ಲೋಕಸಭಾ ಚುನಾವಣೆ : ಇವರಿಗೆ ಕಾಂಗ್ರೆಸ್ ಟಿಕೆಟ್ ಪಕ್ಕಾ?

By Web DeskFirst Published Sep 2, 2018, 11:15 AM IST
Highlights

ಲೋಕಸಭಾ ಚುನಾವಣೆ ಸಮೀಪಿಸುತ್ತಿದ್ದು ವಿವಿಧ ಪಕ್ಷಗಳಲ್ಲಿ ಅಭ್ಯರ್ಥಿಗಳ ಆಯ್ಕೆ ಕಸರತ್ತು ಜೋರಾಗಿದೆ. ಇದೀಗ ಕಾಂಗ್ರೆಸ್ ನಲ್ಲಿಯೂ ಕೂಡ ಅಭ್ಯರ್ಥಿಗಳ ಆಯ್ಕೆಯ ಬಗ್ಗೆ ಮಹತ್ವದ ಚರ್ಚೆ ನಡೆಯುತ್ತಿದ್ದು ಕೆಲವು ಕ್ಷೇತ್ರಗಳಿಂದ ಹಾಲಿ ಸಂಸದರೇ ಸ್ಪರ್ಧೆ ಮಾಡುವ ಸಾಧ್ಯತೆ ಇದೆ.

ಬೆಂಗಳೂರು :  ಲೋಕಸಭೆ ಚುನಾವಣೆ ಅಭ್ಯರ್ಥಿಗಳ ಆಯ್ಕೆಗೆ ಕಸರತ್ತು ತೀವ್ರಗೊಳಿಸಿರುವ ಕಾಂಗ್ರೆಸ್‌ ಪಕ್ಷವು ರಾಜ್ಯದ 9 ಲೋಕಸಭಾ ಕ್ಷೇತ್ರಗಳಿಗೆ ಅಭ್ಯರ್ಥಿ ಆಯ್ಕೆಗೆ ಶನಿವಾರ ಮಹತ್ವದ ಸಭೆ ನಡೆಸಿತು. ಈ ವೇಳೆ ಗುಲ್ಬರ್ಗಾ, ರಾಯಚೂರು, ಚಿಕ್ಕೋಡಿ ಹಾಗೂ ಬೆಂಗಳೂರು ಗ್ರಾಮಾಂತರ ಕ್ಷೇತ್ರಗಳಲ್ಲಿ ಹಾಲಿ ಸಂಸದರ ಹೆಸರನ್ನೇ ಹೈಕಮಾಂಡ್‌ಗೆ ಸೂಚಿಸಲು ತೀರ್ಮಾನಿಸಲಾಗಿದೆ. ಉಳಿದ ಐದು ಕ್ಷೇತ್ರಗಳಿಗೆ 3-4 ಮಂದಿ ಅರ್ಹ ಸಂಭವನೀಯರ ಪಟ್ಟಿಯನ್ನು ಸಿದ್ಧಪಡಿಸಲಾಗಿದೆ.

ರಾಜ್ಯ ಕಾಂಗ್ರೆಸ್‌ ಉಸ್ತುವಾರಿ ಕೆ.ಸಿ. ವೇಣುಗೋಪಾಲ್‌ ಹಾಗೂ ಕೆಪಿಸಿಸಿ ಅಧ್ಯಕ್ಷ ದಿನೇಶ್‌ ಗುಂಡೂರಾವ್‌ ನೇತೃತ್ವದಲ್ಲಿ ಕೆಪಿಸಿಸಿ ಕಚೇರಿಯಲ್ಲಿ ನಡೆದ ಸಭೆಯಲ್ಲಿ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ, ಡಿ.ಕೆ. ಶಿವಕುಮಾರ್‌, ಕೆಪಿಸಿಸಿ ಕಾರ್ಯಾಧ್ಯಕ್ಷ ಈಶ್ವರ್‌ಖಂಡ್ರೆ ಅವರು ಬಂಡಾಯ ಉಂಟಾಗದಂತೆ ಟಿಕೆಟ್‌ ಅಂತಿಮಗೊಳಿಸುವ ಬಗ್ಗೆ ಸ್ಥಳೀಯ ಮುಖಂಡರಿಂದ ಮಾಹಿತಿ ಪಡೆದರು.

