ಜಾರಕಿಹೊಳಿ ಗಾಯಕ್ಕೆ ಲಕ್ಷ್ಮೀ ಹೆಬ್ಬಾಳ್ಕರ್‌ ಬರೆ

By Web DeskFirst Published Dec 23, 2018, 8:26 AM IST
Highlights

ಸಚಿವ ಸಂಪುಟದಿಂದ ರಮೇಶ್ ಜಾರಕಿಹೊಳಿ ಅವರನ್ನು ಕೈ ಬಿಟ್ಟಿರುವುದಕ್ಕೆ ಶಾಸಕಿ ಲಕ್ಷ್ಮೀ ಹೆಬ್ಬಾಳ್ಕರ್ ಪ್ರತಿಕ್ರಿಯಿಸಿ,  ವೈಯಕ್ತಿಕವಾಗಿ ನನಗೆ ತುಂಬಾ ನೋವಾಗಿದೆ ಎಂದು ಹೇಳಿದ್ದಾರೆ. 

ಬೆಳಗಾವಿ :  ‘ರಮೇಶ್‌ ಜಾರಕಿಹೊಳಿ ಅವರನ್ನು ಸಚಿವ ಸಂಪುಟದಿಂದ ಕೈಬಿಟ್ಟಿದ್ದಕ್ಕೆ ವೈಯಕ್ತಿಕವಾಗಿ ನನಗೆ ತುಂಬಾ ನೋವಾಗಿದೆ. ಅವರನ್ನು ಇಷ್ಟುಬೇಗ ಸಚಿವ ಸಂಪುಟದಿಂದ ತೆಗೆದುಹಾಕಬಾರದಿತ್ತು’ ಎಂದು ಬೆಳಗಾವಿ ಗ್ರಾಮೀಣ ಕ್ಷೇತ್ರದ ಶಾಸಕಿ ಲಕ್ಷ್ಮೀ ಹೆಬ್ಬಾಳ್ಕರ್‌ ಹೇಳಿದ್ದಾರೆ. ರಮೇಶ್‌ ಬೆಂಬಲಿಗರು ಈ ಹೇಳಿಕೆಯನ್ನು ಕುಹಕವೆಂದೇ ಭಾವಿಸಿದ್ದು, ಈ ಮೂಲಕ ಸಚಿವ ಸ್ಥಾನ ಕಳೆದುಕೊಂಡು ಹಿನ್ನಡೆ ಅನುಭವಿಸಿರುವ ಬೆಳಗಾವಿಯ ಪ್ರಭಾವಿ ನಾಯಕನ ಗಾಯಕ್ಕೆ ಹೆಬ್ಬಾಳ್ಕರ್ ಬರೆ ಎಳೆದಂತಾಗಿದೆ.

ನಗರದಲ್ಲಿ ಶನಿವಾರ ಸುದ್ದಿಗಾರರೊಂದಿಗೆ ಮಾತನಾಡಿದ ಲಕ್ಷ್ಮೀ, ‘ರಮೇಶ್‌ ಜಾರಕಿಹೊಳಿ ಪ್ರಭಾವಿ ನಾಯಕರು. ಗೋಕಾಕ್‌ ವಿಧಾನಸಭೆ ಕ್ಷೇತ್ರದಿಂದ ಸತತ ಐದು ಬಾರಿ ಆಯ್ಕೆಯಾಗಿದ್ದಾರೆ. ಸಾಮಾನ್ಯ ಕ್ಷೇತ್ರವಾಗಿರುವ ಗೋಕಾಕದಲ್ಲಿ ಲಿಂಗಾಯತರ ಪ್ರಾಬಲ್ಯವಿದ್ದರೂ ಗೆದ್ದು ಬಂದಿದ್ದಾರೆ. ಅವರನ್ನು ಇಷ್ಟುಬೇಗ ಸಚಿವ ಸಂಪುಟದಿಂದ ತೆಗೆದುಹಾಕಬಾರದಿತ್ತು. ಇನ್ನೆರಡು ವರ್ಷಗಳ ಕಾಲ ಅವಕಾಶ ನೀಡಬೇಕಿತ್ತು’ ಎಂದು ಹೇಳಿದರು.

ಇನ್ನು ಸತೀಶ್‌ ಜಾರಕಿಹೊಳಿ ಅವರಿಗೆ ಸಚಿವ ಸಂಪುಟದಲ್ಲಿ ಸ್ಥಾನ ನೀಡಿರುವುದು ಸಂತೋಷವಾಗಿದೆ. ಪಕ್ಷದ ವರಿಷ್ಠರು ನುಡಿದಂತೆಯೇ ಸಂಪುಟ ವಿಸ್ತರಣೆ ಮಾಡಿದ್ದಾರೆ. ಸಂಪುಟ ವಿಸ್ತರಣೆ ವೇಳೆ ಲಿಂಗಾಯತರನ್ನು ಕಡೆಗಣಿಸಿಲ್ಲ ಎಂದರು.

ಅಂಜಲಿ ನಿಂಬಾಳ್ಕರ್ ಅವರಿಗೆ ಸಂಸದೀಯ ಕಾರ್ಯದರ್ಶಿ ಸ್ಥಾನ ನೀಡಿರುವುದಕ್ಕೆ ನನಗೆ ಸಂತೋಷವಿದೆ. ನಾನು ಎಲ್ಲೂ ಸಚಿವ ಪದವಿ ಬೇಕೆಂದು ಹೇಳಿಲ್ಲ. ಪಕ್ಷದ ಹೈಕಮಾಂಡ್‌ ತೀರ್ಮಾನಕ್ಕೆ ನಾನು ಬದ್ಧನಾಗಿದ್ದೇನೆ. ಪಕ್ಷದ ಶಿಸ್ತನ್ನು ಪಾಲಿಸುವಂತವಳು ನಾನು ಎಂದು ಇದೇ ವೇಳೆ ಹೆಬ್ಬಾಳ್ಕರ್ ಹೇಳಿದರು.

ಸಚಿವ ಸಂಪುಟ ವಿಸ್ತರಣೆಯಿಂದ ಮೈತ್ರಿ ಸರ್ಕಾರಕ್ಕೆ ಯಾವುದೇ ತೊಂದರೆ ಇಲ್ಲ. ಅತೃಪ್ತ ಕಾಂಗ್ರೆಸ್‌ ಶಾಸಕರನ್ನು ಬಿಜೆಪಿ ಸಂಪರ್ಕ ಮಾಡಿದರೆ, ಬಿಜೆಪಿ ಶಾಸಕರ ಸಂಪರ್ಕದಲ್ಲಿ ನಾವಿರುತ್ತೇವೆ. ಬಿಜೆಪಿ ಮತ್ತು ಕಾಂಗ್ರೆಸ್‌ ಶಾಸಕರು ಯಾರೇ ಇರಲಿ ಯಾರಿಗೂ ಮತ್ತೆ ಚುನಾವಣೆಗೆ ಹೋಗಲು ಇಷ್ಟವಿಲ್ಲ ಎಂದು ಹೆಬ್ಬಾಳಕರ್‌ ತಿಳಿಸಿದರು.

click me!