
ಉಡುಪಿ(ನ.19): ಕಾನೂನು ನೆರವು ಪ್ರಾಧಿಕಾರಕ್ಕೆ ಅಪರಾಧಿಗಳಿಗೆ ಶಿಕ್ಷೆ ನೀಡುವ ಅಧಿಕಾರವಿಲ್ಲದಿದ್ದರೂ, ಆರೋಪ ಅಥವಾ ಅಪರಾಧಿಗಳ ಬಗ್ಗೆ ಲೋಕಾಯುಕ್ತದ ಮುಖಾಂತರ ಶಿಕ್ಷೆ ವಿಧಿಸುವ ಅವಕಾಶವಿದೆ ಎಂದು ಕರ್ನಾಟಕ ಲೋಕಾಯುಕ್ತ ನ್ಯಾಯಮೂರ್ತಿ ಪಿ.ವಿಶ್ವನಾಥ ಶೆಟ್ಟಿ ಹೇಳಿದರು.
ಉಡುಪಿ ಜಿಲ್ಲಾಡಳಿತ, ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ವಕೀಲರ ಸಂಘ, ಪೊಲೀಸ್ ಇಲಾಖೆಗಳ ಸಂಯುಕ್ತ ಆಶ್ರಯದಲ್ಲಿ ಶನಿವಾರ ಜಿಲ್ಲಾ ನ್ಯಾಯಾಲಯ ಸಂಕೀರ್ಣದ ಆವರಣದಲ್ಲಿ ನಡೆದ ‘ಸೇವೆಗಾಗಿ ಸಂಪರ್ಕ’ ಕಾನೂನು ಮಾಹಿತಿ ಜಾಗೃತಿ ಆಂದೋಲನದ ಸಮಾರೋಪ ಸಮಾರಂಭವನ್ನು ಉದ್ಘಾಟಿಸಿ ಅವರು ಮಾತನಾಡುತ್ತಿದ್ದರು.
ಸಂವಿಧಾನದ ಆಶಯದಂತೆ ಪ್ರತಿಯೊಬ್ಬರಿಗೂ ಕಾನೂನಿನ ನೆರವು ದೊರಕಿಸುವ ಉದ್ದೇಶವನ್ನಿಟ್ಟುಕೊಂಡು ಆರಂಭವಾದ ಉಚಿತ ಕಾನೂನು ಸೇವೆ ಸಮಾನ ಹಕ್ಕು ನ್ಯಾಯದಾನದ ಭರವಸೆಯನ್ನು ಎಲ್ಲರಿಗೂ ನೀಡುತ್ತಿದೆ. ಕಾನೂನು ಪ್ರಾಧಿಕಾರದ ನೆರವನ್ನು ಅರ್ಹರು ಪಡೆಯುವಂತಾಗಬೇಕೆಂದು ಅವರು ಹೇಳಿದರು.
ಎಲ್ಲರೂ ಸೇರಿ: ವಕೀಲ ವೃತ್ತಿಗೆ ಸಮಾಜದಲ್ಲಿ ಉನ್ನತ ಸ್ಥಾನವಿದ್ದು, ಅದನ್ನು ವಕೀಲರು ಸಾಮಾಜಿಕ ಪರಿವರ್ತನೆ ಹಾಗೂ ಏಳಿಗೆಗೆ ಬಳಸಿಕೊಳ್ಳಲು ಅವಕಾಶವಿದೆ. ದೇಶದ ಸ್ವಾತಂತ್ರ್ಯಕ್ಕಾಗಿ ಸಾಕಷ್ಟು ವಕೀಲರು ಬಲಿದಾನ ಮಾಡಿದ್ದಾರೆ ಮತ್ತು ಜೈಲಿಗೆ ಹೋದ ಚರಿತ್ರೆ ನಮ್ಮ ದೇಶದ್ದು. ವ್ಯವಸ್ಥೆಯು ಇಂದು ಮಲಿನಗೊಂಡಿದ್ದು, ಇದಕ್ಕೆ ಸರ್ಕಾರಿ ಅಧಿಕಾರಿಗಳನ್ನೇ ಹೊಣೆ ಮಾಡದೆ ಎಲ್ಲರೂ ಸೇರಿ ಸಮಾಜದ ಸ್ವಾಸ್ಥ್ಯವನ್ನು ಉತ್ತಮಪಡಿಸುವ ಅಗತ್ಯವಿದೆ ಎಂದು ಈ ಸಂದರ್ಭದಲ್ಲಿ ಅವರು ನುಡಿದರು.
