
ಕೋಲ್ಕತಾ(ಡಿ. 02): ಟೋಲ್ ಪ್ಲಾಜಾದಲ್ಲಿ ಅನುಮತಿ ಇಲ್ಲದೇ ಸೇನೆ ಬಂದಿರುವುದನ್ನು ಆಕ್ಷೇಪಿಸಿ ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ನಿನ್ನೆ ರಾತ್ರಿಯಿಡೀ ತಮ್ಮ ಸಚಿವಾಲಯದಲ್ಲೇ ಕೂತ ಘಟನೆ ವರದಿಯಾಗಿದೆ. ಮೂಲಗಳ ಪ್ರಕಾರ, ಸೈನಿಕರು ನಿರ್ಗಮಿಸಿದರೂ ದೀದಿ ಇನ್ನೂ ಕೂಡ ಅದೇ ಸ್ಥಳದಲ್ಲಿ ಕೂತಿದ್ದಾರೆ. ಮಮತಾ ಅವರ ವರ್ತನೆಯನ್ನು ಖಂಡಿಸಿರುವ ಬಂಗಾಳದ ವಿಪಕ್ಷ ಬಿಜೆಪಿಯು, ಅವರನ್ನು ಮಾನಸಿಕ ಅಸ್ವಸ್ಥರೆಂದು ಬಣ್ಣಿಸಿದೆ.
ಏನಿದು ಪ್ರಕರಣ?
ಹೂಗ್ಲಿ ಬ್ರಿಜ್ ಬಳಿ ಇರುವ ಹೆದ್ದಾರಿ ಸುಂಕ ಕೇಂದ್ರದಲ್ಲಿ ಕೆಲ ಮಾಹಿತಿ ಕೋರಿ ಸೈನಿಕರು ಆಗಮಿಸಿದ್ದರು. ಈ ಸುಂಕ ವಸೂಲಾತಿ ಕೇಂದ್ರವು ಸಚಿವಾಲಯದಿಂದ 500 ಮೀಟರ್ ಮಾತ್ರವೇ ದೂರವಿದೆ. ರಾಜ್ಯ ಸರಕಾರದ ಗಮನಕ್ಕೆ ತರದೆಯೇ ಸೇನೆಯು ಈ ಸೂಕ್ಷ್ಮ ಪ್ರದೇಶಕ್ಕೆ ಹೇಗೆ ಬಂದಿತೆಂಬುದು ಮಮತಾ ಬ್ಯಾನರ್ಜಿಯವರ ಪ್ರಶ್ನೆ. ಪ್ರಜಾತಂತ್ರ ವ್ಯವಸ್ಥೆಯನ್ನು ರಕ್ಷಿಸುವುದಕ್ಕೋಸ್ಕರ ಸೇನೆ ಇಲ್ಲಿಂದ ಕಾಲ್ತೆಯುವವರೆಗೂ ತಾನು ಸಚಿವಾಲಯದಿಂದ ಹೊರಹೋಗುವುದಿಲ್ಲವೆಂದು ತುರ್ತು ಪತ್ರಿಕಾಗೋಷ್ಠಿಯಲ್ಲಿ ಮಮತಾ ಬ್ಯಾನರ್ಜಿ ನಿನ್ನೆ ಹೇಳಿಕೆ ನೀಡಿದರು. ಸೈನಿಕರು ಟೋಲ್ ಕೇಂದ್ರದಿಂದ ಹೊರಹೋದರೂ ಅವರ ನಿರಶನ ಮುಂದುವರಿಯಿತು.
ಸೇನೆ ಸ್ಪಷ್ಟನೆ:
"ಸರಕು ಸಾಗಣೆ ವಾಹನಗಳ ಅಂಕಿ-ಅಂಶಗಳ ಸಂಗ್ರಹಣೆಗೆ ದೇಶಾದ್ಯಂತ ಸೇನೆ ಪ್ರತೀ ವರ್ಷ ಇಂತಹ ಕಾರ್ಯಾಚರಣೆಗಳನ್ನು ಮಾಡುತ್ತದೆ. ಇದೇ ಉದ್ದೇಶದಿಂದ ಪಶ್ಚಿಮ ಬಂಗಾಳದ ಪೊಲೀಸ್ ಇಲಾಖೆಯ ಸಹಯೋಗದಲ್ಲಿ ಇಲ್ಲಿನ ಟೋಲ್ ಕೇಂದ್ರಕ್ಕೆ ಸೈನಿಕರು ಭೇಟಿ ಕೊಟ್ಟಿದ್ದರು" ಎಂದು ರಕ್ಷಣಾ ಸಚಿವಾಲಯವು ಸ್ಪಷ್ಟನೆ ನೀಡಿತು.
