ಕಾಂಗ್ರೆಸ್‌ನಲ್ಲಿ ಮಾಸ್ಟರ್ ಪ್ಲಾನ್ : ರಚನೆಯಾಗುತ್ತಿದೆ ಹೊಸ ತಂಡ

First Published Jul 4, 2018, 10:12 AM IST
Highlights

ಸೋಲಿನ ಸುಳಿಯಿಂದ ಹೊರಬಂದು 2019ರಲ್ಲಿ ಕೇಂದ್ರದಲ್ಲಿ ಗದ್ದುಗೆ ಹಿಡಿಯಲು ಶತಪ್ರಯತ್ನ ನಡೆಸುತ್ತಿರುವ ಕಾಂಗ್ರೆಸ್‌ ಇದೀಗ ಪಕ್ಷದೊಳಗೆ ಮಾಸ್ಟರ್ ಪ್ಲಾನ್ ಒಂದನ್ನು ರೂಪಿಸಿದೆ. 

ನವದೆಹಲಿ: ಸೋಲಿನ ಸುಳಿಯಿಂದ ಹೊರಬಂದು 2019ರಲ್ಲಿ ಕೇಂದ್ರದಲ್ಲಿ ಗದ್ದುಗೆ ಹಿಡಿಯಲು ಶತಪ್ರಯತ್ನ ನಡೆಸುತ್ತಿರುವ ಕಾಂಗ್ರೆಸ್‌ ಇದೀಗ ಪಕ್ಷದೊಳಗೆ ‘ಜಾತಿ ಗಣತಿ’ ಆರಂಭಿಸಿದೆ. ಜಾತಿ ಹಾಗೂ ಧರ್ಮ ಕುರಿತಂತೆ ಮಾಹಿತಿ ನೀಡುವಂತೆ ದೇಶಾದ್ಯಂತ ಇರುವ ಜಿಲ್ಲಾ ಘಟಕಗಳ ಅಧ್ಯಕ್ಷರಿಗೆ ಈಗಾಗಲೇ ಪಕ್ಷ ಸೂಚನೆ ನೀಡಿದೆ ಎಂದು ವರದಿಯೊಂದು ತಿಳಿಸಿದೆ.

2019ರ ಲೋಕಸಭೆ ಚುನಾವಣೆಗೂ ಮುನ್ನ ಎಲ್ಲ ಸಮುದಾಯಗಳನ್ನು ಒಳಗೊಂಡ ತಂಡ ರಚಿಸಲು ಹಾಗೂ ಪಕ್ಷದಲ್ಲಿ ಎಲ್ಲ ಸಮುದಾಯಗಳಿಗೂ ಪ್ರಾತಿನಿಧ್ಯ ನೀಡುವ ಉದ್ದೇಶದಿಂದ ಜಿಲ್ಲಾಧ್ಯಕ್ಷರಿಂದ ಜಾತಿ, ಧರ್ಮದ ವಿವರ ಬಯಸಲಾಗಿದೆ ಎಂದು ಪದಾಧಿಕಾರಿಯೊಬ್ಬರು ತಿಳಿಸಿದ್ದಾರೆ.

ಕಾಂಗ್ರೆಸ್ಸಿನ ಸಂವಿಧಾನದಲ್ಲಿ ವಿವಿಧ ವರ್ಗಗಳಿಗೆ ಮೀಸಲಾತಿ ಇದೆ. ಶೇ.33 ಸ್ಥಾನಗಳನ್ನು ಮಹಿಳೆಯರಿಗೆ ಮೀಸಲಿಡಲಾಗಿದ್ದರೆ, ಪರಿಶಿಷ್ಟಜಾತಿ, ಪರಿಶಿಷ್ಟಪಂಗಡ ಹಾಗೂ ಒಬಿಸಿ ಮತ್ತು ಅಲ್ಪಸಂಖ್ಯಾತ ವರ್ಗಕ್ಕೆ ಶೇ.20 ಸೀಟುಗಳನ್ನು ಮೀಸಲಿಡಲಾಗಿದೆ ಎಂದು ಅವರೂ ಸಮರ್ಥಿಸಿಕೊಂಡಿದ್ದಾರೆ.

ಸಮಾಜದ ಎಲ್ಲ ಸಮುದಾಯಗಳಿಗೂ ಪಕ್ಷದಲ್ಲಿ ಪ್ರಾತಿನಿಧ್ಯ ನೀಡಲು ಜಾತಿ, ಧರ್ಮದ ವಿವರಗಳು ಬೇಕು. ಉದಾಹರಣೆಗೆ ಉತ್ತರಪ್ರದೇಶದಲ್ಲಿ ಪಕ್ಷದ 130 ಘಟಕಗಳು ಇವೆ. ಈ ಪೈಕಿ ಶೇ.20ರಷ್ಟನ್ನು ಎಸ್ಸಿ, ಎಸ್ಟಿಹಾಗೂ ಒಬಿಸಿ ವರ್ಗಕ್ಕೆ ಮೀಸಲಿಡಲಾಗುತ್ತದೆ. ಪಕ್ಷದ ಸಂವಿಧಾನಕ್ಕೆ ಅನುಗುಣವಾಗಿ ನೇಮಕಾತಿ ಮಾಡುವ ಉದ್ದೇಶದಿಂದ ಜಾತಿ ವಿವರ ಸಂಗ್ರಹಿಸಲಾಗುತ್ತಿದೆ. ಇದರಿಂದ ಹೊಸ ಮುಖಗಳಿಗೆ ಅವಕಾಶ ನೀಡಿದಂತಾಗುತ್ತದೆ. ಹಲವು ಜಿಲ್ಲಾಧ್ಯಕ್ಷರು 10 ವರ್ಷಗಳಿಂದ ಅದೇ ಹುದ್ದೆಯಲ್ಲಿದ್ದಾರೆ. ಮಹಾರಾಷ್ಟ್ರದಲ್ಲಿ 54 ಘಟಕಗಳು ಇದ್ದು, ಆ ಪೈಕಿ ಕನಿಷ್ಠ 20 ಮಂದಿ 12ರಿಂದ 13 ವರ್ಷದಿಂದ ಬದಲಾಗಿಲ್ಲ ಎಂದು ಮಾಹಿತಿ ನೀಡಿದ್ದಾರೆ.

click me!