
ಬೆಂಗಳೂರು [ಅ.06]: ಕಾಂಗ್ರೆಸ್‌ನ ಆಂತರಿಕ ಬೇಗುದಿಗೆ ಮುಖ್ಯ ಕಾರಣವಾಗಿರುವ ಪ್ರತಿಪಕ್ಷ ನಾಯಕನ ಹುದ್ದೆಗೆ ಯಾರು ಸೂಕ್ತ ಎಂಬುದನ್ನು ನಿರ್ಧರಿಸಲು ಹಾಗೂ ಉಭಯ ಬಣಗಳ ನಡುವಿನ ಭಿನ್ನಾಭಿಪ್ರಾಯ ಶಮನಗೊಳಿಸುವ ಸೂತ್ರ ಪತ್ತೆಗೆ ಎಐಸಿಸಿ ಪ್ರಧಾನ ಕಾರ್ಯದರ್ಶಿ ಮಧುಸೂಧನ ಮಿಸ್ತ್ರಿ ಭಾನುವಾರ ಹಿರಿಯ ನಾಯಕರ ಹಾಗೂ ಶಾಸಕರ ಸಭೆ ನಡೆಸಲಿದ್ದಾರೆ.
ನಗರದ ಖಾಸಗಿ ಹೋಟೆಲ್‌ನಲ್ಲಿ ಬೆಳಗ್ಗೆ 10ರಿಂದ ಸಂಜೆ 7ರವರೆಗೂ ನಡೆಯಲಿರುವ ಈ ಸಭೆಯಲ್ಲಿ ಮಿಸ್ತ್ರಿ ಅವರು ಕಾಂಗ್ರೆಸ್‌ನ ಪ್ರತಿಯೊಬ್ಬ ಶಾಸಕರೊಂದಿಗೆ ನೇರಾನೇರ ಮಾತುಕತೆ ನಡೆಸಲಿದ್ದಾರೆ. ಅನಂತರ ಹಿರಿಯ ನಾಯಕರೊಂದಿಗೂ ಮಾತುಕತೆ ನಡೆಸಲಿದ್ದಾರೆ. ಈ ಮಾತುಕತೆಯ ವೇಳೆ ಮಿಸ್ತ್ರಿ ಅವರು ಪ್ರಮುಖವಾಗಿ ಎರಡು ವಿಚಾರಗಳ ಬಗ್ಗೆ ಶಾಸಕರು ಹಾಗೂ ನಾಯಕರ ಅಭಿಪ್ರಾಯ ಪಡೆಯಲಿದ್ದಾರೆ. ಅವು-
1. ಕಾಂಗ್ರೆಸ್ ಶಾಸಕಾಂಗ ಪಕ್ಷದ ನಾಯಕ ಹಾಗೂ ಪ್ರತಿಪಕ್ಷ ನಾಯಕ ಎಂಬ ಎರಡು ಹುದ್ದೆ ಹುಟ್ಟುಹಾಕುವುದು ಸೂಕ್ತವೇ?
2. ಖಾಲಿ ಇರುವ ವಿಧಾನಮಂಡಲದ ಉಭಯ ಸದನಗಳ ಪ್ರತಿಪಕ್ಷ ನಾಯಕರು ಹಾಗೂ ಮುಖ್ಯ ಸಚೇತಕ ಹುದ್ದೆಗಳಿಗೆ ಯಾರು ಸೂಕ್ತ?
ಮೂಲಗಳ ಪ್ರಕಾರ ಕಾಂಗ್ರೆಸ್ ಹೈಕಮಾಂಡ್ ಪ್ರತಿ ಹುದ್ದೆಗೂ ತಲಾ ಮೂರು ಹೆಸರುಗಳನ್ನು ಪ್ರತಿಯೊಬ್ಬ ಶಾಸಕರು ಹಾಗೂ ನಾಯಕರಿಂದ ಪಡೆಯುವಂತೆ ತಿಳಿಸಿದೆ. ಜತೆಗೆ, ಶಾಸಕಾಂಗ ಪಕ್ಷದ ನಾಯಕ ಮತ್ತು ಪ್ರತಿಪಕ್ಷ ನಾಯಕ ಹುದ್ದೆ ಎಂಬ ಎರಡು ಪ್ರತ್ಯೇಕ ಹುದ್ದೆ ಸೃಷ್ಟಿಸಿದರೆ (ಸಾಮಾನ್ಯವಾಗಿ ಶಾಸಕಾಂಗ ಪಕ್ಷದ ನಾಯಕರೇ ಪ್ರತಿಪಕ್ಷದ ನಾಯಕರೂ ಆಗಿರುತ್ತಾರೆ) ಇದರಿಂದ ಪಕ್ಷದ ಮೇಲೆ ಯಾವ ಪರಿಣಾಮ ಉಂಟಾಗಬಹುದು ಎಂಬ ಅಭಿಪ್ರಾಯವನ್ನು ಪ್ರತಿಯೊಬ್ಬರಿಂದಲೂ ಸಂಗ್ರಹಿಸಲಿದೆ.
