
ಲಾಸ್ ವೇಗಸ್: ಅಮೆರಿಕದ ಜೂಜು ನಗರಿ ಲಾಸ್ ವೇಗಸ್‌ನಲ್ಲಿ ಸಂಭವಿಸಿದ ಭೀಕರ ಹತ್ಯಾಕಾಂಡ ಪ್ರಕರಣದ ಹೊಣೆಯನ್ನು ಇಸ್ಲಾಮಿಕ್ ಸ್ಟೇಟ್ (ಐಸಿಸ್) ಉಗ್ರವಾದಿ ಸಂಘಟನೆ ಹೊತ್ತುಕೊಂಡಿದ್ದರೂ, ಅಂಥ ಯಾವುದೇ ಸಾಧ್ಯತೆ ಕಂಡುಬರುತ್ತಿಲ್ಲ ಎಂದು ಅಮೆರಿಕದ ತನಿಖಾ ಸಂಸ್ಥೆ ‘ಎಫ್‌ಬಿಐ’ ಹೇಳಿದೆ.
‘ದಾಳಿಕೋರ ಸ್ಟೀಫನ್ ಪ್ಯಾಡ್ಡಾಕ್ ಹಲವು ತಿಂಗಳುಗಳ ಹಿಂದೆಯೇ ಇಸ್ಲಾಂಗೆ ಮತಾಂತರಗೊಂಡಿದ್ದ. ಆತನೇ ದಾಳಿ ಮಾಡಿದ ನಮ್ಮ ಯೋಧ’ ಎಂದು ಐಸಿಸ್ ಸಂಘಟನೆ ಹೇಳಿಕೆ ನೀಡಿತ್ತು. ಆದರೆ ಇದನ್ನು ತಿರಸ್ಕರಿಸಿರುವ ಎಫ್‌ಬಿಐ ಅಧಿಕಾರಿ ಅರೋನ್ ರೋಸ್, ‘ಐಸಿಸ್‌ಗೂ ಪ್ಯಾಡ್ಡಾಕ್‌ಗೂ ಯಾವುದೇ ಸಂಬಂಧ ಇರುವುದು ಕಂಡುಬರುತ್ತಿಲ್ಲ’ ಎಂದು ಹೇಳಿದ್ದಾರೆ. ಹೀಗಾಗಿ ಹತ್ಯೆಯ ನೈಜ ಉದ್ದೇಶವೇನು ಎಂಬ ನಿಟ್ಟಿನಲ್ಲಿ ಎಫ್‌ಬಿಐ ತನಿಖೆ ನಡೆಸುತ್ತಿದೆ.
ಪ್ಯಾಡ್ಡಾಕ್ ನಿವೃತ್ತ ಅಕೌಂಟೆಂಟ್ ಆಗಿದ್ದು, ಆತನಿಗೆ ಐಸಿಸ್ ಜತೆ ಸಂಬಂಧ ಹೊಂದಿದ ಯಾವುದೇ ಸುಳಿವು ನಮಗೆ ಇರಲಿಲ್ಲ. ಆತ ಐಷಾರಾಮಿ ವ್ಯಕ್ತಿಯಾಗಿದ್ದು, ನಿವೃತ್ತಿ ಜೀವನವನ್ನು ವೈಭವದಿಂದ ನಡೆಸುತ್ತಿದ್ದ. ನೆವಾಡಾದಲ್ಲಿರುವ ತನ್ನ ಮನೆಯಿಂದ ಆಗಾಗ್ಗೆ ಲಾಸ್ ವೇಗಸ್‌ಗೆ ಹೋಗಿ ಜೂಜು ಆಡುತ್ತಿದ್ದ. ಹಣವನ್ನು ರಿಯಲ್ ಎಸ್ಟೇಟ್‌ನಲ್ಲೂ ತೊಡಗಿಸುತ್ತಿದ್ದ ಎಂದು ಆತನ ಕುಟುಂಬಸ್ಥರು ಹೇಳಿದ್ದಾರೆ.
ಡಕಾಯಿತನ ಮಗ!: ಆದರೆ ಪ್ಯಾಡ್ಡಾಕ್‌ನ ತಂದೆ ಡಕಾಯಿತನಾಗಿದ್ದ. ಆತ 60ರ ದಶಕದಲ್ಲಿ ಎಫ್‌ಬಿಐ ಮೋಸ್ಟ್ ವಾಂಟೆಡ್ ಪಟ್ಟಿಯಲ್ಲಿದ್ದ. ಇದರ ಹೊರತಾಗಿ ಪ್ಯಾಡ್ಡಾಕ್ ಮೇಲೆ ಯಾವುದೇ ಕ್ರಿಮಿನಲ್ ಪ್ರಕರಣ ಇರಲಿಲ್ಲ ಎಂದು ಲಾಸ್ ವೇಗಸ್ ಪೊಲೀಸರು ಹೇಳಿದ್ದಾರೆ. ಲಾಸ್ ವೇಗಸ್‌ನಲ್ಲಿ ನಡೆಯುತ್ತಿದ್ದ ಸಂಗೀತ ರಾತ್ರಿಯೊಂದರ ಮೇಲೆ ಕಟ್ಟಡವೊಂದರ 32ನೇ ಅಂತಸ್ತಿನಿಂದ ಪ್ಯಾಡ್ಡಾಕ್ ಗುಂಡಿನ ದಾಳಿ ನಡೆಸಿದ್ದ. ಘಟನೆಯಲ್ಲಿ 58 ಮಂದಿ ಅಸುನೀಗಿ,500 ಮಂದಿ ಗಾಯಗೊಂಡಿದ್ದರು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.