ಅಪೀಲು ಹಾಕುವಂತಿಲ್ಲ: ಹಲವು ಕಾರಣಗಳಿಂದ ನ್ಯಾಯ ವಿಳಂಬವಾಗುತ್ತಿರುವ ಈ ದಿನಗಳಲ್ಲಿ ಲೋಕ ಅದಾಲತ್ ಮೂಲಕ ನೊಂದವರು ನ್ಯಾಯ ಪಡೆಯುವುದರಿಂದ ಶೀಘ್ರ ನ್ಯಾಯ ಪಡೆಯಲು ಸಾಧ್ಯ. ಉಳಿದ ಕೋರ್ಟ್‌ಗಳಲ್ಲಿನ ನಿರ್ಧಾರವನ್ನು ಮತ್ತೆ ಪ್ರಶ್ನಿಸುವ ಅವಕಾಶವಿದ್ದರೆ ಲೋಕ ಅದಾಲತ್ ನಲ್ಲಿ ದೊರೆತ ನ್ಯಾಯಕ್ಕೆ ಅಪೀಲು ಹಾಕುವಂತಿಲ್ಲ ಎಂದು ಲೋಕಾಯುಕ್ತರು ಹೇಳಿದರು.
ನ್ಯಾಯಾಲಯದ ಮೂಲಕ ತೀರ್ಪು ನೀಡುವುದಕ್ಕಿಂತ ಲೋಕ ಅದಾಲತ್, ಸಂವಿಧಾನದ ಮೂಲಕ ಪ್ರಕರಣವನ್ನು ಇತ್ಯರ್ಥ ಪಡಿಸುವುದು ಹೆಚ್ಚು ಪ್ರಯೋಜನಕಾರಿ. ನ್ಯಾಯಾಲಯದ ತೀರ್ಮಾನ ವಿರುದ್ಧ ಮೇಲ್ಮನವಿ ಸಲ್ಲಿಸಲು ಅವಕಾಶ ಇರುವುದರಿಂದ ನ್ಯಾಯ ಸಿಗಲು ಸಾಕಷ್ಟು ವಿಳಂಬ ಆಗುತ್ತದೆ. ಸಂಧಾನದ ಮೂಲಕ ಪ್ರಕರಣ ಇತ್ಯರ್ಥ ಪಡಿಸಿದರೆ ಎರಡು ಕಡೆಯವರಿಗೆ ಸಂತೋಷ, ಸಮಾಧಾನಕರ ಮತ್ತು ತ್ವರಿತವಾಗಿ ತೀರ್ಮಾನ ಮಾಡಲು ಸಾಧ್ಯವಾಗುತ್ತದೆ ಎಂದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶ ಹಾಗೂ ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರದ ಅಧ್ಯಕ್ಷ ವೆಂಕಟೇಶ್ ನಾಯ್ಕ್ ಟಿ. ವಹಿಸಿದ್ದರು. ಜಿಲ್ಲಾ ಪೊಲೀಸ್ ಅಧೀಕ್ಷಕ ಡಾ.ಸಂಜೀವ ಎಂ.ಪಾಟೀಲ್, ಜಿಲ್ಲಾ ವಕೀಲರ ಸಂಘದ ಅಧ್ಯಕ್ಷ ಎಚ್.ರತ್ನಾಕರ ಶೆಟ್ಟಿ ಉಪಸ್ಥಿತರಿದ್ದರು.
ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರದ ಕಾರ್ಯದರ್ಶಿ ಹಾಗೂ ಹಿರಿಯ ಸಿವಿಲ್ ನ್ಯಾಯಾಧೀಶರಾದ ಲತಾ ಸ್ವಾಗತಿಸಿದರು. ಸಂತೋಷ್ ಹೆಬ್ಬಾರ್ ವಂದಿಸಿದರು. ವಕೀಲ ಮೇರಿ ಶ್ರೇಷ್ಠ ಕಾರ್ಯಕ್ರಮ ನಿರೂಪಿಸಿದರು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.