ದೀದಿ ನಿರಾಕರಣೆ:
ರಕ್ಷಣಾ ಸಚಿವಾಲಯದ ಸ್ಪಷ್ಟನೆಯನ್ನು ಮಮತಾ ಬ್ಯಾನರ್ಜಿ ತಳ್ಳಿಹಾಕಿದ್ದಾರೆ. "ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಬಳಿ ಈ ಎಲ್ಲ ಮಾಹಿತಿ ಲಭ್ಯವಿರುತ್ತದೆ. ಅದು ಬಿಟ್ಟು ಇಲ್ಲಿಗೆ ಬಂದು ಮಾಹಿತಿ ಪಡೆದುಕೊಳ್ಳುವ ಪ್ರಮೇಯವಿಲ್ಲ" ಎಂದು ದೀದಿ ವಾದಿಸಿದ್ದಾರೆ.
ಸರಕಾರವನ್ನು ಬೀಳಿಸುವ ಸಂಚು?
"ಮಹಾರಾಷ್ಟ್ರ, ಕೇರಳ, ಒಡಿಶಾ ಮೊದಲಾದ ರಾಜ್ಯಗಳಲ್ಲಿ ಇಂತಹ ಕಾರ್ಯಗಳು ನಡೆಯುತ್ತಿಲ್ಲ. ಬಂಗಾಳಕ್ಕೆ ಬಂದು ಯಾಕೆ ಮಾಡುತ್ತಿದ್ದಾರೆ? ಜನರ ಪರ ತಾನು ಧ್ವನಿ ಎತ್ತುತ್ತಿರುವುದರಿಂದ ಹೀಗೆ ಮಾಡಲಾಗುತ್ತಿದೆಯಾ? ಸೇನೆಯ ಈ ನಡೆಯು ರಾಜಕೀಯ ಪ್ರೇರಿತ, ಅಸಂವಿಧಾನಿಕ, ಅನೈತಿಕ ಹಾಗೂ ಪ್ರಜಾತಂತ್ರವಿರೋಧಿಯಾಗಿದೆ... ಇವತ್ತು ಬಂಗಾಳದಲ್ಲಿ ನಡೆದಿದೆ, ನಾಳೆ ಬಿಹಾರದಲ್ಲಿ ನಡೆಯಬಹುದು, ಉತ್ತರಪ್ರದೇಶ, ತಮಿಳುನಾಡು ಮತ್ತಿತರ ರಾಜ್ಯಗಳಲ್ಲೂ ನಡೆಯಬಹುದು. ಇದು ಬಹಳ ಗಂಭೀರ ವಿಷಯವಾಗಿದ್ದು, ತುರ್ತುಪರಿಸ್ಥಿತಿಗಿಂತಲೂ ಅಪಾಯಕರ ಸ್ಥಿತಿಯಾಗಿದೆ. ನಾವು ತೀರಾ ಕರಾಳ ದಿನವನ್ನು ಎದುರಿಸುತ್ತಿದ್ದೇವೆ" ಎಂದು ಮಮತಾ ಬ್ಯಾನರ್ಜಿ ಟೀಕಿಸಿದ್ದಾರೆ.
ಟೋಲ್'ನಲ್ಲಿ ದರೋಡೆ:
ಸುಂಕ ವಸೂಲಾತಿ ಕೇಂದ್ರದಲ್ಲಿ ಸೈನಿಕರು ವಾಹನ ಸವಾರರಿಂದ ಹಣ ವಸೂಲಿ ಮಾಡುತ್ತಿದ್ದಾರೆ ಎಂದು ತೃಣಮೂಲ ಕಾಂಗ್ರೆಸ್ ಪಕ್ಷದ ನಾಯಕರು ಆರೋಪಿಸಿದ್ದಾರೆ. ಈ ಬಗ್ಗೆ ಮಾತನಾಡಿದ ಮಮತಾ ಬ್ಯಾನರ್ಜಿ, ಇದೊಂದು ಹಗಲು ದರೋಡೆ ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಬಿಜೆಪಿ ಟೀಕೆ:
ಟೋಲ್ ಪ್ಲಾಜಾದಲ್ಲಿ ಸೈನಿಕರ ಉಪಸ್ಥಿತಿ ವಿರೋಧಿಸಿ ಸಚಿವಾಲಯದಲ್ಲಿ ಇಡೀ ರಾತ್ರಿ ಉಳಿದ ಸಿಎಂ ಮಮತಾ ಬ್ಯಾನರ್ಜಿಯವರ ನಡೆಯನ್ನು ಬಿಜೆಪಿ ಹುಚ್ಚು ಎಂದು ಬಣ್ಣಿಸಿದೆ. ಮಮತಾ ಬ್ಯಾನರ್ಜಿಯವರು ಮಾನಸಿಕ ಅಸ್ವಸ್ಥರಾಗಿದ್ದಾರೆ. ಅವರನ್ನು ಮೆಂಟಲ್ ಹಾಸ್ಪಿಟಲ್'ಗೆ ಸೇರಿಸಬೇಕಾಗಿದೆ ಎಂದು ಬಿಜೆಪಿ ನಾಯಕ ಸಿದ್ಧಾರ್ಥ್ ನಾಥ್ ಸಿಂಗ್ ಅಭಿಪ್ರಾಯಪಟ್ಟಿದ್ದಾರೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.