ಈ ಹುದ್ದೆಗಳನ್ನು ನೀಡುವಾಗ ದಕ್ಷಿಣ ಕರ್ನಾಟಕ ಹಾಗೂ ಉತ್ತರ ಕರ್ನಾಟಕ ಮತ್ತು ವಿವಿಧ ಜಾತಿಗಳ ನಡುವೆ ಸಮತೋಲನವಿರುವಂತೆ ನೋಡಿಕೊಳ್ಳಬೇಕಾದ ಅಗತ್ಯವಿರುವುದರಿಂದ ಇದೇ ರೀತಿ ಹೆಸರುಗಳನ್ನು ಸೂಚಿಸಲು ಶಾಸಕರು ಹಾಗೂ ನಾಯಕರಿಗೆ ಮಿಸ್ತ್ರಿ ಕೋರಲಿದ್ದಾರೆ ಎಂದು ಮೂಲಗಳು ಹೇಳಿವೆ.
ಇಡೀ ದಿನ ಸಭೆ ನಡೆಸಿದ ನಂತರ ಅಂತಿಮವಾಗಿ ಮಿಸ್ತ್ರಿ ಅವರು ಶಾಸಕಾಂಗ ಪಕ್ಷದ ನಾಯಕ ಸಿದ್ದರಾಮಯ್ಯ ಅವರೊಂದಿಗೆ ಮಾತುಕತೆ ನಡೆಸಿ ಅನಂತರ ದೆಹಲಿಗೆ ತೆರಳಿದ್ದಾರೆ ಎಂದು ಮೂಲಗಳು ಹೇಳಿವೆ.
ಹೈಕಮಾಂಡ್ ಅಂತಿಮ ತೀರ್ಮಾನ: ಮಿಸ್ತ್ರಿ ಅವರು ಎಲ್ಲ ಶಾಸಕರು ಹಾಗೂ ನಾಯಕರ ಸಭೆ ನಡೆಸಿ ಸಂಗ್ರಹಿಸುವ ಅಭಿಪ್ರಾಯ ಆಧರಿಸಿ ಕಾಂಗ್ರೆಸ್ ಹೈಕಮಾಂಡ್‌ಗೆ ವರದಿಯೊಂದನ್ನು ಸಲ್ಲಿಸಲಿದ್ದಾರೆ. ಈ ವರದಿ ಆಧಾರದ ಮೇಲೆ ಹೈಕಮಾಂಡ್ ಹುದ್ದೆಗಳ ನೇಮಕ ಕುರಿತು ಅಂತಿಮ ತೀರ್ಮಾನ ಕೈಗೊಳ್ಳಲಿದೆ.
ಈ ಹುದ್ದೆಗಳಿಗಾಗಿ ಸಿದ್ದರಾಮಯ್ಯ ಪರ ಹಾಗೂ ವಿರೋಧಿ ಬಣಗಳ ನಡುವೆ ತೀವ್ರ ಪೈಪೋಟಿ ನಡೆದಿದೆ. ಹೀಗಾಗಿ ಮಿಸ್ತ್ರಿ ಅವರು ವರದಿ ಪಡೆದ ನಂತರ ಖುದ್ದು ಸೋನಿಯಾ ಗಾಂಧಿ ಅವರು ಸಿದ್ದರಾಮಯ್ಯ ಸೇರಿದಂತೆ ಪ್ರಮುಖ ನಾಯಕರನ್ನು ದೆಹಲಿಗೆ ಕರೆಸಿಕೊಂಡು ಎಲ್ಲಾ ನಾಯಕರಲ್ಲೂ ಒಗ್ಗಟ್ಟು ಮೂಡಿಸಿ ಅನಂತರ ನಿರ್ಧಾರ ಪ್ರಕಟಿಸಲಿದ್ದಾರೆ ಎಂದು ಮೂಲಗಳು ಹೇಳಿವೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.