ಸಿದ್ದರಾಮಯ್ಯ ವಿರುದ್ಧ ಹೇಳಿಕೆ ನೀಡಿಸಿದರೇ HDK, HDD ?

By Web DeskFirst Published May 13, 2019, 8:08 AM IST
Highlights

ಮಾಜಿ ಸಿಎಂ ಸಿದ್ದರಾಮಯ್ಯ ವಿರುದ್ಧ ಜೆಡಿಎಸ್ ರಾಜ್ಯಾಧ್ಯಕ್ಷ ವಿಶ್ವನಾಥ್ ನೀಡಿದ ಹೇಳಿಕೆ ಸಿಎಂ ಕುಮಾರಸ್ವಾಮಿ ಹಾಗೂ ದೇವೇಗೌಡರ ಅಭಿಪ್ರಾಯವೇ ಎನ್ನುವ ವಿಚಾರವೊಂದು ಇದೀಗ ಸದ್ದು ಮಾಡುತ್ತಿದೆ.

ಬೆಂಗಳೂರು : ಸಿದ್ದರಾಮಯ್ಯ ಅವರು ಮತ್ತೆ ಮುಖ್ಯಮಂತ್ರಿಯಾಗಬೇಕು ಎಂಬ ಕಾಂಗ್ರೆಸ್ ಶಾಸಕರು, ಸಚಿವರ ಸರಣಿ ಹೇಳಿಕೆಗಳಿಗೆ ಇದೇ ಮೊದಲ ಬಾರಿಗೆ ಮಿತ್ರ ಪಕ್ಷ ಜೆಡಿಎಸ್‌ನ ರಾಜ್ಯಾಧ್ಯಕ್ಷ ಎಚ್.ವಿಶ್ವನಾಥ್ ತೀಕ್ಷ್ಣವಾಗಿ ತಿರುಗೇಟು ನೀಡಿದ್ದು ಕುತೂಹಲ ಮೂಡಿಸಿದೆ. ಮತ್ತೊಮ್ಮೆ ಮುಖ್ಯಮಂತ್ರಿಯಾಗ ಬೇಕು ಎಂಬ ಕಾಂಗ್ರೆಸ್ಸಿನ ಸಚಿವರು ಹಾಗೂ ಶಾಸಕರ ಹೇಳಿಕೆಗೆ ಜೆಡಿಎಸ್‌ನ ಸಚಿವರಾಗಲಿ ಅಥವಾ ಶಾಸಕರಾಗಲಿ
ಎದಿರೇಟು ನೀಡಬಹುದು ಎಂಬ ನಿರೀಕ್ಷೆ ಹುಸಿಯಾಗಿದ್ದು, ಸಿದ್ದರಾಮಯ್ಯ ಅವರ ಬದ್ಧ ವೈರಿ ಎಂದೇ ಗುರುತಿಸಲ್ಪಡುವ ವಿಶ್ವನಾಥ್ ಅವರು ವಾಗ್ದಾಳಿ ನಡೆಸಿರುವುದು ಸಹಜ ವಾಗಿಯೇ ಮಿತ್ರ ಪಕ್ಷಗಳಲ್ಲಿ ಅಚ್ಚರಿ ಮೂಡಿಸಿದೆ.  

