ಸರ್ಕಾರಕ್ಕೇ ವಿದ್ಯುತ್ ಕೊಡುವ ಶಾಲೆ: ತಿಂಗಳಿಗೆ 10 ಸಾವಿರ ಗಳಿಕೆ!

By Web Desk  |  First Published May 13, 2019, 7:59 AM IST

ಶಾಲೆಯಿಂದ ಸೌರ ವಿದ್ಯುತ್‌ ಉತ್ಪಾದನೆ!| ಹೆಸ್ಕಾಂಗೆ ವಿದ್ಯುತ್‌ ಮಾರಿ ತಿಂಗಳಿಗೆ .10 ಸಾವಿರ ಗಳಿಕೆ ಕುಮಟಾದ ಕತಗಾಲ ಶಾಲೆ ಪ್ರಯೋಗ| ವಿದ್ಯುತ್‌ ಉತ್ಪಾದನೆಗೆ 13 ಲಕ್ಷ ಮೌಲ್ಯದ ಉಪಕರಣ ಅಳವಡಿಕೆ| ಪುಣೆ ಕಂಪನಿ ಉಚಿತ ಕೊಡುಗೆ|


ವಸಂತಕುಮಾರ್‌ ಕತಗಾಲ, ಕನ್ನಡಪ್ರಭ

ಕಾರವಾರ(ಮೇ.13]: ಕುಮಟಾ ತಾಲೂಕಿನ ಕತಗಾಲದ ಸೌ.ಕಮಲಾಬಾಯಿ ಪಿಕಳೆ ಪ್ರೌಢಶಾಲೆ ಹೆಸ್ಕಾಂಗೇ ವಿದ್ಯುತ್‌ ಮಾರಾಟ ಮಾಡಲಿದೆ. ಇಲ್ಲಿ ಸೋಲಾರ್‌ ಜನರೇಟರ್‌ ಅಳವಡಿಸಲಾಗಿದ್ದು ವಿದ್ಯುತ್‌ ಉತ್ಪಾದನೆಯಲ್ಲಿ ಸ್ವಾವಲಂಬನೆ ಸಾಧಿಸಲಿದೆ.

Latest Videos

undefined

ಈ ಶಾಲೆಯಲ್ಲಿ ಪ್ರತಿ ದಿನ 14 ಕಿ.ವ್ಯಾ. ವಿದ್ಯುತ್‌ ಉತ್ಪಾದನೆ ಆಗಲಿದೆ. ಇದರಲ್ಲಿ 4 ಕಿ.ವ್ಯಾ. ಶಾಲೆಯ ಉಪಯೋಗಕ್ಕೆ ಬಳಕೆಯಾಗಲಿದ್ದು, ಉಳಿದ 10 ಕಿ.ವ್ಯಾ. ವಿದ್ಯುತ್ತನ್ನು ಹೆಸ್ಕಾಂಗೆ ಮಾರಾಟ ಮಾಡಲಿದೆ. ಇದರಿಂದ ಹೈಸ್ಕೂಲ್‌ಗೆ ಪ್ರತಿ ತಿಂಗಳು .8ರಿಂದ 10 ಸಾವಿರ ಆದಾಯವೂ ಬರಲಿದೆ.

ಭಾನುವಾರ ಸಾಂಕೇತಿಕವಾಗಿ ಈ ಯೋಜನೆಯ ಉದ್ಘಾಟನೆ ನೆರವೇರಿದ್ದು, ಸದ್ಯದಲ್ಲೇ ಅಂದರೆ 8-10 ದಿನಗಳೊಳಗೆ ವಿದ್ಯುತ್‌ ಉತ್ಪಾದನೆ ಆರಂಭವಾಗಲಿದೆ.

ಪುಣೆಯ ಕೆಟಿಆರ್‌ ಕಂಬ್ಲಿಂಗ್‌ ಇಂಡಿಯಾ ಪ್ರೈವೇಟ್‌ ಲಿಮಿಟೆಡ್‌ ಕಂಪನಿ ತನ್ನ ಸಾಮಾಜಿಕ ಜವಾಬ್ದಾರಿ ಯೋಜನೆ ಅಡಿಯಲ್ಲಿ ಈ ಜನರೇಟರ್‌ ಅನ್ನು ಪ್ರೌಢಶಾಲೆಗೆ ಉಚಿತವಾಗಿ ನೀಡಿದೆ. ವಿದ್ಯುತ್‌ ಉತ್ಪಾದನೆಗೆ ಸೋಲಾರ್‌ ಪ್ಯಾನಲ್‌, ಜನರೇಟರ್‌ ಸೇರಿದಂತೆ ಒಟ್ಟೂ. 13 ಲಕ್ಷಗಳಾಗಲಿದೆ.

