
ಬೆಂಗಳೂರು(ಜೂ.3): ಸರಸ ವಿರಸಗಳ ಸಮ್ಮಿಶ್ರಣವೇ ದಾಂಪತ್ಯ ಎನ್ನುತ್ತಾರೆ. ಸಂಸಾರದಲ್ಲಿ ಬರಬಹುದಾದ ಭಿನ್ನಾಭಿಪ್ರಾಯಗಳನ್ನು ಬದಿಗಿರಿಸಿ ಪತಿ ಪತ್ನಿ ಒಟ್ಟಿಗೆ ಹೆಜ್ಜೆ ಇಡುವುದೇ ಸುಖಿ ದಾಂಪತ್ಯದ ಲಕ್ಷಣ. ಆದರೆ ಈ ವಿರಸವೇ ಅತಿಯಾಗಿ, ಸಂಬಂಧಗಳ ಮೇಲಿನ ನಂಬಿಕೆ ಮಾಯವಾದಾಗ ದಾಂಪತ್ಯ ಎಂಬುದು ನರಕಸದೃಶ್ಯವಾಗುವುದು ಸುಳ್ಳಲ್ಲ.
ಪತ್ನಿ ವಿರುದ್ದ ಸೇಡು ತೀರಿಸಿಕೊಳ್ಳಲು ಇಲ್ಲೊಬ್ಬ ಭೂಪ ಮಾಡಿದ ಕಿತಾಪತಿ ಎಂತದ್ದು ನೋಡಿ. ಪತ್ನಿ ಜೊತೆಗೆ ಭಿನ್ನಾಭಿಪ್ರಾಯವಿದೆ ಎಂಬ ಏಕೈಕ ಕಾರಣಕ್ಕೆ ಪತಿಯೋರ್ವ ಆಕೆಯ ಮೊಬೈಲ್ ನಂಬರ್ ನ್ನು ಡೇಟಿಂಗ್ ವೆಬ್‌ಸೈಟ್‌ನಲ್ಲಿ ಪೋಸ್ಟ್ ಮಾಡಿದ ಘಟನೆ ನಡೆದಿದೆ.
ತೀರ್ಥಹಳ್ಳಿ ಮೂಲದ ವಿನಯ್ ಎಂಬ ಪಾಪಿ ಪತಿ ತನ್ನ ಪತ್ನಿಯನ್ನು ಇಕ್ಕಟ್ಟಿಗೆ ಸಿಲುಕಿಸಲು ಆಕೆಯ ಮೊಬೈಲ್ ನಂಬರ್ ನ್ನು ಡೇಟಿಂಗ್ ವೆಬ್‌ಸೈಟ್‌ನಲ್ಲಿ ಪೋಸ್ಟ್ ಮಾಡಿದ್ದಾನೆ. ವಿರಸದ ಕಾರಣಕ್ಕೆ ಪತ್ನಿಯನ್ನು ತ್ಯಜಿಸಿದ್ದ ವಿನಯ್, ಫೇಸ್‌ಬುಕ್‌ನಲ್ಲಿ ನಕಲಿ ಅಕೌಂಟ್ ಓಪನ್ ಮಾಡಿ ಅದರಲ್ಲಿ ತನ್ನ ಪತ್ನಿಯ ಫೋಟೋ ಜೊತೆಗೆ ಮತ್ತೊಬ್ಬ ವ್ಯಕ್ತಿಯ ಫೋಟೋ ಎಡಿಟ್ ಮಾಡಿ ಹಾಕಿದ್ದ.
ಬಳಿಕ ಲೋಕ್ಯಾಂಟೋ ವೆಬ್‌ಸೈಟ್‌ನಲ್ಲಿ ಪತ್ನಿಯ ಫೋಟೋ ಮತ್ತು ನಂಬರ್ ಹಾಕಿದ್ದ. ಇದರಿಂದಾಗಿ ಅಪರಿಚಿತರು ಆತನ ಪತ್ನಿಗೆ ನಿರಂತರವಾಗಿ ಕರೆ ಮಾಡಿ ಅಸಭ್ಯವಾಗಿ ವರ್ತಿಸಲು ಶುರುಮಾಡಿದ್ದರು. ಇದರಿಂದ ತೀವ್ರ ಇಕ್ಕಟ್ಟಿಗೆ ಸಿಲುಕಿದ ಆತನ ಪತ್ನಿ ಬೇಸತ್ತು ಪೊಲೀಸರಿಗೆ ದೂರು ನೀಡಿದ್ದರು.
ವಿನಯ್ ಪತ್ನಿ ನೀಡಿದ ದೂರನ್ನು ಸ್ವೀಕರಿಸಿದ ಸೈಬರ್ ಕ್ರೈಮ್ ಪೊಲೀಸರು ವಿನಯ್ ನನ್ನು ಬಂಧಿಸಿದ್ದಾರೆ. ಪತ್ನಿಯನ್ನು ಮುಜುಗರಕ್ಕೀಡುಮಾಡಲೆಂದೇ ಆಕೆಯ ನಂಬರ್ ನ್ನು ವೆಬ್‌ಸೈಟ್‌ನಲ್ಲಿ ಪೋಸ್ಟ್ ಮಾಡಿದ್ದಾಗಿ ವಿನಯ್ ವಿಚಾರಣೆ ವೇಳೆ ಬಾಯ್ಬಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.