
ಬೆಂಗಳೂರು : ಹೈಕಮಾಂಡ್ ಸೂಚನೆ ಮೇರೆಗೆ ನಿಗಮ- ಮಂಡಳಿ ಹಾಗೂ ಸಂಸದೀಯ ಕಾರ್ಯದರ್ಶಿಗಳ ಪಟ್ಟಿಯಲ್ಲಿ ಕೆಲವೊಂದು ಬದಲಾವಣೆಯನ್ನು ಮಾಡಿರುವ ರಾಜ್ಯ ಕಾಂಗ್ರೆಸ್ ನಾಯಕತ್ವ, ಶುಕ್ರವಾರ ಅಧಿಕೃತ ಪಟ್ಟಿಯನ್ನು ಪ್ರಕಟಿಸಿದ್ದು, 18 ನಿಗಮ ಮಂಡಳಿಗಳ ಬದಲಾಗಿ 19 ನಿಗಮ-ಮಂಡಳಿಗಳಿಗೆ ಮತ್ತು 7 ಸಂಸದೀಯ ಕಾರ್ಯದರ್ಶಿಗಳ ಬದಲಾಗಿ 9 ಸಂಸದೀಯ ಕಾರ್ಯದರ್ಶಿ ಹುದ್ದೆಗಳಿಗೆ ನೇಮಕ ಮಾಡಲು ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಅವರಿಗೆ ಶಿಫಾರಸು ಮಾಡಿದೆ.
ಕಾಂಗ್ರೆಸ್ ಮೂಲಗಳು ಶುಕ್ರವಾರ ಮಾಧ್ಯಮಗಳಿಗೆ ಬಿಡುಗಡೆ ಮಾಡಿದ್ದ ನಿಗಮ- ಮಂಡಳಿ ಅಧ್ಯಕ್ಷರ 18 ಜನರ ಪಟ್ಟಿಯಲ್ಲಿ ಸ್ಥಾನ ಪಡೆದಿರದಿದ್ದ ಬೆಳಗಾವಿ ಗ್ರಾಮೀಣ ಕ್ಷೇತ್ರದ ಶಾಸಕಿ ಲಕ್ಷ್ಮೀ ಹೆಬ್ಬಾಳಕರ್ ಹಾಗೂ ಶೃಂಗೇರಿ ಶಾಸಕ ಟಿ.ಡಿ.ರಾಜೇಗೌಡ ಅವರು ಶನಿವಾರ ಬಿಡುಗಡೆ ಮಾಡಿದ ಪಟ್ಟಿಯಲ್ಲಿ ಸ್ಥಾನ ಪಡೆದಿದ್ದಾರೆ. ಲಕ್ಷ್ಮೀ ಹೆಬ್ಬಾಳಕರ್ ಅವರಿಗೆ ಮಹತ್ವದ ಮೈಸೂರು ಮಿನರಲ್ಸ್ ಲಿಮಿಟೆಡ್ ಮಂಡಳಿ ದೊರಕಿದ್ದರೆ, ರಾಜೇಗೌಡ ಅವರು ಮಲೆನಾಡು ಪ್ರದೇಶ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಸ್ಥಾನವನ್ನು ಪಡೆದಿದ್ದಾರೆ.
ಆದರೆ, ಶಾಸಕರಾದ ಪ್ರಸಾದ್ ಅಬ್ಬಯ್ಯ ಹಾಗೂ ಪಕ್ಷೇತರ ನಾಗೇಶ್ ಅವರು ಪಟ್ಟಿಯಿಂದ ಹೊರಬಿದ್ದಿದ್ದಾರೆ. ಇನ್ನು, ತಮ್ಮ ತಂದೆ ರಾಮಲಿಂಗಾರೆಡ್ಡಿ ಅವರಿಗೆ ಸಚಿವ ಸ್ಥಾನ ನೀಡಲಿಲ್ಲ ಎಂದು ಸಂಸದೀಯ ಕಾರ್ಯದರ್ಶಿ ಹುದ್ದೆಯನ್ನು ತಿರಸ್ಕರಿಸಿದ ಜಯನಗರ ಶಾಸಕಿ ಸೌಮ್ಯಾ ರೆಡ್ಡಿ ಅವರನ್ನು ಸಂಸದೀಯ ಕಾರ್ಯದರ್ಶಿಗಳ ಅಂತಿಮ ಪಟ್ಟಿಯಿಂದ ಕೈಬಿಡಲಾಗಿದೆ. ಸೌಮ್ಯಾ ರೆಡ್ಡಿ ಬದಲಾಗಿ ವಿಧಾನಪರಿಷತ್ ಸದಸ್ಯ ಎ.ಅಬ್ದುಲ್ ಜಬ್ಬಾರ್ ಸ್ಥಾನ ಗಿಟ್ಟಿಸಿದ್ದಾರೆ. ಇವರಲ್ಲದೆ, ಹೊಸದಾಗಿ ವಿಧಾನ ಪರಿಷತ್ ಸದಸ್ಯ ಎಂ.ಎ.ಗೋಪಾಲಸ್ವಾಮಿ ಮತ್ತು ಲಿಂಗಸುಗೂರು ಶಾಸಕ ದುರ್ಗಪ್ಪ ಹಲಗೇರಿ ಸಂಸದೀಯ ಕಾರ್ಯದರ್ಶಿ ಹುದ್ದೆಯನ್ನು ಗಿಟ್ಟಿಸಿದ್ದಾರೆ.
9 ಮಂದಿ ಸಂಸದೀಯ ಕಾರ್ಯದರ್ಶಿಗಳ ಪೈಕಿ ನಾಲ್ಕು ಮಂದಿ ವಿಧಾನಪರಿಷತ್ ಸದಸ್ಯರು ಹಾಗೂ ಐದು ಮಂದಿ ವಿಧಾನಸಭೆಯ ಸದಸ್ಯರು.
ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್ ಅವರು ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ಅವರಿಗೆ ನಿಗಮ- ಮಂಡಳಿ ಹಾಗೂ ಇತರೆ ಸ್ಥಾನಗಳ ಪಟ್ಟಿಯನ್ನು ಶಿಫಾರಸು ಮಾಡಿದ್ದಾರೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.