ಚಾಮರಾಜಪೇಟೆಯಲ್ಲಿ ಜಮೀರ್ ವಿರುದ್ಧ ಬಿಜೆಪಿಯಿಂದ ವೇಲು ಅಸ್ತ್ರ? ಗೌಡರಿಂದ ಲಾಭವಾಗುತ್ತಾ?

By Suvarna Web DeskFirst Published Oct 1, 2017, 4:16 PM IST
Highlights

ಜಮೀರ್ ಅಹ್ಮದ್ ಅವರು ಜೆಡಿಎಸ್'ನಲ್ಲಿ ಬಂಡಾಯ ಎದ್ದಿರುವುದು ಲಹರಿ ವೇಲು ಅವರಿಗೆ ಅನುಕೂಲವಾದರೂ ಆಗಬಹುದೆಂಬ ಮಾತಿದೆ. ಜಮೀರ್ ಅವರನ್ನು ಶತಾಯಗತಾಯ ಸೋಲಿಸಲು ಎಚ್.ಡಿ.ದೇವೇಗೌಡರು ಪಣ ತೊಟ್ಟಿದ್ದಾರೆ. ಜಮೀರ್ ಅವರ ಸಾಂಪ್ರದಾಯಿಕ ವೋಟುಗಳು ವಿಭಜನೆಯಾದಲ್ಲಿ ಲಹರಿ ವೇಲು ಅವರಿಗೆ ಸಹಾಯವಾದೀತು. ಈ ಹಿನ್ನೆಲೆಯಲ್ಲಿ ದೇವೇಗೌಡರ ಮುಂದಿನ ನಡೆಗಳ ಬಗ್ಗೆಯೂ ಸಾಕಷ್ಟು ಕುತೂಹಲ ಗರಿಗೆದರಿದೆ.

ಬೆಂಗಳೂರು(ಅ. 01): ಚಾಮರಾಜಪೇಟೆ ಕ್ಷೇತ್ರದ ಶಾಸಕ ಹಾಗೂ ಜೆಡಿಎಸ್ ಬಂಡಾಯ ನಾಯಕ ಜಮೀರ್ ಅಹಮದ್'​​ರನ್ನು ಮಣಿಸಲು ಬಿಜೆಪಿ ಹೊಸ ಅಭ್ಯರ್ಥಿಯನ್ನು ಹುಡುಕಿದೆ. ಇತ್ತೀಚೆಗಷ್ಟೇ ಬಿಜೆಪಿಗೆ ಸೇರ್ಪಡೆಯಾದ ಚಿತ್ರೋದ್ಯಮಿ ಲಹರಿ ವೇಲು ಅವರನ್ನು ಕಣಕ್ಕಿಳಿಸುವ ಬಗ್ಗೆ ಪಕ್ಷದ ನಾಯಕರು ಚಿಂತನೆ ನಡೆಸಿದ್ದಾರೆ. ಹಳೆಯ ಮುಖಗಳನ್ನೇ ಕಣಕ್ಕಿಳಿಸಿದಲ್ಲಿ ಜಮೀರ್ ಅಹಮದ್​​'ರನ್ನು ಎದುರಿಸುವುದು ಸಾಧ್ಯವಿಲ್ಲ. ಹೀಗಾಗಿ, ಜಮೀರ್'ಗೆ ಸಮನಾಗಿರುವ ಹಾಗೂ ಚಾಮರಾಜಪೇಟೆಯಲ್ಲೇ ಬೆಳೆದು ಬಂದಿರುವ ಲಹರಿ ವೇಲು ಪ್ರಬಲ ಅಭ್ಯರ್ಥಿಯಾಗಬಹುದು ಎಂಬ ಅಭಿಪ್ರಾಯ ಪಕ್ಷದಲ್ಲಿ ವ್ಯಕ್ತವಾಗಿದೆ. ಇದೇ ಮೊದಲ ಬಾರಿಗೆ ರಾಜಕೀಯಕ್ಕೆ ಕಾಲಿಟ್ಟಿರುವುದರಿಂದ ಚುನಾವಣೆಯಲ್ಲಿ ಹೊಸ ಮುಖಕ್ಕೆ ಅವಕಾಶ ಕೊಟ್ಟಂತಾಗುತ್ತದೆ. ಕ್ಷೇತ್ರದ ಮತದಾರರೂ ಸ್ವೀಕರಿಸಬಹುದು ಎಂಬ ನಿರೀಕ್ಷೆ ಬಿಜೆಪಿಯಲ್ಲಿ ಕಂಡು ಬಂದಿದೆ. ಟಿಕೆಟ್ ನೀಡುವ ಬಗ್ಗೆ ಇದುವರೆಗೆ ಯಾವುದೇ ಅಂತಿಮ ನಿರ್ಧಾರವಾಗಿಲ್ಲ. ಆದರೆ, ಲಹರಿ ವೇಲು ಅವರನ್ನು ಕಣಕ್ಕಿಳಿಸಿದಲ್ಲಿ ಹಾಲಿ ಶಾಸಕ ಜಮೀರ್ ಅಹಮದ್ ಅವರಿಗೆ ತೀವ್ರ ಪೈಪೋಟಿ ಎದುರಾಗಬಹುದು.

