲೀಸರು ರಾಮಣ್ಣ ವಿರುದ್ಧ ವಂಚನೆ ಹಾಗೂ ಫೋರ್ಜರಿ ಪ್ರಕರಣ ದಾಖಲಿಸಿದ್ದರು. ಪ್ರಕರಣಕ್ಕೆ ಸಂಬಂಧಪಟ್ಟಂತೆ ಚಿಕ್ಕಬಳ್ಳಾಪುರ ಹಿರಿಯ ಪ್ರಧಾನ ಜಿಲ್ಲಾ ಹಾಗೂ ಸೆಷನ್ಸ್ ನ್ಯಾಯಾಲಯವು ರಾಮಣ್ಣಗೆ ನಿರೀಕ್ಷಣಾ ಜಾಮೀನು ನಿರಾಕರಿಸಿತ್ತು. ಈ ಹಿನ್ನೆಲೆಯಲ್ಲಿ ಆತ ಹೈಕೋರ್ಟ್ ಮೊರೆ ಹೋಗಿದ್ದ.
ವರದಿ: ವೆಂಕಟೇಶ್ ಕಲಿಪಿ, ಕನ್ನಡಪ್ರಭ
epaperkannadaprabha.com
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.