ಕೊನೆಗೂ ರಾಜ್ಯಕ್ಕೆ ನೀರು ಹರಿಸಿದ ಮಹಾರಾಷ್ಟ್ರ

By Web DeskFirst Published May 13, 2019, 8:12 AM IST
Highlights

ಕೊನೆಗೂ ರಾಜ್ಯಕ್ಕೆ ನೀರು ಹರಿಸಿದ ಮಹಾರಾಷ್ಟ್ರ| ಕೊಯ್ನಾ ಬದಲು ಕಾಳಮ್ಮವಾಡಿಯಿಂದ ಬಿಡುಗಡೆ

ಚಿಕ್ಕೋಡಿ[ಮೇ.13]: ಮಹಾರಾಷ್ಟ್ರ ಕಾಳಮ್ಮವಾಡಿ ಜಲಾಶಯದಿಂದ ಸುಮಾರು 700 ಕ್ಯುಸೆಕ್‌ ನೀರು ದೂಧಗಂಗಾ ನದಿಗೆ ಮೇ 9ರಿಂದಲೇ (ಚಿಕ್ಕೋಡಿ ತಾಲೂಕಿಗೆ) ಹರಿದು ಬರುತ್ತಿದೆ. ಪ್ರತಿ ವರ್ಷ ಡಿಸೆಂಬರ್‌ನಿಂದ ಜೂನ್‌ವರೆಗೆ 4 ಟಿಎಂಸಿ ನೀರು ಬಿಡುವ ಒಪ್ಪಂದದ ಹಿನ್ನೆಲೆಯಲ್ಲಿ ಮಹಾರಾಷ್ಟ್ರ ಸರ್ಕಾರ ಹಂತ ಹಂತವಾಗಿ ಕರ್ನಾಟಕಕ್ಕೆ ದೂಧಗಂಗಾ ನದಿಗೆ ನೀರು ಬಿಡುಗಡೆ ಮಾಡಬೇಕು. ಈಗ ಸಣ್ಣ ಅಣೆಕಟ್ಟಾದ ಕಾಳಮ್ಮವಾಡಿ ಜಲಾಶಯದಿಂದ ಮಾತ್ರ ನದಿಗೆ ಹರಿ ಬಿಟ್ಟಿದ್ದು, ಕೊಯ್ನಾದಿಂದ ಯಾವಾಗ ಬಿಡುತ್ತಾರೆ ಎಂಬುವುದೇ ಪ್ರಶ್ನೆಯಾಗಿ ಉಳಿದಿದೆ.

ಕಾಳಮ್ಮವಾಡಿಯಿಂದ ದೂಧಗಂಗಾ ನದಿಗೆ ಬರುವ ನೀರು ಮೇ 9ರಂದು ಚಿಕ್ಕೋಡಿ ತಾಲೂಕಿನ ಕಾರದಗಾ, ಬೇಡಕಿಹಾಳ ತಲುಪಿದೆ. ಶುಕ್ರವಾರ ಸದಲಗಾ ದಾಟಿ ಮಲಿಕವಾಡ ಮತ್ತು ಯಕ್ಸಂಬಾ ತಲುಪಿದ್ದು, ಶನಿವಾರ ಭಾನುವಾರವೂ ನೀರು ಹರಿದು ಬ್ಯಾರೇಜ್‌ನಲ್ಲಿ ಸಂಗ್ರಹಗೊಂಡಿದೆ ಎಂದು ನೀರಾವರಿ ಇಲಾಖೆ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

ಕೊಯ್ನಾ ಜಲಾಶಯದಿಂದ ಕೃಷ್ಣಾ ನದಿಗೆ ನೀರು ಹರಿಸಬೇಕು ಎಂದು ರಾಜ್ಯ ಸರ್ಕಾರ ಮಹಾರಾಷ್ಟ್ರ ಸರ್ಕಾರದ ಜೊತೆ ಮಾತುಕತೆ ನಡೆಸಿದೆ. ಆದರೂ ಕೊಯ್ನಾದಿಂದ ಕೃಷ್ಣಾ ನದಿಗೆ ನೀರು ಹರಿದು ಬರುತ್ತಿಲ್ಲ. ನೀರು ಬಿಡುವ ಯಾವುದೇ ಮಾಹಿತಿಯೂ ನೀರಾವರಿ ಇಲಾಖೆಗೆ ಬಂದಿಲ್ಲ ಎಂದು ಸಣ್ಣ ನೀರಾವರಿ ಇಲಾಖೆ ಸಹಾಯಕ ಅಭಿಯಂತರ ಎಸ್‌.ಎಸ್‌.ಮಕಾನಿ ತಿಳಿಸಿದರು.

click me!