ಈ ವೇಳೆ ಗುಲ್ಬರ್ಗಾ ಲೋಕಸಭೆ ಕ್ಷೇತ್ರಕ್ಕೆ ಹಾಲಿ ಸಂಸದರಾದ ಮಲ್ಲಿಕಾರ್ಜುನ ಖರ್ಗೆ, ರಾಯಚೂರು ಕ್ಷೇತ್ರಕ್ಕೆ ಬಿ.ವಿ. ನಾಯಕ್‌, ಚಿಕ್ಕೋಡಿ-ಸದಲಗಾ ಕ್ಷೇತ್ರಕ್ಕೆ ಪ್ರಕಾಶ್‌ ಹುಕ್ಕೇರಿ, ಬೆಂಗಳೂರು ಗ್ರಾಮಾಂತರ ಕ್ಷೇತ್ರಕ್ಕೆ ಡಿ.ಕೆ. ಸುರೇಶ್‌ ಅವರಿಗೆ ಟಿಕೆಟ್‌ ನೀಡುವಂತೆ ಹೈಕಮಾಂಡ್‌ಗೆ ಶಿಫಾರಸು ಮಾಡಲು ನಿರ್ಧರಿಸಲಾಯಿತು.

ಉಳಿದಂತೆ ಬೆಂಗಳೂರು ದಕ್ಷಿಣ, ಬೀದರ್‌, ಬಳ್ಳಾರಿ, ಕೊಪ್ಪಳ, ಬೆಳಗಾವಿ ಲೋಕಸಭೆ ಕ್ಷೇತ್ರಗಳಿಗೆ ತಲಾ 2 ರಿಂದ 4 ಅರ್ಹ ಸಂಭವನೀಯ ಅಭ್ಯರ್ಥಿಗಳ ಪಟ್ಟಿಮಾಡಿದ್ದು, ಕೊಪ್ಪಳ ಕ್ಷೇತ್ರದಿಂದ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಕಣಕ್ಕಿಳಿಸಬೇಕು ಎಂಬ ಒತ್ತಾಯವೂ ಸಭೆಯಲ್ಲಿ ಕೇಳಿ ಬಂದಿದೆ. ಇನ್ನು ಬೀದರ್‌ನಲ್ಲಿ ಎಐಸಿಸಿ ಅಧ್ಯಕ್ಷ ರಾಹುಲ್‌ಗಾಂಧಿ ಅವರು ಬೀದರ್‌ ಕ್ಷೇತ್ರದಿಂದ ಸ್ಪರ್ಧಿಸಲಿದ್ದಾರೆ ಎಂಬ ವದಂತಿಗಳು ಆಗಾಗ ಕೇಳಿ ಬರುತ್ತಿದ್ದರೂ, ಶನಿವಾರ ನಡೆದ ಬೀದರ್‌ನ ನಾಯಕರ ಸಭೆಯಲ್ಲಿ ಈ ವಿಚಾರವನ್ನು ಯಾರೂ ಪ್ರಸ್ತಾಪಿಸಲಿಲ್ಲ.

ಬೆಂಗಳೂರು ದಕ್ಷಿಣ ಕ್ಷೇತ್ರದಲ್ಲಿ ಪ್ರಬಲ ಅಭ್ಯರ್ಥಿಗೆ ಅವಕಾಶ ನೀಡಬೇಕು. ಈ ಮೂಲಕ ಸತತ ಬಿಜೆಪಿ ಗೆಲುವಿನ ಮೂಲಕ ಬಿಜೆಪಿ ಭದ್ರಕೋಟೆಯಂತಾಗಿರುವ ಕ್ಷೇತ್ರವನ್ನು ತನ್ನ ತೆಕ್ಕೆಗೆ ತೆಗೆದುಕೊಳ್ಳಲು ಕಾಂಗ್ರೆಸ್‌ ಚರ್ಚೆ ನಡೆಸಿದೆ. ಈ ಹಿನ್ನೆಲೆಯಲ್ಲಿ ಪ್ರಿಯಾಕೃಷ್ಣ ಅಥವಾ ರಾಮಲಿಂಗಾರೆಡ್ಡಿ ಅವರಿಗೆ ಟಿಕೆಟ್‌ ನೀಡುವ ಬಗ್ಗೆ ಚಿಂತನೆ ನಡೆಸಿದೆ ಎಂದು ಮೂಲಗಳು ತಿಳಿಸಿವೆ.

