ಮಕ್ಕಳೊಂದಿಗೆ ಸುರೇಶ್ ಕುಮಾರ್ ಸಂವಾದ!

By Web DeskFirst Published Oct 6, 2019, 8:18 AM IST
Highlights

ಮಕ್ಕಳೊಂದಿಗೆ ಸಂವಾದ ನಡೆಸಿದ ಸುರೇಶ್‌ ಕುಮಾರ್‌| ಶಾಲೆಗಳಲ್ಲಿರುವ ಸಮಸ್ಯೆ ನೀಗಿಸುವ ಪ್ರಯತ್ನ ಮಾಡುತ್ತೇನೆ: ಸಚಿವರ ಭರವಸೆ| ಸರ್ಕಾರಿ ಶಾಲೆಗಳಲ್ಲಿ 1ನೇ ತರಗತಿಯಿಂದ ಇಂಗ್ಲಿಷ್‌ ಮಾಧ್ಯಮ ಆರಂಭಿಸಬೇಕು

ಮಡಿಕೇರಿ[ಅ.06]: ಕೇವಲ ಪದವೀಧರರನ್ನು ಸೃಷ್ಟಿಸುತ್ತಿರುವುದರಿಂದ ಸಮಾಜಕ್ಕೆ ಯಾವುದೇ ಪ್ರಯೋಜವಿಲ್ಲ. ಇಂದು ಸಮಾಜಮುಖಿ ಚಿಂತನೆಗಳ ವ್ಯಕ್ತಿಗಳ ನಿರ್ಮಾಣ ಆಗಬೇಕು. ಪ್ರಜ್ಞಾವಂತ ವ್ಯಕ್ತಿಯನ್ನು ಶಿಕ್ಷಣ ರೂಪಿಸಬೇಕು ಎಂದು ಶಿಕ್ಷಣ ಸಚಿವ ಸುರೇಶ್‌ ಕುಮಾರ್‌ ತಿಳಿಸಿದರು.

ಪ್ರಾಥಮಿಕ, ಪ್ರೌಢಶಾಲೆ ಹಾಗೂ ಪದವಿ ಪೂರ್ವ ಕಾಲೇಜುಗಳ ವಿದ್ಯಾರ್ಥಿಗಳೊಂದಿಗೆ ನಗರದ ಸರ್ಕಾರಿ ಪದವಿ ಪೂರ್ವ ಕಾಲೇಜಿನ ಸಭಾಂಗಣದಲ್ಲಿ ನಡೆದ ಸಂವಾದ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಈ ವರ್ಷದಿಂದ 7ನೇ ತರಗತಿಗೆ ಪಬ್ಲಿಕ್‌ ಪರೀಕ್ಷೆ ಇರಲಿದೆ.

ಶನಿವಾರ ವಿದ್ಯಾರ್ಥಿಗಳಿಗೆ ಬ್ಯಾಗ್‌ಲೆಸ್‌ ಡೇ ಮಾಡಿ ವಿದ್ಯಾರ್ಥಿಗಳನ್ನು ಪಠ್ಯದೊಂದಿಗೆ ವಿವಿಧ ಪಠ್ಯೇತರ ಚಟುವಟಿಕೆಗಳತ್ತ ತೊಡಗಿಸಿಕೊಳ್ಳುವಂತೆ ಮಾಡಲಾಗುವುದು. ಇದು, ಫೀ.ಮಾ.ಕೆ.ಎಂ. ಕಾರ್ಯಪ್ಪ ಅವರು ಓದಿದ ಶಾಲೆ. ಇಲ್ಲಿ ಓದುತ್ತಿರುವುದು ನಿಮ್ಮ ಸೌಭಾಗ್ಯ. ಉತ್ತಮವಾಗಿ ಓದಿ ಶಾಲೆಗೆ ಹೆಮ್ಮೆ ತರುವ ಕೆಲಸ ಮಾಡುತ್ತೇನೆ ಎಂದು ವಿದ್ಯಾರ್ಥಿಗಳು ನಿರ್ಧರಿಸಬೇಕು. ಶಾಲೆಗಳಲ್ಲಿ ಸಮಸ್ಯೆಗಳನ್ನು ನೀಗಿಸುವ ಪ್ರಯತ್ನವನ್ನು ಸರ್ಕಾರದಿಂದ ಮಾಡುತ್ತೇನೆ. ಉತ್ತಮವಾಗಿ ಓದಿ ರಾಜ್ಯಕ್ಕೆ ಹೆಮ್ಮೆ ತನ್ನಿ ಎಂದು ಸಚಿವರು ಸಲಹೆ ನೀಡಿದರು.

