ಫೀ ಪಡೆಯದೇ ಸೈನಿಕರ ವಕೀಲಿಕೆ ಮಾಡಿ: ಜಡ್ಜ್

By Web DeskFirst Published Feb 15, 2019, 5:18 PM IST
Highlights

ಪುಲ್ವಾಮಾದಲ್ಲಿ ನಡೆದ ಉಗ್ರ ದಾಳಿಗೆ ಎಲ್ಲೆಡೆಯಿಂದ ಖಂಡನೆ ವ್ಯಕ್ತವಾಗುತ್ತಿದೆ. ಹುತಾತ್ಮ ಯೋಧರ ಕುಟುಂಬದ ಪರವಾಗಿ ಬೆಂಬಲ ವ್ಯಕ್ತವಾಗುತ್ತಿದೆ. ಕರ್ನಾಟಕ ಹೈಕೋರ್ಟ್ ನ್ಯಾಯಮೂರ್ತಿಗಳು ಹಾಗೂ ವಕೀಲರೂ ಈ ಘೋರ ಕೃತ್ಯವನ್ನು ಖಂಡಿಸಿ, ಸಿಆರ್‌ಪಿಎಫ್ ಪಡೆಯ ಯೋಧರಿಗೆ ಶ್ರದ್ಧಾಂಜಲಿ ಸಲ್ಲಿಸಿದರು.

ಬೆಂಗಳೂರು (ಫೆ. 15): ಪುಲ್ವಾಮಾದಲ್ಲಿ ನಡೆದ ಉಗ್ರ ದಾಳಿಗೆ ಎಲ್ಲೆಡೆಯಿಂದ ಖಂಡನೆ ವ್ಯಕ್ತವಾಗುತ್ತಿದೆ. ಹುತಾತ್ಮ ಸೈನಿಕರ ಕುಟುಂಬಕ್ಕೆ ಸಾಂತ್ವನ ಹೇಳಲಾಗುತ್ತಿದೆ. ಶಾಲಾ-ಕಾಲೇಜು, ಕಚೇರಿ, ಕೋರ್ಟ್‌ಗಳಲ್ಲಿಯೂ ದೇಶಕ್ಕಾಗಿ ಬಲಿದಾನ ಮಾಡಿದವರನ್ನು ನಮಿಸಲಾಗುತ್ತಿದೆ. ಕರ್ನಾಟಕ ಹೈಕೋರ್ಟ್ ನ್ಯಾಯಮೂರ್ತಿಗಳು ಹಾಗೂ ವಕೀಲರೂ ಈ ಘೋರ ಕೃತ್ಯವನ್ನು ಖಂಡಿಸಿ, ಸಿಆರ್‌ಪಿಎಫ್ ಪಡೆಯ ಯೋಧರಿಗೆ ಶ್ರದ್ಧಾಂಜಲಿ ಸಲ್ಲಿಸಿದರು.

ಹೈಕೋರ್ಟ್ ಹಂಗಾಮಿ ಮುಖ್ಯ ನ್ಯಾಯಮೂರ್ತಿ ಎಲ್. ನಾರಾಯಣ ಸ್ವಾಮಿ ಅವರು ಮಾತನಾಡಿ, ಉಗ್ರರ ದಾಳಿ ಖಂಡನಾರ್ಹ.  ಸೈನಿಕರು ಮತ್ತವರ ಕುಟುಂಬದ ಜೊತೆಗೆ ಇಡೀ ದೇಶ ನಿಲ್ಲಬೇಕಿದೆ.‌  ಸೈನಿಕರು ಹಾಗೂ ಮಾಜಿ‌ ಸೈನಿಕರು ನ್ಯಾಯಾಲಯಕ್ಕೆ ಸಲ್ಲಿಸುವ ಅರ್ಜಿಯನ್ನು ನ್ಯಾಯಾಧೀಶರು ಮೊದಲ‌ ಆದ್ಯತೆ ಮೇರೆಗೆ ವಿಚಾರಣೆ ನಡೆಸಿ ತ್ವರಿತವಾಗಿ ಇತ್ಯರ್ಥಪಡಿಸಬೇಕು. ವಕೀಲರೂ ಸೈನಿಕರಿಂದ ಶುಲ್ಕ ಪಡೆಯದೆ ಉಚಿತವಾಗಿ ವಕಾಲತ್ತು ವಹಿಸಿ, ಅವರ ಪರ ವಾದ ಮಂಡಿಸಬೇಕು.‌ ಅದುವೇ ನಾವು ಯೋಧರಿಗೆ ಸಲ್ಲಿಸುವ ಅತಿದೊಡ್ಡ ಸೇವೆ ಎಂದರು. 

ಯೋಧರ ಹತ್ಯೆ ಕೃತ್ಯ ಅತ್ಯಂತ ಖಂಡನೀಯ. ದೇಶದ ಹೊರಗಿನವರಾಗಲಿ ಅಥವಾ ಒಳಗಿನವರಾಗಲಿ ಇಂಥ ಕೃತ್ಯವನ್ನು ಖಂಡಿಸಬೇಕು. ಜವಾನರು ಹೈಕೋರ್ಟ್‌ಗೆ ಅರ್ಜಿ ಸಲ್ಲಿಸಿದರೆ, ನ್ಯಾಯಾಧೀಶರು ಅದನ್ನು ಆದ್ಯತೆ ಮೇರೆಗೆ ವಿಚಾರಣೆ ನಡೆಸಿ, ಇತ್ಯರ್ಥ ಮಾಡಬೇಕು ಎಂದು ಆಗ್ರಹಿಸಿದರು.
 

click me!