ಕದ್ದ ಲ್ಯಾಪ್ ಟಾಪ್ ಮಾರಿ ಪ್ರಿಯಕರನ ಜೊತೆ ಮೋಜು

By Suvarna Web DeskFirst Published Jan 14, 2018, 9:09 AM IST
Highlights

ಮಹಿಳಾ ಪಿಜಿಗಳಲ್ಲಿ ಲ್ಯಾಪ್‌ಟಾಪ್‌ಗಳನ್ನು ಕದ್ದು ಸಂಪಾದಿಸಿದ ಹಣದಲ್ಲಿ ಪ್ರಿಯಕರನನ್ನು ಶಾಪಿಂಗ್‌ಗೆ ಕರೆದೊಯ್ದ ಮೋಜು ಮಾಡುತ್ತಿದ್ದ ಡಿಪ್ಲೊಮಾ ಪದವೀಧರೆಯೊಬ್ಬಳು ಮೈಕೋಲೇಔಟ್ ಪೊಲೀಸರ ಬಲೆಗೆ ಬಿದ್ದಿದ್ದಾಳೆ.

ಬೆಂಗಳೂರು (ಜ.14): ಮಹಿಳಾ ಪಿಜಿಗಳಲ್ಲಿ ಲ್ಯಾಪ್‌ಟಾಪ್‌ಗಳನ್ನು ಕದ್ದು ಸಂಪಾದಿಸಿದ ಹಣದಲ್ಲಿ ಪ್ರಿಯಕರನನ್ನು ಶಾಪಿಂಗ್‌ಗೆ ಕರೆದೊಯ್ದ ಮೋಜು ಮಾಡುತ್ತಿದ್ದ ಡಿಪ್ಲೊಮಾ ಪದವೀಧರೆಯೊಬ್ಬಳು ಮೈಕೋಲೇಔಟ್ ಪೊಲೀಸರ ಬಲೆಗೆ ಬಿದ್ದಿದ್ದಾಳೆ. ಚಿಂತಾಮಣಿ ತಾಲೂಕಿನ ಶೋಭಾ ಬಂಧಿತೆ. ಈಕೆಯಿಂದ 4 ಲಕ್ಷ ಮೌಲ್ಯದ 10 ಲ್ಯಾಪ್ ಟಾಪ್ ಜಪ್ತಿ ಮಾಡಲಾಗಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ.

ಆನ್‌ಲೈನ್‌ನಲ್ಲಿ ಪೇಯಿಂಗ್ ಗೆಸ್ಟ್‌ಗಳ ಮಾಲೀಕರ ಮೊಬೈಲ್ ಸಂಖ್ಯೆಗಳನ್ನು ಪಡೆಯುತ್ತಿದ್ದ ಶೋಭಾ, ನಂತರ ಆ ಮಾಲೀಕರಿಗೆ ಕರೆ ಮಾಡಿ ನಾನು ಕೆಲಸ ಹುಡುಕಿಕೊಂಡು ನಗರಕ್ಕೆ ಬಂದಿದ್ದೇನೆ. ನನಗೆ ಕೊಠಡಿ ಬಾಡಿಗೆ ಬೇಕು ಎನ್ನುತ್ತಿದ್ದಳು. ಅಲ್ಲಿರುವ ಸೌಲಭ್ಯಗಳ ಬಗ್ಗೆ ತಿಳಿದು, ಬೆಳಗಿನ ಜಾವ ಆ ಕಟ್ಟಡದ ಬಳಿ ಹೋಗಿ ಮಾಲೀಕರನ್ನು ಭೇಟಿ ಮಾಡುತ್ತಿದ್ದಳು. ನಂತರ ಕೊಠಡಿಯನ್ನು ನೋಡಿ, ನಾನು ಇಲ್ಲೇ ಇರುತ್ತೇನೆ. ಸಂಜೆ ಲಗೇಜ್ ಸಮೇತ ಬರುತ್ತೇನೆ. ಈಗ ಕಂಪನಿಗೆ ತುರ್ತಾಗಿ ಸಂದರ್ಶನಕ್ಕೆ ಹೋಗಬೇಕಿದೆ. ಹಾಗಾಗಿ ನೀವು ಅನುಮತಿ ಕೊಟ್ಟರೆ, ಕೊಠಡಿಯಲ್ಲೇ 10 ನಿಮಿಷ ವಿಶ್ರಾಂತಿ ಪಡೆದು ಹೋಗುತ್ತೇನೆ ಎಂದು ಕೋರುತ್ತಿದ್ದಳು.

