
ಮಾತೆ ಮಹಾದೇವಿ ಮತ್ತು ಲಿಂಗಾನಂದ ಸ್ವಾಮಿಯವರ ನಡುವೆ ಅಕ್ರಮ ಸಂಬಂಧವಿತ್ತು ಎಂದು ರಂಭಾಪುರಿ ಮಠದ ಸ್ವಾಮಿಗಳು ಗಂಭೀರ ಆರೋಪ ಮಾಡಿದ್ದಾರೆ. 35 ವರ್ಷಗಳ ಹಿಂದೆ ಸ್ವತಃ ಲಿಂಗಾನಂದರೇ ತಮ್ಮ ಶಿಷ್ಯರೊಬ್ಬರಿಗೆ ಬರೆದಿದ್ದಾರೆನ್ನಲಾದ ಪತ್ರಗಳಲ್ಲಿ ಈ ವಿಚಾರವನ್ನು ಪ್ರಸ್ತಾಪಿಸಿದ್ದಾರೆ. ಈ ಪತ್ರಗಳ ಆಧಾರವನ್ನಿಟ್ಟುಕೊಂಡೇ ರಂಭಾಪುರಿ ಶ್ರಿಗಳು ಮಾತೆ ಮಹಾದೇವಿ ವಿರುದ್ಧ ಆಪಾದನೆ ಮಾಡುತ್ತಿದ್ದಾರೆ. ಸೇಂದಿ ಗಿಡದ ಕೆಳಗೆ ಕುಳಿತು ಹಾಲು ಕುಡಿದರೂ ಜನರು ಸೇಂದಿ ಕುಡಿದನೆಂದೇ ಭಾವಿಸುತ್ತಾರೆ ಎಂದು ಹೇಳುವ ಮೂಲಕ ಲಿಂಗಾನಂದರು ಆ ಪತ್ರದಲ್ಲಿ ತಮ್ಮದು ಅನೈತಿಕ ಸಂಬಂಧವಲ್ಲ, ಪರಿಶುದ್ಧ ಸಂಬಂಧವೆಂಬುದನ್ನು ಒತ್ತಿಹೇಳಿರುವುದು ಕಂಡುಬರುತ್ತದೆ. 25 ಪುಟಗಳ ಆ ಪತ್ರದಲ್ಲಿ 14 ಮತ್ತು 16ನೇ ಪುಟದಲ್ಲಿ ಈ ವಿಚಾರಗಳು ಉಲ್ಲೇಖವಾಗಿವೆ.
ಲಿಂಗಾನಂದರ ಪತ್ರದ ಕೆಲ ಅಂಶಗಳು:
"...ನನ್ನ ಮತ್ತು ರತ್ನಳ ನಡುವೆ ಆಕ್ರಮ ಸಂಬಂಧವಿದೆಯೆಂದು ನಾವಿಬ್ಬರೂ ಲೈಂಗಿಕ ಸುಖವಿಲಾಸದಲ್ಲಿರುವೆವೆಂದೂ ಬಸವಾನಂದನು ನಿಮಗೆ ಹೇಳಿದಾಗ ನಿಮಗೆ ನಂಬಿಕೆಯಾಗಿರಲು ಸಾಕು. ಬಸವಾನಂದ ಬಿಟ್ಟು ಬೇರೆ ಯಾರಾದರೂ ಹೇಳಿದ್ದರೆ ಪ್ರಾಯಶಃ ನೀವು ನಂಬುತ್ತಿರಲಿಲ್ಲ. ನನ್ನಲ್ಲೇ ಇದ್ದ ವ್ಯಕ್ತಿ ಹೇಳಿದಾಗ ನಂಬುವುದು ಸ್ವಾಭಾವಿಕ. ಆದರೂ ಪ್ರತ್ಯಕ್ಷ ಕಂಡರೂ ಪ್ರಮಾಣಿಸಿ ನೋಡಬೇಕೆಂಬ ಹಿರಿಯರ ಅನುಭವದ ವಾಣಿಯನ್ನು ತಾವು ಕೇಳಿರಲೂ ಸಾಕು. ತಾವು ಪ್ರಮಾಣಿಸಿ ನೋಡಿದರೆ ಒಳಿತಲ್ಲವೇ? ಸೇಂದಿ ಗಿಡದ ಕೆಳಗೆ ಕುಳಿತು ನಾನು ಹಾಲು ಕುಡಿದರೆ ಜನ ತಿಳಿಯುವುದು ಸೇಂದಿ ಕುಡಿದೆನೆಂದು ಭಾವಿಸಿಯಾರು. ಆದರೆ ನಾನು ಕುಡಿದದ್ದು ಸೇಂದಿಯಲ್ಲ, ಹಾಲು. ಸೇಂದಿಯ ಅಮಲು ನನ್ನಲ್ಲಿಲ್ಲ. ಹಾಲಿನ ಪ್ರಯೋಜನ ಮುಂದೆ ತಿಳಿದಾಗ ಜನ ಒಪ್ಪಿಕೊಳ್ಳಬಹುದು. ಹೀಗೆ ಆಗಿದೆ ನನ್ನ ಪರಿಸ್ಥಿತಿ. ನನ್ನ ರತ್ನಳ ಸಂಬಂಧ ಕಾಮದ ಲೈಂಗಿಕ ಸಂಬಂಧವಲ್ಲ, ಅದು ಪವಿತ್ರವಾದ ಆಧ್ಯಾತ್ಮಿಕ ಸಂಬಂಧವು. ಇದಕ್ಕೆ ಸಾಕ್ಷಿ ಶಿವನೇ. ಮಾನವರ ಚರ್ಮಚಕ್ಷಂಗಳಿಗೆ ಕಾಣದೇ ಇರುವ ಅನಂತ ಘಟನೆಗಳನ್ನು ಕಣ್ಣಲ್ಲಿ ಕಣ್ಣಿಟ್ಟು ನೋಡುವ ಆ ಮುಕ್ಕಣ್ಣನೇ ಸಾಕ್ಷಿ. ನಾನು ಪತಿತನಾಗಿಲ್ಲ. ರತ್ನಳು ತನ್ನ ಪಾವಿತ್ರತೆಯನ್ನು ಕಾಯ್ದುಕೊಂಡ ಪರಿಶುದ್ಧ ಜೀವಿ. ಅವಳ ನಮ್ಮ ಸಂಬಂಧ ಪವಿತ್ರವಾಗಿದೆಯೆಂದು ನಾನು ಶಿವನ ಸಾಕ್ಷಿಯಾಗಿ ಅಕ್ಕನ ಸಾಕ್ಷಿಯಾಗಿ ಹೇಳುವೆ. ನೀವು ನಂಬಿರಿ ಅಥವಾ ಬಿಡಿರಿ, ಲೋಕದ ಜನರು ತಪ್ಪು ಭಾವಿಸುವಂತೆ ರತ್ನಳು ನನ್ನೊಡನೆ ಒಡನಾಟ ಮಾಡಿದ್ದಾಳೆ. ಈ ಸಂಪರ್ಕ ಇಟ್ಟುಕೊಂಡದ್ದು ತಪ್ಪಾಗಿರಬಹುದು. ಜನರ ದೃಷ್ಟಿಯಲ್ಲಿ ತಪ್ಪಾದರೂ ಶಿವನ ದೃಷ್ಟಿಯಲ್ಲಿ ತಪ್ಪಿಲ್ಲ. ಜನಕಂಜಿ ನಡೆದರೆ ಏನುಂಟು? ಮನಕಂಜಿ ನಡೆಯಬೇಕಲ್ಲವೇ. ಜನ ಮೆಚ್ಚಿದರೆ ಶಿವ ಬಿಡುತಿಹನೇ? ನಾವು ಶಿವನ ಅಂಜಿಕೆಯಲ್ಲಿದ್ದೇವೆಯೇ ವಿನಃ ಈ ಹುಲ್ಲು ಮಾನವರ ಅಂಜಿಕೆಯಲ್ಲಿಲ್ಲ. ಈಗ ಸಹ ರತ್ನಳು ನನ್ನ ಬಳಿಯಲ್ಲಿಯೇ ಇದ್ದಾಳೆ, ಕಾಮಿನಿಯ ಸಹವಾಸದಲ್ಲಿದವರು ಪೂಜ್ಯರೆಂದು ಭಾವಿಸಿದರೆ, ಕಾಮಿನಿಯ ಸಹ ವಾಸದಲ್ಲಿದ್ದರೂ, ಪಾವಿತ್ರ್ಯತೆ ಕಾಯ್ದುಕೊಂಡ ಸಂಯಮಿಗಳು ಇನ್ನೂ ಪೂಜ್ಯರಲ್ಲವೇ? ನೀವು ಇನ್ನಷ್ಟು ಆನಂದ ಅಭಿಮಾನ ಪಡೆಯಬೇಕು, ನಾನು ನನ್ನ ಆತ್ಮ ಸಂಯಮದ ಬಗ್ಗೆ ಒಮ್ಮೆ ಪರೀಕ್ಷೆಯೂ ಮಾಡಿದೆ. ಒಂದು ದಿನ ರಾತ್ರಿ 1-2 ಗಂಟೆ ಕಾಲ ರತ್ನಳನ್ನು ನನ್ನ ಹಾಸಿಗೆಯ ಮೇಲೆಯೇ ಮಲಗಿಸಿಕೊಂಡೆ. ನಾವು ಒಂದೆ ಹಾಸಿಗೆಯಲ್ಲಿ ಹತ್ತಿಕೊಂಡು ಮಲಗಿದರೂ ನಾವು ಉಭಯತರು ಲೈಂಗಿಕ ಸಂಬಂಧ ಮಾಡಲಿಲ್ಲ ವೆಂಬುದನ್ನು ನಾನು ತುಂಬಾ ಅಭಿಮಾನದಿಂದ ಈ ಸಂಗತಿ ಹೇಳುತ್ತಿದ್ದೇನೆ. ಇದನ್ನು ಇನ್ನುವರೆಗೆ ಯಾರಿಗೂ ಹೇಳಿಲ್ಲ. ನಿಮ್ಮೊಬ್ಬರಿಗೆ ತಿಳಿಸುತ್ತಿರುವೆ. ಈ ಪ್ರಸಂಗವನ್ನು ಪ್ರಾಯಶಃ ಬಸವಾನಂದ ನೋಡಿ ನಿಮಗೆ ಹೇಳಿರಲು ಸಾಕು. ಪಾಪ, ಅವನಿಗೆಷ್ಟು ತಿಳಿದೀತು, ರತ್ನಳು ನನ್ನ ಜೀವನಕ್ಕೆ ಮಾಯೆಯಾಗಿ ಬಂದಿಲ್ಲ; ತಾಯಿಯಾಗಿ ಬಂದಿದಾಳೆ, ಶ್ರೀ ಅರವಿಂದ- ಮದರರಂತೆ ನಮ್ಮ ಸಂಬಂಧವಿದೆಯೆಂಬುದನ್ನು ನೀನು ಖಂಡಿತ ತಿಳಿಯಬೇಕು. ನನ್ನ ಹೃದಯವನ್ನೇ ನಿನ್ನ ಮುಂದೆ ಬಿಚ್ಚಿಟ್ಟಿದ್ದೇನೆ. ಕೊಲ್ಲಂ; ಕಾಯಿ ನಿಮ್ಮ ಧರ್ಮ..."
(ಇಲ್ಲಿ ಮಾತೆ ಮಹಾದೇವಿಯವರ ಪೂರ್ವಾಶ್ರಮದ ಹೆಸರು ರತ್ನ ಎಂದೇ ಇದೆ. 1966ರಲ್ಲಿ ಇವರಿಗೆ ಜಂಗಮ ದೀಕ್ಷೆ ಕೊಟ್ಟಿದ್ದು ಲಿಂಗಾನಂದ ಸ್ವಾಮಿಗಳೇ.)
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.