
ಬೆಂಗಳೂರು: ಲಾಲ್'ಬಾಗ್'ನಲ್ಲಿ ಪ್ರತಿ ದಿನ ಸಂಗ್ರಹವಾಗುವ ಎಲೆಗಳಿಂದ ಫಲವತ್ತಾದ ಗೊಬ್ಬರ ತಯಾರಿಸುವ ಉದ್ದೇಶದಿಂದ ಉದ್ಯಾನದಲ್ಲಿ ಎಂಟು ಕಡೆ ‘ಲೀಫ್ ಕಾಂಪೋಸ್ಟರ್’ ಅಳವಡಿಸಲಾಗಿದೆ ಎಂದು ರಾಜ್ಯ ತೋಟಗಾರಿಕೆ ಇಲಾಖೆ (ಉದ್ಯಾನ ಮತ್ತು ತೋಟ) ಜಂಟಿ ನಿರ್ದೇಶಕ ಡಾ.ಎಂ.ಜಗದೀಶ್ ತಿಳಿಸಿದರು.
ಲಾಲ್'ಬಾಗ್ ಉದ್ಯಾನದಲ್ಲಿ ತಿಂಗಳಿಗೆ 5ರಿಂದ 6 ಟ್ರಕ್'ನಷ್ಟು ಎಲೆಗಳು ಸಂಗ್ರಹವಾಗುತ್ತದೆ. ಈ ಹಿಂದೆ ಸಂಗ್ರಹವಾದ ಎಲೆಗಳನ್ನು ದೊಡ್ಡ ಹಳ್ಳ ಮಾಡಿ ತುಂಬಿಸಿ ಕೊಳೆಸಲಾಗುತ್ತಿತ್ತು. ಈ ಪ್ರಕ್ರಿಯೆಯಿಂದ ಗೊಬ್ಬರ ತಯಾರಾಗಲು 6ರಿಂದ 7 ತಿಂಗಳ ಕಾಲಾವಕಾಶ ಬೇಕಿತ್ತು. ಈ ಗೊಬ್ಬರ ದುರ್ವಾಸನೆಯಿಂದ ಕೂಡಿರುತಿತ್ತು. ಈ ಹಿನ್ನೆಲೆಯಲ್ಲಿ ಸುವಾಸನೆಯುಕ್ತ ಗೊಬ್ಬರ ತಯಾರಿಸಲು ಲೀಫ್ ಕಾಂಪೋಸ್ಟರ್‌ಗಳನ್ನು ಅಳವಡಿಸಲಾಗಿದೆ. ಈ ವ್ಯವಸ್ಥೆಯಿಂದ ಮೂರು ತಿಂಗಳಲ್ಲಿ ಗೊಬ್ಬರ ತಯಾರಾಗುತ್ತದೆ ಎಂದು ವಿವರಿಸಿದರು.
ಪ್ರಸ್ತುತ ಉದ್ಯಾನದ ಆಯ್ದ ಜಾಗಗಳಲ್ಲಿ ಲೀಫ್ ಕಾಂಪೋಸ್ಟರ್‌ಗಳನ್ನು ಅಳವಡಿಸಲಾಗಿದೆ. ತಿಂಗಳಾಂತ್ಯಕ್ಕೆ ಇನ್ನು 10 ಕಾಂಪೋಸ್ಟರ್‌ಗಳನ್ನು ಅಳವಡಿಸಲು ತೀರ್ಮಾನಿಸಲಾಗಿದೆ. ಪ್ರಯೋಗಿಕವಾಗಿ ಎಲೆಗಳ ನಡುವೆ ಎರೆಹುಳು ಬಿಡಲು ನಿರ್ಧರಿಸಿದ್ದೇವೆ. ಇದರಿಂದ ಗುಣಮಟ್ಟದ ಗೊಬ್ಬರ ತಯಾರಾಗುವ ನಿರೀಕ್ಷೆಯಿದೆ ಎಂದು ಅವರು ಹೇಳಿದರು.
ಏನಿದು ಲೀಫ್ ಕಾಂಪೋಸ್ಟರ್?
ಕಬ್ಬಿಣದ ತಂತಿ ಮತ್ತು ಸರಳುಗಳ ಐದು ಅಡಿ ಉದ್ದ ಮತ್ತು ಅಗಲದ ಚೌಕಾಕಾರದ ಬಿನ್‌ಗಳಿಗೆ ಲೀಫ್ ಕಾಂಪೋಸ್ಟರ್ ಎಂದು ಕರೆಯಲಾಗಿದೆ. ಈ ಬಿನ್‌ಗಳಿಗೆ ಮೇಲ್ಭಾಗದಲ್ಲಿ ಮುಚ್ಚಳವೂ ಇದೆ. ಬಿನ್ ಆಕಾರದ ಸಣ್ಣ ಹಳ್ಳ ತೋಡಿ ನೆಲಕ್ಕೆ ಕಲ್ಲು ಹಾಸಿ ಅದರ ಮೇಲೆ ಲೀಫ್ ಕಾಂಪೋಸ್ಟರ್‌ಗಳನ್ನು ಇರಿಸಲಾಗುತ್ತದೆ. ಬಳಿಕ ಸಂಗ್ರಹಿಸಿದ ಎಲೆಗಳನ್ನು ಇದರಲ್ಲಿ ತುಂಬಲಾಗುತ್ತದೆ. ಎಲೆಗಳು ಕೊಳೆಯದಂತೆ ಆಗಾಗ ನಿಗದಿತ ನೀರು ಹಾಕಲಾಗುತ್ತದೆ. ಈ ಕ್ರಮದಿಂದ 3 ತಿಂಗಳಲ್ಲಿ ಫಲವತ್ತಾದ ಗೊಬ್ಬರ ತಯಾರಾಗುತ್ತದೆ.
ಕನ್ನಡಪ್ರಭ ವಾರ್ತೆ
epaperkannadaprabha.com
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.