ಈ ಕಂಪನಿಯ ಉದ್ಯೋಗಿ ಪ್ರಕಾಶ್‌ ಪಿಕಳೆ ಇದೇ ಶಾಲೆಯ ಹಳೇ ವಿದ್ಯಾರ್ಥಿಯಾಗಿದ್ದು, ಅವರ ಪ್ರಯತ್ನದಿಂದ ಪ್ರೌಢಶಾಲೆಗೆ ವಿದ್ಯುತ್‌ ಉತ್ಪಾದನೆಯ ಸೌಲಭ್ಯ ದೊರೆತಿದೆ. ಹೆಸ್ಕಾಂ ಜತೆಗೆ ಪ್ರೌಢಶಾಲೆ ವಿದ್ಯುತ್‌ ಪೂರೈಕೆಗೆ ಒಡಂಬಡಿಕೆ ಮಾಡಿಕೊಂಡಿದೆ. ಉತ್ಪಾದನೆಯಾಗುವ ವಿದ್ಯುತ್‌ ಸಮೀಪದ ಗ್ರಿಡ್‌ಗೆ ಪೂರೈಕೆಯಾಗಲಿದೆ.

ದಿನಕರ ದೇಸಾಯಿ ಸ್ಥಾಪಿಸಿದ ಕೆನರಾ ವೆಲ್‌ಫೇರ್‌ ಟ್ರಸ್ಟಿನ ಈ ಪ್ರೌಢಶಾಲೆ ವಿದ್ಯುತ್‌ ಉತ್ಪಾದನೆಯಲ್ಲಿ ಸಂಪೂರ್ಣವಾಗಿ ಸ್ವಾವಲಂಬಿಯಾಗಲಿದೆ. ಶಾಲೆಯಲ್ಲಿ ಅಳವಡಿಸಲಾದ ಪಂಪ್‌ ಕೂಡ ಇದೇ ವಿದ್ಯುತ್‌ನಿಂದ ನಡೆಯಲಿದೆ. ಪ್ರೌಢಶಾಲೆಯೊಂದು ಹೆಸ್ಕಾಂಗೆ ವಿದ್ಯುತ್‌ ಮಾರಾಟ ಮಾಡುವ ಮೂಲಕ ಆದಾಯವನ್ನೂ ಗಳಿಸಲಿದೆ.

ಉದ್ಘಾಟನೆ:

ಕತಗಾಲದ ಸೌ. ಕಮಲಾಬಾಯಿ ಪಿಕಳೆ ಮಾಧ್ಯಮಿಕ ಶಾಲೆಯಲ್ಲಿ ಭಾನುವಾರ ಈ ಯೋಜನೆಯನ್ನು ಸಾಂಕೇತಿಕವಾಗಿ ಉದ್ಘಾಟಿಸಲಾಯಿತು. ಇದೆ ಶಾಲೆಯಲ್ಲಿ ಸೇವೆ ಸಲ್ಲಿಸಿದ ನಿವೃತ್ತ ಶಿಕ್ಷಕ ಅಶೋಕ ಪಿಕಳೆ ಉದ್ಘಾಟಿಸಿದರು. ಪುಣೆಯ ಕೆಟಿಆರ್‌ ಕ್ಲಂಬಿಂಗ್‌ ಇಂಡಿಯಾ ಪ್ರೈ. ಲಿ. ಕಂಪನಿ ಉದ್ಯೋಗಿ ಪ್ರಕಾಶ್‌ ಪಿಕಳೆ, ಲೆಕ್ಕ ಪರಿಶೋಧಕ ರಘು ಪಿಕಳೆ, ನಿವೃತ್ತ ಶಿಕ್ಷಕ ಪಿ.ಆರ್‌. ಭಟ್‌, ಶಾಲಾ ಅಭಿವೃದ್ಧಿ ಸಮಿತಿ ಅಧ್ಯಕ್ಷ ವಿ.ಎಂ. ಜಾಲಿಸತ್ಗಿ , ಶಿಕ್ಷಕ ಅಶೋಕ ಭಟ್‌ ಮತ್ತಿತರರು ಇದ್ದರು.

ಗ್ರಾಮೀಣ ಪ್ರದೇಶದಲ್ಲಿ ಇದೊಂದು ಹೊಸ ಪ್ರಯೋಗವಾಗಿದೆ. ಈ ಪ್ರದೇಶದಲ್ಲಿ ಪ್ರೌಢಶಾಲೆ ವಿದ್ಯುತ್‌ ಉತ್ಪಾದನೆಯಲ್ಲಿ ಸ್ವಾವಲಂಬಿಯಾಗುವುದರ ಜತೆಗೆ ಹೆಸ್ಕಾಂಗೆ ವಿದ್ಯುತ್‌ ಮಾರಾಟ ಮಾಡುತ್ತಿರುವುದು ಅಪರೂಪದ ಸಂಗತಿಯಾಗಿದೆ. ನಾನು ಕಲಿತ ಶಾಲೆಯಲ್ಲಿ ಇದನ್ನು ಅಳವಡಿಸುತ್ತಿರುವುದು ಸಂತಸವಾಗಿದೆ.

- ಪ್ರಕಾಶ್‌ ಪಿಕಳೆ, ಕೆಟಿಆರ್‌ ಕ್ಲಂಬಿಂಗ್‌ ಕಂಪನಿ ಉದ್ಯೋಗಿ

click me!