ನಿಗೂಢ ಕಣ್ಮರೆಯಾಗಿದ್ದ ಮಲ್ಪೆ ಬೋಟ್‌ ಪತ್ತೆ

By Web DeskFirst Published May 3, 2019, 7:25 AM IST
Highlights

ಕಳೆದ ಹಲವು ದಿನಗಳ ಹಿಂದೆ ನಾಪತ್ತೆಯಾಗಿದ್ದ ಮಲ್ಪೆ ಮೀನುಗಾರರ ಬೋಟ್ ಪತ್ತೆಯಾಗಿದೆ

ಉಡುಪಿ :  ಏಳು ಮೀನುಗಾರರೊಂದಿಗೆ ನಾಲ್ಕೂವರೆ ತಿಂಗಳ ಹಿಂದೆ ನಿಗೂಢವಾಗಿ ನಾಪತ್ತೆಯಾಗಿದ್ದ ಮಲ್ಪೆಯ ‘ಸುವರ್ಣ ತ್ರಿಭುಜ’ ಮೀನುಗಾರಿಕಾ ಬೋಟಿನ ರಹಸ್ಯ ಕೊನೆಗೂ ಬಯಲಾಗಿದೆ. ಮಹಾರಾಷ್ಟ್ರದ ಮಾಳ್ವಣ್‌ ಕಡಲ ತೀರದಿಂದ 33 ಕಿ.ಮೀ. ದೂರದ ಸಮುದ್ರದಲ್ಲಿ ಪತ್ತೆಯಾಗಿದ್ದು, ಇದನ್ನು ಭಾರತೀಯ ನೌಕಾ ಸೇನೆಯೇ ಖಚಿತಪಡಿಸಿದೆ. ಈ ಮೂಲಕ ಬೋಟಿನ ನಾಪತ್ತೆ ಕುರಿತು ಸೃಷ್ಟಿಯಾಗಿದ್ದ ಗೊಂದಲಗಳಿಗೆ ತೆರೆಬಿದ್ದಂತಾಗಿದೆ.

ಮಹಾರಾಷ್ಟ್ರದ ಸಮುದ್ರ ತೀರದಲ್ಲಿ ಡಿ.15ರಂದು ಕಾಣೆಯಾದ ಈ ಬೋಟು ಅಪಹರಣವಾಗಿರಬೇಕೆಂದೇ ಮೊದಲು ಭಾವಿಸಲಾಗಿತ್ತು, ಆ ಬಳಿಕ ಮಹಾರಾಷ್ಟ್ರದ ಬಳಿ ಬೋಟಿನ ಟ್ರೇಗಳು ಪತ್ತೆಯಾದ ಹಿನ್ನೆಲೆಯಲ್ಲಿ ಸಮುದ್ರದಲ್ಲಿ ಮುಳುಗಿರಬೇಕು ಎಂಬ ಖಚಿತತೆಗೆ ಬರಲಾಗಿತ್ತು. 

ಅದಕ್ಕೆ ಪೂರಕವಾಗಿ ಈ ಹಿಂದೆ ನೌಕಾಪಡೆಯ ಶೋಧ ನೌಕೆಗಳು ಹುಡುಕಾಟ ನಡೆಸಿದ ಸಂದರ್ಭದಲ್ಲಿ ಸಮುದ್ರದಲ್ಲಿ 60 ಮೀಟರ್‌ ಆಳದಲ್ಲಿ 23 ಮೀಟರ್‌ ಉದ್ದ ಬೋಟಿನಾಕಾರದ ವಸ್ತು ಪತ್ತೆಯಾಗಿತ್ತು. ಅದು ಸುವರ್ಣ ತ್ರಿಭುಜವಾಗಿರಬಹುದು ಎಂದು ಭಾವಿಸಲಾಗಿತ್ತು. ಆದರೆ ಅದು ಬೋಟಿನ ಅವಶೇಷ ಅಲ್ಲ, ಅದೊಂದು ಬಂಡೆಕಲ್ಲು ಎಂದು ಖಚಿತವಾಗುತ್ತಿದ್ದಂತೆ ಮತ್ತೆ ಗೊಂದಲ ಶುರುವಾಗಿತ್ತು. ಆದರೆ, ಈಗ ಮಾಳ್ವಣ್‌ ಕಡಲ ತೀರದ ಸಮೀಪದಲ್ಲಿ ಬೋಟ್‌ನ ಅವಶೇಷ ಮೇ 1ರಂದು ಪತ್ತೆಯಾಗಿರುವುದು ಬೋಟ್‌ನ ನಿಗೂಢ ಕಣ್ವರೆಗೆ ಸಂಬಂಧಿಸಿದ ಗೊಂದಲಕ್ಕೆ ತೆರೆ ಬಿದ್ದಿದೆ. ಇನ್ನು ಈ ಬೋಟ್‌ ಹೇಗೆ ಮುಳುಗಿತು ಎನ್ನುವ ವಿಚಾರ ಇನ್ನಷ್ಟೇ ಬಹಿರಂಗವಾಗಬೇಕಿದೆ.

click me!