ಅನರ್ಹ ರೈತರ ಖಾತೆಯಿಂದ ಮನ್ನಾ ಹಣ ವಾಪಸ್

By Web DeskFirst Published Jun 15, 2019, 11:11 AM IST
Highlights

ಸಾಲಮನ್ನಾ ಯೋಜನೆಗೆ ಅರ್ಹರಲ್ಲದಿದ್ದರೂ ತಪ್ಪಾಗಿ ಶಿಫಾರಸ್ಸು ಮಾಡಿದ್ದ ಅನರ್ಹ ರೈತರ ಖಾತೆಯಿಂದ ಹಣ ವಾಪಸ್ ಪಡೆದುಕೊಳ್ಳಲಾಗಿದೆ. ಈ ಬಗ್ಗೆ ಸರ್ಕಾರದ ಮುಖ್ಯ ಕಾರ್ಯದರ್ಶಿ ಮಾಹಿತಿ ನೀಡಿದ್ದಾರೆ.

ಬೆಂಗಳೂರು :  ಸಾಲ ಮನ್ನಾ ಯೋಜನೆಗೆ ಅರ್ಹವಿಲ್ಲದಿದ್ದರೂ ಕಣ್ತಪ್ಪಿನಿಂದಾಗಿ ಸರ್ಕಾರಕ್ಕೆ ತಪ್ಪಾಗಿ ಶಿಫಾರಸು ಮಾಡಿದ್ದ  13,123 ಅನರ್ಹ ಸಾಲದ ಖಾತೆಗಳನ್ನು ಬ್ಯಾಂಕುಗಳೇ ಪತ್ತೆ ಹಚ್ಚಿ, ಆ ಖಾತೆಗಳಿಗೆ ಜಮೆಯಾಗಿದ್ದ 59 ಕೋಟಿ ರು.ಗಳನ್ನು ಸರ್ಕಾರಕ್ಕೆ ಹಿಂತಿರುಗಿಸಿವೆ ಎಂದು ಮುಖ್ಯ ಕಾರ್ಯದರ್ಶಿ ಟಿ.ಎಂ.ವಿಜಯ ಭಾಸ್ಕರ್ ತಿಳಿಸಿದ್ದಾರೆ.

ಸಾಲ ಮನ್ನಾಗಾಗಿ ಜಮೆ ಮಾಡಲಾಗಿದ್ದ ಹಣವನ್ನು ಕೆಲ ರೈತರ ಖಾತೆಗಳಿಂದ ಹಿಂದಕ್ಕೆ ಪಡೆಯಲಾಗಿದೆ ಎಂಬ ಬಗ್ಗೆ ಇತ್ತೀಚೆಗೆ ಮಾಧ್ಯಮಗಳಲ್ಲಿ ವರದಿಗಳು ಬಂದ ಹಿನ್ನೆಲೆಯಲ್ಲಿ ಮುಖ್ಯಮಂತ್ರಿ ಅವರು ಸಹಕಾರ ಸಚಿವರು, ತಮ್ಮ ಆರ್ಥಿಕ ಸಲಹೆಗಾರರು, ವಿವಿಧ ಇಲಾಖೆಗಳ ಉನ್ನತ ಅಧಿಕಾರಿಗಳು ಮತ್ತು ಸುಮಾರು 14 ಬ್ಯಾಂಕುಗಳ ಹಿರಿಯ ಅಧಿಕಾರಿಗಳೊಂದಿಗೆ ಸಾಲ ಮನ್ನಾ ಯೋಜನೆ ಸಂಬಂಧ ಸಭೆ ನಡೆಸಿದರು. 

ಬಳಿಕ ಸುದ್ದಿಗೋಷ್ಠಿಯಲ್ಲಿ ಮುಖ್ಯ ಕಾರ್ಯದರ್ಶಿ ಅವರು ಮಾಹಿತಿ ನೀಡಿದರು. ಸಾಲ ಮನ್ನಾ ಯೋಜನೆ ಮಾನದಂಡಗಳ ಅನುಸಾರ ಅರ್ಹ ರೈತರ ಸಾಲದ ಖಾತೆಗಳನ್ನು ಸರ್ಕಾರಕ್ಕೆ ಕಳುಹಿಸಿಕೊಡುವಾಗ, ಅರ್ಹವಲ್ಲದ  13,123 ರೈತರ ಸಾಲದ ಖಾತೆಗಳನ್ನು ಬ್ಯಾಂಕ್ ಅಧಿಕಾರಿಗಳು ಕಣ್ತಪ್ಪಿನಿಂದಾಗಿ ರವಾನಿಸಿದ್ದರು. ಬ್ಯಾಂಕುಗಳು ನೀಡಿದ ಮಾಹಿತಿ ಮೇಲೆ ಆ ಖಾತೆಗಳಿಗೂ ಸರ್ಕಾರ ಸಾಲ ಮನ್ನಾದ ಹಣ ಜಮೆ ಮಾಡಿತ್ತು. 

ಆದರೆ, ನಂತರ ಸರ್ಕಾರದಿಂದ ನಡೆದ ಕೆಲ ಸಾಲ ಮನ್ನಾ ಖಾತೆಗಳ ಮಾದರಿ ಪರೀಕ್ಷೆ ವೇಳೆ ಇಂತಹ ತಪ್ಪುಗಳಾಗಿರುವುದು ಕಂಡುಬಂತು. ಕಣ್ತಪ್ಪಿನಿಂದ ಈ ರೀತಿ ಆಗಿರುವುದಾಗಿ ತಿಳಿಸಿದ ಬ್ಯಾಂಕ್‌ನವರು ತಾವೇ ಖುದ್ದು ಪರಿಶೀಲನೆ ನಡೆಸಿ ಅಂತಹ 13,123 ಅನರ್ಹ ಸಾಲದ ಖಾತೆಗಳನ್ನು ಪತ್ತೆ ಹಚ್ಚಿ, ಆ ಖಾತೆಗಳಿಗೆ ಜಮೆಯಾಗಿದ್ದ 59 ಕೋಟಿ ರು. ಹಣವನ್ನು ಸರ್ಕಾರಕ್ಕೆ ಹಿಂತಿರುಗಿಸಿದ್ದಾರೆ ಎಂದರು.

2009 ರ ಏ. 1 ರ ನಂತರ ಸಾಲ ಮಂಜೂರಾಗಿದ್ದರೆ ಮಾತ್ರ ಸಾಲ ಮನ್ನಾ ಯೋಜನೆಗೆ ಅರ್ಹತೆ ಇರುತ್ತದೆ. ಆದರೆ, ಕೆಲವು ಪ್ರಕರಣಗಳಲ್ಲಿ ಈ ದಿನಾಂಕಕ್ಕಿಂತ ಹಿಂದೆ ಮಂಜೂರಾದ ಪ್ರಕರಣಗಳನ್ನೂ ಬ್ಯಾಂಕ್‌ಗಳು ಶಿಫಾರಸು ಮಾಡಿದ್ದವು ಎಂದು ಹೇಳಿದರು. 

click me!