
ಬೆಂಗಳೂರು(ಜ.27): ಈಶ್ವರಪ್ಪನವರ ವಿರುದ್ಧ ಶಿಸ್ತುಕ್ರಮಕ್ಕೆ ಆಗ್ರಹಿಸಿ ಬಿಜೆಪಿ ಶಾಸಕರು ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾಗೆ ಬರೆದ ಪ್ರತಿ ಸುವರ್ಣನ್ಯೂಸ್'ಗೆ ಲಭ್ಯವಾಗಿದೆ. ಯಡಿಯೂರಪ್ಪ ಬೆಂಬಲಿಗ ಶಾಸಕರು ಈಶ್ವರಪ್ಪ ವಿರುದ್ಧ ಸಹಿ ಸಂಗ್ರಹಿಸಿರುವ ಈ ಪ್ರತಿ ಇವತ್ತು ಸಂಜೆ ಕರೆದ ಸಭೆಯಲ್ಲಿ ಅಮಿತ್ ಶಾ ಅವರಿಗೆ ತಲುಪಬೇಕಿದ್ದು, ಅದಕ್ಕೂ ಮುನ್ನ ಸುವರ್ಣನ್ಯೂಸ್ ಕೈಸೇರಿದೆ.
ಈಶ್ವರಪ್ಪನವರನ್ನ ಪಕ್ಷದ ಶಿಸ್ತಿನ ಚೌಕಟ್ಟಿಗೆ ತರಲು ಹಾಗೂ ಬಂಡಾಯವನ್ನು ಮೊಳಕೆಯಲ್ಲೇ ಚಿವುಟಿ ಹಾಕಲು ಸೂಕ್ತವಾದ ಶಿಸ್ತುಕ್ರಮ ಕೈಗೊಳ್ಳಿ ಅಂತ ಈ ಪತ್ರದಲ್ಲಿ ಮನವಿ ಮಾಡಿದ್ದಾರೆ. ಈಶ್ವರಪ್ಪನವರ ಚಟುವಟಿಕೆಗಳು ಹಾಗೂ ಹೇಳಿಕೆಗಳಿಂದ ಪಕ್ಷದ ವರ್ಚಸ್ಸು ಹಾಗೂ ಪಕ್ಷದ ವಿಶ್ವಾಸಾರ್ಹತೆಗೆ ತೀವ್ರ ಧಕ್ಕೆಯಾಗಿದೆ ಎಂದೂ ಪತ್ರದಲ್ಲಿ ಉಲ್ಲೇಖಿಸಿದ್ದಾರೆ.
ಪ್ರತಿನಿತ್ಯ ಈಶ್ವರಪ್ಪನವರು ಯಡಿಯೂರಪ್ಪನವರ ವಿರುದ್ಧ ಟೀಕಾಪ್ರಹಾರ ಮಾಡುತ್ತಿರುವುದರಿಂದ ಉಂಟಾಗಿರುವ ಗೊಂದಲದ ಲಾಭವನ್ನ ಕಾಂಗ್ರೆಸ್ ಹಾಗೂ ಜೆಡಿಎಸ್ ಪಡೆಯುತ್ತವೆ ಎಂದೂ ಪತ್ರದಲ್ಲಿ ಉಲ್ಲೇಖಿಸಲಾಗಿದೆ. ಈಶ್ವರಪ್ಪ ವಿರುದ್ಧ ಕ್ರಮಕೈಗೊಳ್ಳದೇ ಹೋದರೆ ಪಕ್ಷದ ಚುನಾವಣಾ ಭವಿಷ್ಯಕ್ಕೆ ಭಾರೀ ಧಕ್ಕೆಯನ್ನುಂಟು ಮಾಡಲಿದೆ ಎಂದೂ ಪತ್ರದಲ್ಲಿ ಉಲ್ಲೇಖಿಸಲಾಗಿದೆ.
ಸಂಗೊಳ್ಳಿ ರಾಯಣ್ಣ ಬ್ರಿಗೇಡ್ ಆರಂಭಿಸಿದ್ದು ಮಹಾಪಾತಕ ಕೃತ್ಯ ಅಂತ ಬಣ್ಣಿಸಿರುವ ಶಾಸಕರು, ಈಶ್ವರಪ್ಪನವರ ಹೇಳಿಕೆಗಳ ರೀತಿ-ನೀತಿ ಸ್ಫೋಟಕ ಹಾಗೂ ಘಾತಕಕಾರಿ ಎಂದಿದ್ದಾರೆ. ಸಂಗೊಳ್ಳಿ ರಾಯಣ್ಣ ಬ್ರಿಗೇಡ್'ನ್ನು ಬಿಜೆಪಿ ಪರ್ಯಾಯವಾಗಿ ಹಾಗೂ ಬಿಜೆಪಿಯನ್ನು ಚುನಾವಣೆಯಲ್ಲಿ ಸೋಲಿಸುವ ಏಕಮೇವ ಗುರಿಯೊಂದಿಗೆ ಸ್ಥಾಪಿಸಲಾಗಿದೆ ಎಂದೂ ದೂರಿದ್ದಾರೆ. ಬ್ರಿಗೇಡ್ಗೆ ಯಾವುದೇ ಮಾನ್ಯತೆಯನ್ನಾಗಲೀ, ಬೆಂಬಲವನ್ನಾಗಲೀ ನೀಡಬಾರದು ಎಂದೂ ಪತ್ರದಲ್ಲಿ ಮನವಿ ಮಾಡಿದ್ದಾರೆ.
ವರದಿ: ವಿರೇಂದ್ರ ಉಪ್ಪುಂದ, ಸುವರ್ಣ ನ್ಯೂಸ್
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.