
ಕಾರವಾರ(ಫೆ.11): ಪ್ರೀತಿ ಮಾಯೆ ಹುಷಾರ್ ಅಂತಾರೆ. ಆದರೂ ಈ ಪ್ರೀತಿಯ ಆಳದಲ್ಲಿ ಬಿದ್ದು ಹಲವರು ತಮ್ಮ ಜೀವನವನ್ನೇ ಹಾಳು ಮಾಡಿಕೊಳ್ಳುತ್ತಾರೆ. ಆದರೆ ಕಳೆದ ರಾತ್ರಿ ಇಲ್ಲೊಬ್ಬಳು ಯುವತಿಗೆ 9 ವರ್ಷದಿಂದ ಪ್ರೀತಿಸುತ್ತಿದ್ದ ಯುವಕ ಕೈ ಕೊಟ್ಟಿದ್ದಾನೆ. ಆದರೆ ಛಲ ಬಿಡದ ಯುವತಿ ಈಗ ನ್ಯಾಯಕ್ಕಾಗಿ ಯುವಕನ ಮನೆ ಮುಂದೆ ಧರಣಿ ಕೂತಿದ್ದಾಳೆ.
ನೊಂದು ಪ್ರಿಯಕರನ ಮನೆ ಎದುರು ಧರಣಿ ಹೂಡಿರುವ ಯುವತಿ ಸುಶ್ಮಾ. ಛಲ ಬಿಡದ ಹಠಮಾರಿ ಹೆಣ್ಣು. ಪ್ರೀತಿಸಿದ ಹುಡುಗ ಗಿರಿಶ್ ಎಂಬಾತ ಕೈ ಕೊಟ್ಟಿದ್ದಕ್ಕೆ ಅಂಜದೆ ಪ್ರಿಯಕರನ ಮನೆ ಮುಂದೆಯೇ ಪ್ರತಿಭಟನೆಗೆ ಕೂತುಬಿಟ್ಟಿದ್ದಾಳೆ. ಈ ಪ್ರೀತಿ ಪ್ರೇಮದ ಕಹಾನಿಗೆ ಸಾಕ್ಷಿಯಾಗಿದ್ದು ಉತ್ತರಕನ್ನಡ ಜಿಲ್ಲೆಯ ಹೊನ್ನಾವರ ತಾಲೂಕಿನ ಸಾಲಿಕೇರಿ ಗ್ರಾಮ.
ಸಾಲಿಕೇರಿ ಗ್ರಾಮದ ಗಿರೀಶ್ ಗೌಡ ಎಂಬಾತ ಕುಮಟಾ ತಾಲೂಕಿನ ಮಿರ್ಜಾನದ ಸುಶ್ಮಾ ಎಂಬ ಯುವತಿಯನ್ನು ಪ್ರೀತಿಸಿದ್ದ. ಇಷ್ಟಕ್ಕೂ ಗಿರೀಶ್ ಹಾಲಕ್ಕಿ ಒಕ್ಕಲಿಗ ಜಾತಿಗೆ ಸೇರಿದವನು. ಹುಡುಗಿ ಸುಶ್ಮಾ ಕ್ರಿಶ್ಚಿಯನ್ ಧರ್ಮದವಳು. ಕಳೆದ 9 ವರ್ಷಗಳಿಂದ ಸುಶ್ಮಾಳನ್ನು ಗಿರೀಶ್ ಪ್ರೀತಿಸಿ ಈಗ ಇದ್ದಕ್ಕಿದಂತೆ ಜಾತಿ ನೆಪ ಹೇಳಿ ಕೈ ಕೊಟ್ಟಿದ್ದಾನೆ. ಪ್ರೀತಿಸುವ ನಾಟಕ ಆಡಿ ಬಿಡುವ ಮಾತು ಆಡುತ್ತಿರುವುದಕ್ಕೆ ಪಣ ತೊಟ್ಟ ಸುಶ್ಮಾ ಈಗ ಗಿರೀಶ್ ಮನೆ ಮುಂದೆ ಪ್ರತಿಭಟನೆ ನಡೆಸುತ್ತಿದ್ದಾಳೆ.
ತಮ್ಮಬ್ಬಿರ ನಡುವೆ ನಡೆದ ಪ್ರೇಮ ಸಲ್ಲಾಪವನ್ನು ಗಿರೀಶ್ ಚಿತ್ರಿಸಿದ್ದಲ್ಲದೇ, ತನ್ನನ್ನು ಬಿಡದೇ ಇದ್ದರೆ ವಿಡಿಯೋ ಹೊರ ಹಾಕೋದಾಗಿ ಬೆದರಿಕೆ ಒಡ್ಡುತ್ತಿದ್ದಾನೆ. ಆದರೆ, ಸುಶ್ಮಾ ಮಾತ್ರ ಗಿರೀಶ್ ಮನೆಯವರು ಬೆದರಿಕೆ ಒಡ್ಡಿದ್ದರೂ ಇದ್ಯಾವುದಕ್ಕೂ ಹೆದರದೇ ಪ್ರಿಯಕರ ಗಿರೀಶ್ಗಾಗಿ ಕಾದು ಕುಳಿತಿದ್ದಾಳೆ.
ಪ್ರಿಯಕರ ಗಿರೀಶ್ ಗಾಗಿ ಸುಶ್ಮಾ ಚಾತಕ ಪಕ್ಷಿಯಂತೆ ಕಾದು ಕುಳಿತಿದ್ದರೂ,ಗಿರೀಶ್ ಮಾತ್ರ ಈಕೆಯಿಂದ ದೂರ ಇರುವ ಪ್ರಯತ್ನ ನಡೆಸಿದ್ದಾನೆ. ಇಷ್ಟಲ್ಲದೇ ಹೇಳುತ್ತಾರೆ ಪ್ರೀತಿ ಮಾಯೆ ಹುಷಾರು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.