ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್ ಸವಾಲು ಹಾಕಿದ್ದು ಯಾರಿಗೆ..?

By Web DeskFirst Published Sep 17, 2018, 9:00 AM IST
Highlights

ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್ ಇದೀಗ ರಾಜ್ಯ ರಾಜಕೀಯದ  ಬೆಳವಣಿಗೆಗಳಿಗೆ ಸಂಬಂಧಿಸಿದಂತೆ ಬಿಎಸ್ ಯಡಿಯೂರಪ್ಪ ಅವರಿಗೆ ಸವಾಲು ಹಾಕಿದ್ದಾರೆ. ಸರ್ಕಾರವನ್ನು ಹೇಗೆ ಅಸ್ಥಿರಗೊಳಿಸುತ್ತಾರೋ ನಾನು ನೋಡುತ್ತೇನೆ ಎಂದು ಹೇಳಿದ್ದಾರೆ. 

ಬೆಂಗಳೂರು: ಕಾಂಗ್ರೆಸ್ ಶಾಸಕರು ಬಿಜೆಪಿ ಸಂಪರ್ಕದಲ್ಲಿದ್ದಾರೆ ಎಂಬುದು ಶುದ್ಧ ಸುಳ್ಳು. ಸರ್ಕಾರ ಅಸ್ಥಿರಗೊಳಿಸಲು ಬಿ. ಎಸ್. ಯಡಿಯೂರಪ್ಪ ಅವರ ಒಂದು ಗುಂಪು ಮಾತ್ರ ಪ್ರಯತ್ನಿಸುತ್ತಿದ್ದು, ಸರ್ಕಾರವನ್ನು ಹೇಗೆ ಅಸ್ಥಿರಗೊಳಿಸುತ್ತಾರೋ ನಾವೂ ನೋಡುತ್ತೇವೆ ಎಂದು ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್ ಸವಾಲು ಹಾಕಿದ್ದಾರೆ.

 ಭಾನುವಾರ ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕಾಂಗ್ರೆಸ್‌ನ ಕೆಲ ಶಾಸಕರು ಪಕ್ಷದ ಮುಖಂಡರ ಸಂಪರ್ಕಕ್ಕೆ ಸಿಗುತ್ತಿಲ್ಲ ಎಂಬ ಸುದ್ದಿಯನ್ನು ತಳ್ಳಿ ಹಾಕಿದರು. ‘ನಮ್ಮ ಶಾಸಕರು ಎಲ್ಲರೂ ಒಟ್ಟಾಗಿ ನಮ್ಮ ಸಂಪರ್ಕದಲ್ಲೇ ಇದ್ದು, ಅವರವರ ಕ್ಷೇತ್ರದಲ್ಲಿ ಕೆಲಸ ಮಾಡುತ್ತಿದ್ದಾರೆ. ಯಾರೂ ಸಹ ಪಕ್ಷ ತೊರೆಯುತ್ತಾರೆ ಎಂಬ ಮಾತೇ ಇಲ್ಲ’ ಎಂದು ಸ್ಪಷ್ಟಪಡಿಸಿದರು. ‘ಕಾಂಗ್ರೆಸ್‌ನ ಯಾರಿಗೂ ಸರ್ಕಾರ ಅಸ್ಥಿರಗೊಳಿಸುವ ಉದ್ದೇಶವಿಲ್ಲ. 

ಜಾರಕಿಹೊಳಿ ಸಹೋದರರ ಸಮಸ್ಯೆ ಒಂದು ಜಿಲ್ಲೆಗೆ ಸೀಮಿತವಾಗಿದ್ದು,  ಅವರಿಗೆ ಸರ್ಕಾರ ಅಸ್ಥಿರಗೊಳಿಸುವ ಇರಾದೆಯಿಲ್ಲ. ಅಲ್ಲದೆ, ಯಡಿಯೂರಪ್ಪ ಗುಂಪು ಹೊರತುಪಡಿಸಿ ಬಿಜೆಪಿ ನಾಯಕರಿಗೂ ಸರ್ಕಾರ ಬೀಳುಸುವುದು ಬೇಕಾಗಿಲ್ಲ. ಅವರ ಪಕ್ಷದವರೇ ಯಡಿಯೂರಪ್ಪ ವಿರುದ್ಧ ಅಸಮಧಾನ ವ್ಯಕ್ತಪಡಿಸಿದ್ದಾರೆ. ಆದರೂ ಬಿಜೆಪಿ ನೀತಿಗೆಟ್ಟ ರಾಜಕಾರಣಕ್ಕೆ ಮುಂದಾಗಿದೆ’ ಎಂದು ಹೇಳಿದರು.

ಸಿದ್ದರಾಮಯ್ಯ ಬಗ್ಗೆ ಅಪಪ್ರಚಾರ: ಸರ್ಕಾರ ಅತಂತ್ರಗೊಳಿಸುವ ವಿಚಾರದಲ್ಲಿ ಅನವಶ್ಯಕವಾಗಿ ಸಿದ್ದರಾಮಯ್ಯ ಅವರ ಹೆಸರನ್ನು ಎಳೆದು ತರುವ ಕೆಲಸ ಮಾಡುತ್ತಿದ್ದಾರೆ. ಈ ಮೂಲಕ ಅವರ ಬಗ್ಗೆ ಅಪಪ್ರಚಾರ ನಡೆಸಲಾಗುತ್ತಿದೆ ಎಂದು ದಿನೇಶ್ ಅಸಮಾಧಾನ ವ್ಯಕ್ತಪಡಿಸಿದರು. ಸಿದ್ದ ರಾಮಯ್ಯ ಅವರು ಸರ್ಕಾರ ಅಸ್ಥಿರಗೊಳಿಸುವ ಪ್ರಯತ್ನ ಮಾಡುತ್ತಿಲ್ಲ. ಸರ್ಕಾರ ರಚನೆಯಲ್ಲಿ ಅವರದ್ದೂ ಪಾತ್ರವಿದೆ ಎಂದರು.

click me!