
ಬೆಂಗಳೂರು (ಅ.12): ಕೋಲೂ ಮುರಿಲಿಲ್ಲ, ಹಾವು ಸಾಯ್ಲಿಲ್ಲ ಅನ್ನೋ ಹಾಗೇ ಲಿಂಗಾಯತ ಮತ್ತು ವೀರಶೈವ ಲಿಂಗಾಯತ ಮುಖಂಡರ ಸಭೆ ಒಮ್ಮತಕ್ಕೆ ಬರುವಲ್ಲಿ ಮತ್ತೇ ವಿಫಲವಾಗಿದೆ. ಸಮುದಾಯವನ್ನ ಒಡೆಯೋ ಕೆಲಸ ಮಾಡುತ್ತಿದ್ದೀರಿ ಅನ್ನೋ ವಿಚಾರ ಚರ್ಚೆಗೆ ಬಂದಾಗ ಉಭಯ ಬಣಗಳ ಮುಖಂಡರ ನಡುವೆ ಮಾತಿನ ಚಕಮಕಿ, ಗದ್ದಲವೂ ನಡೆಯಿತು.
ಲಿಂಗಾಯತ ಮತ್ತು ವೀರಶೈವ ಲಿಂಗಾಯತ ಮುಖಂಡರ ಸಭೆ ನಡೆಯಿತು. ಬೆಂಗಳೂರಿನ ಖಾಸಗಿ ಹೊಟೇಲ್’ನಲ್ಲಿ ನಡೆದ ಸುದೀರ್ಘ ಸಭೆಯಲ್ಲಿ ಉಭಯ ಬಣದ ಪ್ರಮುಖ ಮುಖಂಡರು ಭಾಗವಹಿಸಿದ್ದರು. ಲಿಂಗಾಯತಕ್ಕೆ ಪ್ರತ್ಯೇಕ ಧರ್ಮದ ಸ್ಥಾನ ನೀಡಬೇಕೆಂದು ಆಗ್ರಹಿಸುತ್ತ ಬಂದಿರುವ ಸಚಿವ ಎಂ ಬಿ ಪಾಟೀಲ್ ನೇತೃತ್ವದ ತಂಡ ಒಂದಾದರೆ, ಅಖಿಲ ಭಾರತ ವೀರಶೈವ ಮಹಾಸಭಾದ ಅಧ್ಯಕ್ಷ ಶಾಮನೂರ ಶಿವಶಂಕರಪ್ಪ ನೇತೃತ್ವದ ಮತ್ತೊಂದು ಬಣ ಸಭೆಯಲ್ಲಿ ಭಾಗವಹಿಸಿತ್ತು.
ಸಭೆ ಆರಂಭವಾಗುತ್ತಿದ್ದಂತೆ ಮಹಾಸಭಾದ ಕೆಲ ಮುಖಂಡರು ಸಮಾಜವನ್ನ ಒಡೆಯುವ ಸಂಚು ಮಾಡುತ್ತಿದ್ದೀರಿ ಎಂದು ಆಕ್ರೋಶ ವ್ಯಕ್ತಪಡಿಸಿದರು. ತಕ್ಷಣವೇ ಸಚಿವ ವಿನಯ ಕುಲಕರ್ಣಿ ನಾವಲ್ಲ ಸಮಾಜ ಒಡೆಯೋರು ನೀವು ಎಂದು ಆವೇಶ ಭರಿತರಾಗಿ ಹೇಳಿದರು. ಜೊತೆಗೆ ಮಾತೇ ಮಹಾದೇವಿ ಪರ ಒಂದು ಬಣ ವಾದ ಮಾಡಿದರೆ ಮತ್ತೊಂದು ಬಣ ಮಾತೆಗೆ ಸುಮ್ಮನಿರುವಂತೆ ತಾಕೀತು ಮಾಡಿ ಅಂತಾ ಮತ್ತೊಂದು ಬಣ. ಇದರಿಂದ ಸಭೆಯಲ್ಲಿ ಕೋಲಾಹಲವೇ ನಡೆಯಿತು. ಬಳಿಕ ಸಚಿವ ಎಂ ಬಿ ಪಾಟೀಲ್ ಮತ್ತು ಶಂಕರ ಬಿದರಿ ಎಲ್ಲರನ್ನ ಸಮಾಧಾನ ಪಡಿಸಿದರು. ಶಂಕರ ಬಿದರಿ ಮಾತನಾಡಿ, ಈ ಚರ್ಚೆ 1957 ರಿಂದ ನಡೆಯುತ್ತಲೇ ಇದೆ. 2013ರಲ್ಲಿ ನಮ್ಮದು ಹಿಂದು ಧರ್ಮದ ಒಂದು ಭಾಗ ಅಂತಾ ಒಪ್ಪಿಕೊಂಡಿದ್ದು, ಎಲ್ಲರೂ ಸಹಿ ಮಾಡಿದ್ದೇವೆ. ಇದೀಗ ನಾವು ಸ್ವತಂತ್ರ ಧರ್ಮದ ಬಗ್ಗೆ ಮಾತ್ರ ಚರ್ಚೆ ಮಾಡೋಣ ಎಂದರು.
ಸತತ ಎರಡೂವರೆ ಗಂಟೆ ನಡೆದ ಸಭೆ ಅಂತಿಮವಾದ ಒಂದು ತೀರ್ಮಾನಕ್ಕೆ ಬರುವಲ್ಲಿ ವಿಫಲವಾಯಿತು. ಆದ್ರೆ, ಒಂದು ತಜ್ಞರ ಸಮಿತಿ ರಚಿಸುವ ನಿರ್ಣಯವನ್ನ ಅಂಗೀಕರಿಸಿತು. 10 ಜನ ತಜ್ಞರ ಸಮಿತಿ ರಚಿಸುವ ಹೊಣೆಯನ್ನು ಶಾಮನೂರು ಶಿವಶಂಕರಪ್ಪಗೆ ನೀಡಲು ಸಭೆ ತೀರ್ಮಾನಿಸಿದೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.