ಬೀದರ್‌ ಕ್ಷೇತ್ರದಿಂದ ಲಾಬಿ ಜೋರು:

ಬೀದರ್‌ ಲೋಕಸಭಾ ಕ್ಷೇತ್ರದಿಂದ ಕಾಂಗ್ರೆಸ್‌ ಟಿಕೆಟ್‌ ಗಿಟ್ಟಿಸಲು ಘಟಾನುಘಟಿಗಳು ಪೈಪೋಟಿಗೆ ಬಿದ್ದಿದ್ದು, ಮಾಜಿ ಸಚಿವ ಶರಣ್‌ಪ್ರಕಾಶ್‌ ಪಾಟಿಲ್‌, ಮಾಜಿ ಮುಖ್ಯಮಂತ್ರಿ ಧರ್ಮಸಿಂಗ್‌ ಪುತ್ರ ವಿಜಯಸಿಂಗ್‌, ಅಲ್ಲಮಪ್ರಭು ಪಾಟೀಲ್‌ ಹೆಸರು ಪ್ರಸ್ತಾಪವಾಗಿದೆ. ಸಚಿವ ರಾಜಶೇಖರ್‌ ಪಾಟೀಲ್‌, ರಹೀಂ ಖಾನ್‌, ವಿಜಯಸಿಂಗ್‌ ಹಾಗೂ ಅಶೋಕ್‌ ಖೇಣಿ ಅವರು ಸಭೆಯಲ್ಲಿ ಪಾಲ್ಗೊಂಡಿದ್ದರು. ಮಾಜಿ ಮುಖ್ಯಮಂತ್ರಿ ಧರಂಸಿಂಗ್‌ ಪ್ರತಿನಿಧಿಸುತ್ತಿದ್ದ ಕ್ಷೇತ್ರವಾಗಿರುವುದರಿಂದ ಅವರ ಕುಟುಂಬ ಸದಸ್ಯರಿಗೆ ನೀಡುವಂತೆ ಸಭೆಯಲ್ಲಿ ಒತ್ತಾಯ ಕೇಳಿ ಬಂತು. ಜತೆಗೆ ಲಿಂಗಾಯತ ಸಮುದಾಯ ನಿರ್ಣಾಯಕವಾಗಿರುವುದರಿಂದ ಲಿಂಗಾಯತರಿಗೆ ಆದ್ಯತೆ ನೀಡಬೇಕು ಎಂದು ಜಿಲ್ಲಾ ಕಾಂಗ್ರೆಸ್‌ ಮುಖಂಡರು ಸಲಹೆ ನೀಡಿದರು.

ಕ್ಷೇತ್ರದ ಅಭ್ಯರ್ಥಿ ಆಯ್ಕೆ ಬಗ್ಗೆ ಗೊಂದಲ ಹೆಚ್ಚಾದ ಹಿನ್ನೆಲೆಯಲ್ಲಿ ಸಮೀಕ್ಷೆ ನಡೆಸಿ ಗೆಲ್ಲುವ ಅವಕಾಶ ಹೆಚ್ಚಿರುವ ಅಭ್ಯರ್ಥಿಯನ್ನು ಆಯ್ಕೆ ಮಾಡಲಾಗುವುದು. ಯಾರಿಗೆ ಅವಕಾಶ ದೊರೆತರೂ ಪಕ್ಷದ ಅಭ್ಯರ್ಥಿ ಗೆಲ್ಲುವಂತೆ ಕೆಲಸ ಮಾಡಬೇಕು ಎಂದು ಕೆ.ಸಿ. ವೇಣುಗೋಪಾಲ್‌ ಮುಖಂಡರಿಗೆ ಸೂಚನೆ ನೀಡಿದರು ಎಂದು ಮೂಲಗಳು ತಿಳಿಸಿವೆ.

ಬಳ್ಳಾರಿ ಟಿಕೆಟ್‌ಗೆ ತೀವ್ರ ಹಣಾಹಣಿ:

ಬಳ್ಳಾರಿ ಲೋಕಸಭೆ ಕ್ಷೇತ್ರಕ್ಕೆ ಸಂಬಂಧಿಸಿದ ಚರ್ಚೆಯಲ್ಲಿ ಬಳ್ಳಾರಿ ಟಿಕೆಟ್‌ಗಾಗಿ ಹಲವರ ನಡುವೆ ತೀವ್ರ ಹಣಾಹಣಿ ನಡೆದಿದೆ. ಬಳ್ಳಾರಿಯಲ್ಲಿ ಆರು ಮಂದಿ ಕಾಂಗ್ರೆಸ್‌ ಶಾಸಕರು ಇರುವುದರಿಂದ ಪಕ್ಷದ ಅಭ್ಯರ್ಥಿ ಗೆಲ್ಲುವ ಸಾಧ್ಯತೆ ಹೆಚ್ಚಿದೆ. ಹೀಗಾಗಿ ಪ್ರಬಲ ನಾಯಕನಿಗೆ ಅವಕಾಶ ನೀಡಬೇಕು ಎಂದು ಮುಖಂಡರು ಸಲಹೆ ನೀಡಿದರು.