ಈ ಚಾಲಾಕಿಯ ನಾಜೂಕಿನ ಮಾತುಗಳನ್ನು ನಂಬಿ ಮಾಲೀಕರು ಒಪ್ಪಿಕೊಳ್ಳುತ್ತಿದ್ದರು. ಆಗ ಕೊಠಡಿಯಲ್ಲಿ ಇರುತ್ತಿದ್ದ ಯುವತಿಗೆ ತನ್ನನ್ನು ಬೇರೆ ಹೆಸರಿನಿಂದ ಪರಿಚಯಿಸಿಕೊಳ್ಳುತ್ತಿದ್ದ ಶೋಭಾ, ಆ ಯುವತಿ ಸ್ನಾನಕ್ಕೆ ಹೋಗುತ್ತಿದ್ದಂತೆಯೇ ಲ್ಯಾಪ್‌ಟಾಪ್ ಗಳನ್ನು ಬ್ಯಾಗ್‌ಗೆ ಹಾಕಿಕೊಂಡು ಹೊರಬರುತ್ತಿದ್ದಳು. ಆಗ ಪಿಜಿ ಮಾಲೀಕರು ಎದುರಾದರೆ, ಅಂಕಲ್ ಸಂದರ್ಶನಕ್ಕೆ ಹೋಗುತ್ತಿದ್ದೇನೆ. ಸಂಜೆ ಬರುವುದಾಗಿ ಹೇಳಿ ಕಾಲ್ಕಿಳುತ್ತಿದ್ದಳು ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.

ಹೀಗೆ ಪಿಜಿಗಳಲ್ಲಿ ಕಳವು ಮಾಡಿದ ಲ್ಯಾಪ್ ಟಾಪ್‌ಗಳನ್ನು ಸರ್ವಿಸ್ ಸೆಂಟರ್‌ಗಳಿಗೆ ಕೊಡುತ್ತಿದ್ದ ಶೋಭಾ, ಕೆಲ ದಿನಗಳಿಂದ ಸರಿಯಾಗಿ ಕಾರ್ಯ ನಿರ್ವಹಿಸುತ್ತಿಲ್ಲ. ಇವುಗಳನ್ನು ರಿಪೇರಿ ಮಾಡಿ ಯಾರಿಗಾದರೂ ಮಾರಾಟ ಮಾಡಿ. ನಿಮಗೆ ಕಮಿಷನ್ ಕೊಡುತ್ತೇನೆ ಎನುತ್ತಿದ್ದಳು. ಈ ಗ್ರಾಹಕಿ ಮಾತಿಗೆ ಒಪ್ಪಿ ಸರ್ವಿಸ್ ಸೆಂಟರ್‌ಗಳ ಮಾಲೀಕರು, ಲ್ಯಾಪ್‌ಟಾಪ್‌ಗಳನ್ನು 3000 ದಿಂದ 5000ಕ್ಕೆ ಒಂದರಂತೆ ಮಾರಿದ್ದರು. ನಂತರ ಶೋಭಾ ಜೇಬಿಗೆ ಆ ಹಣ ಬರುತ್ತಿತ್ತು ಎಂದು ಪೊಲೀಸರು ಹೇಳಿದ್ದಾರೆ.

