
ಜಮ್ಮು: ಗಡಿಯಲ್ಲಿ ಒಳನುಸುಳುವ ಉಗ್ರರನ್ನು ಕೆಲವೇ ಕ್ಷಣಗಳಲ್ಲಿ ಪತ್ತೆ ಮಾಡಿ ಸಂಹಾರ ಮಾಡಲು ಜಮ್ಮುವಿನ ಭಾರತ- ಪಾಕಿಸ್ತಾನ ಅಂತಾರಾಷ್ಟ್ರೀಯ ಗಡಿಯ 198 ಕಿ.ಮೀ. ವ್ಯಾಪ್ತಿಯಲ್ಲಿ ಅದೃಶ್ಯ ಲೇಸರ್ ಬೇಲಿಯನ್ನು ಅಳವಡಿಸಲು ಸರ್ಕಾರ ಸಜ್ಜಾಗುತ್ತಿದೆ.
ದೆಹಲಿ ಮೂಲದ ಕ್ರೋನ್ ಸಿಸ್ಟಮ್ಸ್ ಎಂಬ ಕಂಪನಿ ಸ್ವದೇಶಿ ತಂತ್ರಜ್ಞಾನದ ‘ಕವಚ್' ಎಂಬ ಲೇಸರ್ ಬೇಲಿಯನ್ನು ಅಭಿವೃದ್ಧಿಪಡಿಸಿದೆ. ಈಗ ಇರುವ ಲೇಸರ್ ಬೇಲಿಗಿಂತ ಇದು ಅತ್ಯಾಧುನಿಕವಾಗಿದೆ. ಈಗಾಗಲೇ ಪ್ರಾಯೋಗಿಕವಾಗಿ ಸಾಂಬಾ ವಲಯದಲ್ಲಿ ಇದನ್ನು ಅಳವಡಿಸಲಾಗಿದೆ. ಶೀಘ್ರದಲ್ಲೇ ಇತರೆಡೆಗೂ ಅಳವಡಿಕೆ ಮಾಡಲಾಗುತ್ತದೆ.
ಹಾಲಿ ಗಡಿಯಲ್ಲಿ ಕೆಲವೆಡೆ ಲೇಸರ್ ಬೇಲಿ ಬಳಸಲಾಗುತ್ತಿದೆ. ಅದರಿಂದ ಹೊರಸೂಸುವ ಕಿರಣಗಳು ಉಗ್ರರ ಕಣ್ಣಿಗೆ ಕಾಣುತ್ತವೆ. ಅದೂ ಅಲ್ಲದೆ ಆ ಬೇಲಿಯನ್ನು ಎಲ್ಲ ರೀತಿಯ ಪ್ರದೇಶದಲ್ಲೂ ಅಳವಡಿಸಲು ಆಗದು. ಆದರೆ, ‘ಕವಚ್' ಲೇಸರ್ ಬೇಲಿ ಕಣ್ಣಿಗೆ ಕಾಣುವುದಿಲ್ಲ. ಜಮ್ಮು ಗಡಿಯಲ್ಲಿ 13 ನದಿಗಳು ಹಾಗೂ ಉಪನದಿಗಳು ಇವೆ. ಅಲ್ಲೆಲ್ಲಾ ಈ ಬೇಲಿ ಅಳವಡಿಸಬಹುದಾಗಿದೆ ಎಂದು ಬಿಎಸ್‌ಎಫ್‌ನ ಜಮ್ಮು ವಲಯದ ಮಾಜಿ ಮಹಾನಿರ್ದೇಶಕ ರಾಕೇಶ್ ಶರ್ಮಾ ತಿಳಿಸಿದ್ದಾರೆ.
‘ಕವಚ್' ಬೇಲಿ ಅಳವಡಿಸಿರುವ ಸ್ಥಳಗಳಲ್ಲಿ ಒಳನುಸುಳುವಿಕೆ ನಡೆದರೆ ತಕ್ಷಣವೇ ಸಮೀಪದ ಬಿಎಸ್‌ಎಫ್ ಶಿಬಿರಕ್ಕೆ ಮಾಹಿತಿ ಹೋಗುತ್ತದೆ. ಆಗ ಯೋಧರು ತಕ್ಷಣವೇ ಪ್ರತಿರೋಧಕ್ಕೆ ಸಜ್ಜಾಗಬಹುದಾಗಿದೆ.
ಪಾಕಿಸ್ತಾನದೊಂದಿಗೆ ಭಾರತ 3000 ಕಿ.ಮೀ.ಯಷ್ಟುಗಡಿ ಹೊಂದಿದೆ. ಈ ಪೈಕಿ ಜಮ್ಮು-ಕಾಶ್ಮೀರದಲ್ಲಿ 198 ಕಿ.ಮೀ. ಅಂತಾರಾಷ್ಟ್ರೀಯ ಗಡಿ ಇದೆ. ಜತೆಗೆ 740 ಕಿ.ಮೀ. ಗಡಿ ನಿಯಂತ್ರಣ ರೇಖೆ (ಎಲ್‌ಒಸಿ) ಇದೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.