
ಮಂಗಳೂರು : ಮಹಾಮಳೆಯ ಅವಾಂತರದಿಂದ ಸಂಪರ್ಕ ಕಡಿದುಕೊಂಡಿದ್ದ ಮಾಣಿ-ಮೈಸೂರು ರಾಷ್ಟ್ರೀಯ ಹೆದ್ದಾರಿಯ ಸಂಪಾಜೆ-ಮಡಿಕೇರಿ ರಸ್ತೆಯನ್ನು ಕೇವಲ 20 ದಿನಗಳಲ್ಲಿ ಸಂಚಾರ ಯೋಗ್ಯವಾಗಿಸುವ ಮೂಲಕ ರಾಷ್ಟ್ರೀಯ ಹೆದ್ದಾರಿ ಇಲಾಖೆ ತನ್ನ ತಾಂತ್ರಿಕ ಕೌಶಲ್ಯವನ್ನು ಎತ್ತಿ ಹಿಡಿದಿದೆ. ಕನಿಷ್ಠ ಆರು ತಿಂಗಳಿಗಿಂತಲೂ ಮೊದಲು ಕಾಮಗಾರಿ ಪೂರ್ಣವಾಗುವುದು ಸಾಧ್ಯವೇ ಎಂದು ಪ್ರಶ್ನಾರ್ಥಕ ಚಿಹ್ನೆಯಂತೆ ಗೋಚರಿಸಿದ್ದ ಪರಿಸರದಲ್ಲೀಗ ಪ್ರಾಧಿಕಾರ ಕ್ಷಿಪ್ರ ಕ್ರಾಂತಿಯನ್ನೇ ನಡೆಸಿದೆ.
ಆ. 14ರಿಂದ ಮದೆನಾಡು, ಬಳಿಕ ಮೊಣ್ಣೆಂಗೇರಿ ಹಾಗೂ ಜೋಡುಪಾಲದಲ್ಲಿ ಗುಡ್ಡ ಕುಸಿತ ಹಾಗೂ ಜಲಸ್ಫೋಟದಿಂದ ಹೆದ್ದಾರಿಯೇ ಮಾಯವಾಗಿತ್ತು. ಸಂಪಾಜೆ-ಮಡಿಕೇರಿ ಮಧ್ಯೆ 14 ಕಿ.ಮೀ. ದೂರದಲ್ಲಿ ಮೂರು ಕಡೆಗಳಲ್ಲಿ ಹೆದ್ದಾರಿಯಲ್ಲೇ
ಬೃಹತ್ ಪ್ರಪಾತ ಸೃಷ್ಟಿಯಾಗಿತ್ತು.
ಪರ್ಯಾಯ ಮಾರ್ಗ ರಚನೆ ವಿನಃ ಬೇರೆ ದಾರಿ ಇಲ್ಲ ಎಂಬ ತೀರ್ಮಾನಕ್ಕೆ ಸ್ಥಳೀಯರು ಬಂದಿದ್ದರು. ಆದರೆ ಬಳಿಕ ಆ. 21ರಂದು ರಾಷ್ಟ್ರೀಯ ಹೆದ್ದಾರಿ ಇಲಾಖೆ ದುರಸ್ತಿ ಕಾಮಗಾರಿ ಕೈಗೆತ್ತಿಕೊಂಡಿತ್ತು. ಜೋಡು ಪಾಲದಿಂದ ದ.ಕ. ವಿಭಾಗ ಹಾಗೂ ಮದೆನಾಡಿನಿಂದ ಕೊಡಗು ಹೆದ್ದಾರಿ ಇಲಾಖೆ ಅಧಿಕಾರಿಗಳು ಸಮರೋಪಾದಿಯಲ್ಲಿ ಕಾಮಗಾರಿ ನಡೆಸಿದರು. ಸೆ.11ರಂದು ಲಘು ವಾಹನ ಓಡಾಡುವಷ್ಟು ಕಾಮಗಾರಿ ಪೂರ್ತಿಗೊಂಡಿತ್ತು.
20 ದಿನದಲ್ಲಿ ರಸ್ತೆ ದುರಸ್ತಿ ಹೇಗೆ?: ಮೂರು ಕಡೆ ಉಂಟಾದ ಪ್ರಪಾತವನ್ನು ಮುಚ್ಚುವುದು ಹೆದ್ದಾರಿ ಇಲಾಖೆಗೆ ಸವಾಲಿನ ಕೆಲಸವಾಗಿತ್ತು. ಮೊದಲು, ಭೂಕುಸಿತದಿಂದಾಗಿ ಬಿದ್ದಿದ್ದ ಮುರಿದ ಮರಗಿಡಗಳನ್ನು ಅಡಿಗೆ ಹಾಕಿ ಮೇಲ್ಭಾಗದಲ್ಲಿ ಮಣ್ಣು ತುಂಬಿಸಿ ಮತಟ್ಟುಗೊಳಿಸಲಾಯಿತು. ಆದರೆ ಇದರ ಮೇಲೆ ವಾಹನ ಸಂಚರಿಸಿದರೆ, ಏಕಾಏಕಿ ಮತ್ತೆ ಕುಸಿತ ಸಂಭವಿಸುವ ಸಾಧ್ಯತೆಯಿಂದ ಅಡಿಗೆ ಹಾಕಿದ ಮರಗಿಡಗಳನ್ನು ತೆರವುಗೊಳಿ ಸಲಾಯಿತು. ಹೊಸದಾಗಿ ಜಿಯೋ ಫ್ಯಾಬ್ರಿಕ್ ಮತ್ತು ಜಿಯೋ ಗ್ರೇಡ್‌ನ್ನು ಹಾಸಲಾಯಿತು.
ಅದರ ಮೇಲಿನಿಂದ ನಾಲ್ಕು ಹಂತದವರೆಗೆ ಜಲ್ಲಿ ಸೇರಿದಂತೆ ಜಿಎಸ್‌ಬಿ ತುಂಬಿಸಿ ತಾತ್ಕಾಲಿಕವಾದರೂ ರಸ್ತೆ ಗಟ್ಟಿಯಾಗಿರಬೇಕು ಎಂದು ಜಲ್ಲಿ ಮಿಶ್ರಣ ಬಳಸಲಾಯಿತು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.