ಲಹರಿ ವೇಲು ಅವರು ಆರೆಸ್ಸೆಸ್'ಗೂ ಹತ್ತಿರವಾಗುತ್ತಿದ್ದಾರೆ. ಬಿಜೆಪಿ ಸೇರ್ಪಡೆಗೊಂಡ ಬಳಿಕ ಸಮಯ ವ್ಯರ್ಥ ಮಾಡದ ವೇಲು ಅವರು ನಾಗಪುರದಲ್ಲಿರುವ ಆರೆಸ್ಸೆಸ್ ಕಚೇರಿಗೆ ತೆರಳಿ ಸರಸಂಘಚಾಲಕ ಮೋಹನ್ ಭಾಗವತ್ ಅವರನ್ನ ಭೇಟಿ ಮಾಡಿ ಬಂದಿದ್ದಾರೆ. ರಾಜ್ಯದ ಆರೆಸ್ಸೆಸ್ ನಾಯಕರೊಂದಿಗೂ ಅವರು ನಿರಂತರ ಸಂಪರ್ಕದಲ್ಲಿದ್ದಾರೆನ್ನಲಾಗಿದೆ. ಇವೆಲ್ಲವೂ ಲಹರಿ ವೇಲು ಚುನಾವಣಾ ಅಖಾಡಕ್ಕಿಳಿಯುವ ಸೂಚನೆಗಳಿರಬಹುದು.

ಜಮೀರ್ ಅಹ್ಮದ್ ಅವರು ಜೆಡಿಎಸ್'ನಲ್ಲಿ ಬಂಡಾಯ ಎದ್ದಿರುವುದು ಲಹರಿ ವೇಲು ಅವರಿಗೆ ಅನುಕೂಲವಾದರೂ ಆಗಬಹುದೆಂಬ ಮಾತಿದೆ. ಜಮೀರ್ ಅವರನ್ನು ಶತಾಯಗತಾಯ ಸೋಲಿಸಲು ಎಚ್.ಡಿ.ದೇವೇಗೌಡರು ಪಣ ತೊಟ್ಟಿದ್ದಾರೆ. ಜಮೀರ್ ಅವರ ಸಾಂಪ್ರದಾಯಿಕ ವೋಟುಗಳು ವಿಭಜನೆಯಾದಲ್ಲಿ ಲಹರಿ ವೇಲು ಅವರಿಗೆ ಸಹಾಯವಾದೀತು. ಈ ಹಿನ್ನೆಲೆಯಲ್ಲಿ ದೇವೇಗೌಡರ ಮುಂದಿನ ನಡೆಗಳ ಬಗ್ಗೆಯೂ ಸಾಕಷ್ಟು ಕುತೂಹಲ ಗರಿಗೆದರಿದೆ.

(ಫೋಟೋ: ಜಮೀರ್ ಅಹ್ಮದ್ ಖಾನ್)

click me!