ಪ್ರಿಯಕರನಿಗೆ ಶಾಪಿಂಗ್: ಶೋಭಾ, ದೊಡ್ಡಬಳ್ಳಾಪುರದ ಯುವಕನೊಬ್ಬನನ್ನು ಪ್ರೀತಿಸುತ್ತಿದ್ದಳು. ಪಿಯುಸಿ ಓದಿರುವ ಆತ ಉದ್ಯೋಗವಿಲ್ಲದೆ ಅಲೆಯುತ್ತಿದ್ದ. ತಾನು ಕಳವು ಮಾಡಿದ ಸಂಪಾದಿಸಿದ ಹಣದಲ್ಲಿ ಪ್ರಿಯಕರನ್ನು ಶಾಪಿಂಗ್ ಕರೆದೊಯ್ದು ಕೇಳಿದ್ದನ್ನು ಕೊಡಿಸುತ್ತಿದ್ದ ಆಕೆ, ಇನಿಯನ ಖರ್ಚಿಗೂ ಒಂದಿಷ್ಟು ಹಣ ಕೊಡುತ್ತಿದ್ದಳು ಎಂದು ಪೊಲೀಸರು ತಿಳಿಸಿದ್ದಾರೆ.

ಇತ್ತೀಚಿಗೆ ಬಿಟಿಎಂ ಲೇಔಟ್‌ನ ಪಿಜಿಯಲ್ಲಿ ಲ್ಯಾಪ್‌ಟಾಪ್ ಕಳವು ಪ್ರಕರಣದ ತನಿಖೆ ಕೈಗೆತ್ತಿಕೊಂಡ ಮೈಕೋ ಲೇಔಟ್ ಠಾಣೆ ಪೊಲೀಸರು, ಆ ಹಾಸ್ಟೆಲ್ ಕಟ್ಟಡದ ಸಿಸಿಟೀವಿ ಕ್ಯಾಮೆರಾದ ದೃಶ್ಯಾವಳಿ ಪರಿಶೀಲಿಸಿದಾಗ ಶೋಭಾ ಚಹರೆ ಪತ್ತೆಯಾಗಿತ್ತು. ಆ ದೃಶ್ಯಾವಳಿಯ ಉನ್ನತೀಕರಿಸಿ ಭಾವಚಿತ್ರ ತೆಗೆದ ಸಿಬ್ಬಂದಿ, ಅದರ ಪ್ರತಿಗಳನ್ನು ಮುದ್ರಿಸಿ ನಗರದ ಇತರೆ ಠಾಣೆಗಳಿಗೂ ಕಳುಹಿಸಿದ್ದರು.

ಈ ಭಾವಚಿತ್ರ ನೋಡಿದ ಕೋರಮಂಗಲದ ಸರ್ವಿಸ್ ಸೆಂಟರ್ ನೌಕರರು, ಈ ಯುವತಿ ಕೆಲ ದಿನಗಳ ಹಿಂದೆ ತಮಗೆ ಲ್ಯಾಪ್‌ಟಾಪ್ ಮಾರಾಟ ಮಾಡಿ ಹೋಗಿದ್ದಾಗಿ ಹೇಳಿದರು. ಆಗ ಪೊಲೀಸರು, ಮತ್ತೇನಾದರೂ ಆಕೆ ಬಂದರೆ ಮಾಹಿತಿ ನೀಡುವಂತೆ ಸೂಚಿಸಿದ್ದರು.

ಕೆಲ ದಿನಗಳ ಹಿಂದೆ ಮತ್ತೆ ಅದೇ ಸರ್ವಿಸ್ ಸೆಂಟರ್‌ಗೆ ಲ್ಯಾಪ್‌ಟಾಪ್ ಮಾರಲು ಶೋಭಾ ಬಂದಿದ್ದಳು. ತಕ್ಷಣ ಸಿಬ್ಬಂದಿ ನೀಡಿದ ಮಾಹಿತಿ ಮೇರೆಗೆ ಆರೋಪಿಯನ್ನು ವಶಕ್ಕೆ ಪಡೆದು ಲ್ಯಾಪ್‌ಟಾಪ್ ಜಪ್ತಿ ಮಾಡಿದೆವು ಎಂದು ಪೊಲೀಸರು ವಿವರಿಸಿದ್ದಾರೆ.

click me!