ಲೋಕಸಭಾ ಚುನಾವಣೆ ಹಿನ್ನೆಲೆಯಲ್ಲಿ ಸಿದ್ದರಾಮಯ್ಯ ಅವರ ಬಗ್ಗೆ ಮೃದು ಧೋರಣೆಯನ್ನೇ ತಳೆದುಕೊಂಡು ಬಂದಿದ್ದ ಜೆಡಿಎಸ್ ವರಿಷ್ಠ ಎಚ್.ಡಿ. ದೇವೇಗೌಡ ಹಾಗೂ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ಅವರು ಇದೀಗ ಬಂದದ್ದು ಬರಲಿ ಎಂದು ಎದುರಿಸಲು ಸಿದ್ಧರಾಗುತ್ತಿದ್ದಾರೆಯೇ ಎಂಬ ಅನುಮಾನ ಮೂಡತೊಡಗಿದೆ. ದೇವೇಗೌಡರು ಹಾಗೂ ಕುಮಾರಸ್ವಾಮಿ ಅವರ ಗಮನಕ್ಕೆ ಬರದೆ ಅಥವಾ ಅವರ ಬಳಿ ಮುಂಚಿತವಾಗಿ ಪ್ರಸ್ತಾಪ ಮಾಡದೆ ವಿಶ್ವನಾಥ್ ಅವರು ಸಿದ್ದರಾಮಯ್ಯ ವಿರುದ್ಧ ತೀಕ್ಷ್ಣವಾಗಿ ಮಾತನಾಡುವುದು ಕಷ್ಟ ಎಂಬ ಮಾತು ರಾಜಕೀಯ ವಲಯದಲ್ಲಿ ಬಲವಾಗಿ ಕೇಳಿಬರುತ್ತಿದೆ.

ಸಿದ್ದರಾಮಯ್ಯ ಅವರಿಗೆ ವಿಶ್ವನಾಥ್ ಅವರ ಮೂಲಕ ಒಂದು ಎದಿರೇಟು ನೀಡಿ ಅದರ ಪ್ರತಿಕ್ರಿಯೆ ನೋಡೋಣ. ಈ ಮೂಲಕವಾದರೂ ಸಿದ್ದರಾಮಯ್ಯ ಅವರು ಮತ್ತೆ ಮುಖ್ಯಮಂತ್ರಿಯಾಗಬೇಕು ಎಂಬ ಕೂಗು ನಿಲ್ಲಬಹುದು. ನಿಲ್ಲದಿದ್ದರೆ ಲೋಕಸಭಾ ಚುನಾವಣೆಯ ಫಲಿತಾಂಶ ಗಮನಿಸಿ ಕಾಂಗ್ರೆಸ್ ರಾಷ್ಟ್ರೀಯ ಅಧ್ಯಕ್ಷರ ಗಮನಕ್ಕೆ ತಂದರಾಯಿತು ಎಂಬ ನಿಲುವಿಗೆ ದೇವೇಗೌಡರ ಪಾಳೆಯ ಬಂದಿದೆ ಎನ್ನಲಾಗುತ್ತಿದೆ.