ಸಂವಾದದಲ್ಲಿ ವಿದ್ಯಾರ್ಥಿ ದೇಚಮ್ಮ ಅವರು, ಹಲವು ಸೌಲಭ್ಯವಿದ್ದರೂ ಸರ್ಕಾರಿ ಶಾಲೆಗಳಲ್ಲಿ ವಿದ್ಯಾರ್ಥಿಗಳ ಸಂಖ್ಯೆ ಕುಸಿಯುತ್ತಿದೆ ಇದಕ್ಕೆ ಕಾರಣ ಏನು? ಎಂದು ಪ್ರಶ್ನಿಸಿದರು. ಇದಕ್ಕೆ ಉತ್ತರಿಸಿದ ಸಚಿವರು, ಇಂದು ಖಾಸಗಿ ಶಾಲೆಗಳಿಗಿಂತ ಸರ್ಕಾರಿ ಶಾಲೆಯಲ್ಲಿ ವಿದ್ಯಾರ್ಥಿಗಳಿಗೆ ಉತ್ತಮ ಸೌಲಭ್ಯ ಹಾಗೂ ಶಿಕ್ಷಣ ನೀಡಲಾಗುತ್ತಿದೆ. ಆದರೆ, ಮಕ್ಕಳ ಪೋಷಕರು ಇಂಗ್ಲಿಷ್‌ ಮಾಧ್ಯಮ ಇದೆ ಎನ್ನುವ ಕಾರಣಕ್ಕಾಗಿ ಖಾಸಗಿ ಶಾಲೆಗಳಿಗೆ ಸೇರಿಸುತ್ತಿದ್ದಾರೆ. ಸರ್ಕಾರಿ ಶಾಲೆಗಳಲ್ಲಿ ಒಂದನೇ ತರಗತಿಯಿಂದ ಇಂಗ್ಲಿಷ್‌ ಮಾಧ್ಯಮ ಆರಂಭಿಸಬೇಕು. ಎಲ್ಲ ಶಾಲೆಗಳಲ್ಲಿ ಎಲ್‌ಕೆಜಿ, ಯುಕೆಜಿ ಆರಂಭಿಸಲು ಗ್ರಾಮಸ್ಥರು, ಶಾಲಾ ಶಿಕ್ಷಕರು, ಶಾಲಾ ಆಡಳಿತ ಮಂಡಳಿ ಶ್ರಮಿಸಬೇಕು ಎಂದರು.

ವಿದ್ಯಾರ್ಥಿಗಳ ಜೊತೆ ಬಿಸಿಯೂಟ ಸೇವನೆ:

ಸಂವಾದ ಕಾರ್ಯಕ್ರಮದಲ್ಲಿ ವಿದ್ಯಾರ್ಥಿಗಳ ಹಲವಾರು ಪ್ರಶ್ನೆಗಳಿಗೆ ಸಚಿವರು ಉತ್ತರ ನೀಡಿದರು. ಸಂವಾದನ ನಂತರ ಬಿದ್ಯಾರ್ಥಿಗಳು ಬಿಸಿಯೂಟ ಸೇವನೆಗೆ ಹೊರಟರು. ಈ ಸಂದರ್ಭದಲ್ಲಿ ಸುರೇಶ್‌ ಕುಮಾರ್‌ ಕೂಡ ವಿದ್ಯಾರ್ಥಿಗಳ ಜೊತೆ ತೆರಳಿ ಬಿಸಿಯೂಟ ಸೇವಿಸಿದರು.

click me!