ಸಭೆಯಲ್ಲಿ ನಾಗೇಂದ್ರ, ಗಣೇಶ್‌, ಪರಮೇಶ್ವರ ನಾಯ್‌್ಕ, ಇ. ತುಕಾರಾಂ, ಪರಿಷತ್‌ ಸದಸ್ಯರು, ಮಾಜಿ ಶಾಸಕ ಅನಿಲ್‌ಲಾಡ್‌ ಸೇರಿದಂತೆ ಹಲವರು ಭಾಗವಹಿಸಿದ್ದರು. ಈ ವೇಳೆ ಶಾಸಕ ನಾಗೇಂದ್ರ, ನೆಟ್ಟಕಲ್ಲಪ್ಪ, ರಾಮ್‌ಪ್ರಸಾದ್‌ ಅವರ ಪರ ಟಿಕೆಟ್‌ಗಾಗಿ ಲಾಬಿ ನಡೆದಿದೆ ಎಂದು ತಿಳಿದುಬಂದಿದೆ.

ಕೊಪ್ಪಳದಿಂದ 5-6 ಮಂದಿ ಆಕಾಂಕ್ಷಿಗಳು:

ಕೊಪ್ಪಳ ಕ್ಷೇತ್ರದಿಂದ ಬಸನಗೌಡ ಬಾದರ್ಲಿ, ಬಸವರಾಜ ರಾಯರೆಡ್ಡಿ, ಶಿವರಾಮೇಗೌಡ, ವಿರೂಪಾಕ್ಷಪ್ಪ, ಕರಿಯಪ್ಪ ಸೇರಿ 5-6 ಮಂದಿ ಹೆಸರುಗಳು ಕೇಳಿ ಬಂದಿವೆ. ಜತೆಗೆ ಕ್ಷೇತ್ರದಿಂದ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಕಣಕ್ಕಿಳಿಸಬೇಕು ಎಂಬ ಒತ್ತಾಯವೂ ಕೇಳಿ ಬಂದಿದೆ. ಒಂದು ವೇಳೆ ಸಿದ್ದರಾಮಯ್ಯ ಸ್ಪರ್ಧಿಸಿದರೆ ಎಲ್ಲರೂ ಸೇರಿ ಅವರ ಗೆಲುವಿಗಾಗಿ ಶ್ರಮಿಸುತ್ತಾರೆ ಎಂದು ಎಂದು ಸಭೆ ಬಳಿಕ ಮಾಜಿ ಸಚಿವ ಶಿವರಾಜ್‌ ತಂಗಡಗಿ ಮಾಹಿತಿ ನೀಡಿದರು.

ಬೆಳಗಾವಿ ಕ್ಷೇತ್ರದಲ್ಲಿ ಅಸಮಧಾನ:

ಬೆಳಗಾವಿ ಕ್ಷೇತ್ರದಲ್ಲಿ ಅಭ್ಯರ್ಥಿ ಆಯ್ಕೆ ಬಗ್ಗೆ ಸಭೆಯಲ್ಲೂ ನಾಯಕರ ನಡುವೆ ಅಸಮಧಾನ ಮುಂದುವರೆದಿದೆ. ಈ ಹಿನ್ನೆಲೆಯಲ್ಲಿ ಕ್ಷೇತ್ರಕ್ಕೆ ಸಂಬಂಧಿಸಿದ ಸಭೆ ಅರ್ಧಕ್ಕೆ ಮೊಟಕುಗೊಂಡಿದೆ ಎಂದು ತಿಳಿದುಬಂದಿದೆ. ಬೆಳಗಾವಿ ಕ್ಷೇತ್ರದ ಟಿಕೆಟ್‌ನ್ನು ವಿವೇಕ್‌ರಾವ್‌ ಪಾಟೀಲ್‌, ಸತೀಶ್‌ ಜಾರಕಿಹೊಳಿ ಅಥವಾ ನನಗೆ ನೀಡುವಂತೆ ರಮೇಶ್‌ ಜಾರಕಿಹೊಳಿ ಬೇಡಿಕೆ ಇಟ್ಟರು. ಈ ಹಿನ್ನೆಲೆಯಲ್ಲಿ ಮಾಜಿ ಶಾಸಕ ಫಿರೋಜ್‌ ಸೇಟ್‌ ಅಲ್ಪಸಂಖ್ಯಾತರಿಗೆ ಅವಕಾಶ ನೀಡುವಂತೆ ಮನವಿ ಮಾಡಿದ್ದರಿಂದ ವಾಗ್ವಾದ ತಾರಕಕ್ಕೇರಿ ಸಭೆ ಮೊಟಕುಗೊಳಿಸಲಾಯಿತು ಎಂದು ತಿಳಿದುಬಂದಿದೆ.

click me!