ಕಳೆದ ಒಂಬತ್ತು ತಿಂಗಳ ಹಿಂದೆ ಜೆಡಿಎಸ್ ರಾಜ್ಯಾಧ್ಯಕ್ಷರನ್ನಾಗಿ ವಿಶ್ವನಾಥ್ ಅವರನ್ನು ನೇಮಕ ಮಾಡುವ ಪ್ರಸ್ತಾಪ ಕೇಳಿಬಂದಾಗ  ಸಿದ್ದರಾಮಯ್ಯ ಅವರಿಗೆ ತಿರುಗೇಟು ನೀಡುವುದಕ್ಕಾಗಿಯೇ ಪಕ್ಷದ ವರಿಷ್ಠರು ಈ ನಿರ್ಧಾರ ಕೈಗೊಂಡಿರಬಹುದು ಎಂಬ ಮಾತು ಕೇಳಿಬಂದಿತ್ತು. ಆದರೆ, ವಿಶ್ವನಾಥ್ ಅವರು ರಾಜ್ಯಾಧ್ಯಕ್ಷರಾಗಿ ಇಷ್ಟು ತಿಂಗಳಾದರೂ ಸಿದ್ದರಾಮಯ್ಯ ವಿರುದ್ಧ ಹರಿಹಾಯ್ದಿರಲಿಲ್ಲ. ಹಲವಾರು ಸಂದರ್ಭಗಳು ಎದುರಾದರೂ ಸಿದ್ದರಾಮಯ್ಯ ಅವರ ಬಗ್ಗೆ ಸಾಕಷ್ಟು ಸಂಯಮವನ್ನೇ ಪ್ರದರ್ಶಿಸಿ ದ್ದರು. ತೀರಾ ಇತ್ತೀಚೆಗೆ ಎಂದರೆ, ಕಳೆದ ವಾರ ಕೂಡ ವಿಶ್ವನಾಥ್ ಅವರನ್ನು ಸುದ್ದಿಗಾರರು ಸಿದ್ದರಾಮಯ್ಯ ಮತ್ತೆ ಮುಖ್ಯಮಂತ್ರಿಯಾಗಬೇಕು ಎಂಬ ಕಾಂಗ್ರೆಸ್ ನಾಯಕರ ಹೇಳಿಕೆಗಳ ಬಗ್ಗೆ ಪ್ರಶ್ನಿಸಿದಾಗಲೂ ತೇಲಿಸುವಂತೆ ಮಾತನಾಡಿದರೇ ಹೊರತು ವಾಗ್ದಾಳಿ ನಡೆಸುವ ಪ್ರಯತ್ನ ಮಾಡಲಿಲ್ಲ. ಅದೇನೂ ಮಹತ್ವದ ಬೆಳವಣಿಗೆ ಅಲ್ಲ ಎಂಬಂತೆಯೇ ಮಾತನಾಡಿದ್ದರು. 

ಆದರೆ, ಏಕಾಏಕಿ ಭಾನುವಾರ ವಿಶ್ವನಾಥ್ ಅವರು ಸಿದ್ದರಾಮಯ್ಯ ವಿರುದ್ಧ ಮುಗಿಬಿದ್ದರು. ವಿಶ್ವನಾಥ್ ಅವರ ವಾಗ್ದಾಳಿ ಬೆನ್ನಲ್ಲೇ ಸಿದ್ದರಾಮಯ್ಯ ಅವರೂ ತಿರುಗೇಟು ನೀಡಿದ್ದಾರೆ. ಜೊತೆಗೆ, ‘ರಾಜ್ಯ ರಾಜಕೀಯದಲ್ಲಿ ಅಂತಹ ಯಾವುದೇ ಬದಲಾ ವಣೆಯೂ ಆಗುವುದಿಲ್ಲ, ಮುಂದೆಯೂ ಮುಖ್ಯ ಮಂತ್ರಿ ಕುಮಾರಸ್ವಾಮಿ ಅವರೇ ಮುಖ್ಯಮಂತ್ರಿ ಯಾಗಿ ಮುಂದುವರೆಯಲಿದ್ದಾರೆ’ ಎಂದು ಸ್ಪಷ್ಟನೆ ನೀಡಿರುವುದು ವಿಶ್ವನಾಥ್ ಅವರ ಏಟಿಗೆ ಮೆತ್ತಗಾಗಿರಬಹುದು ಎನ್ನಲಾಗುತ್ತಿದೆ.

ಈ ನಡುವೆ ವಿಶ್ವನಾಥ್ ಅವರ ಹೇಳಿಕೆಗೆ ಕಾಂಗ್ರೆಸ್ಸಿನ ಇತರ ನಾಯಕರು ಹೇಗೆ ಸ್ಪಂದಿಸುತ್ತಾರೆ ಎಂಬುದನ್ನು ಕಾದು ನೋಡಬೇಕು. ಕಾಂಗ್ರೆಸ್ಸಿನ ಇತರ ನಾಯಕರು ಪ್ರತಿಕ್ರಿಯೆ ನೀಡಲು ಮುಂದಾದರೆ ಪರಿಸ್ಥಿತಿ ವಿಕೋಪಕ್ಕೆ ತಿರುಗಿದರೂ ಅಚ್ಚರಿಯಿಲ್ಲ.

click me!