ರೈತರ 2 ಲಕ್ಷವರೆಗಿನ ಸಾಲ ಮನ್ನಾ : ಇಲ್ಲಿದೆ ಡೀಟೇಲ್ಸ್

By Web DeskFirst Published Aug 25, 2018, 7:09 AM IST
Highlights

ಸಾಲ ಮನ್ನಾ ಮಾಡಲು ವಾಣಿಜ್ಯ ಬ್ಯಾಂಕುಗಳು ಒಪ್ಪಿಕೊಂಡಿದ್ದು, ನಾಲ್ಕು ಕಂತುಗಳಲ್ಲಿ ಸಾಲದ ಮೊತ್ತವನ್ನು ಸರ್ಕಾರ ಪಾವತಿ ಮಾಡಲಿದೆ. ಹೀಗಾಗಿ ಇನ್ನು ಮುಂದೆ ಸಾಲದ ವಿಷಯದಲ್ಲಿ ರೈತರಿಗೆ ಬ್ಯಾಂಕುಗಳಿಂದ ಯಾವುದೇ ಸಮಸ್ಯೆ ಉಂಟಾಗುವುದಿಲ್ಲ ಎಂದು ಸಿಎಂ ಕುಮಾರಸ್ವಾಮಿ ಹೇಳಿದ್ದಾರೆ. 

ಬೆಂಗಳೂರು :  ವಾಣಿಜ್ಯ ಬ್ಯಾಂಕುಗಳಲ್ಲಿ ರೈತರು ಮಾಡಿರುವ 30,163 ಕೋಟಿ ರು. ಮನ್ನಾ ಮಾಡಲು ಸಚಿವ ಸಂಪುಟ ನಿರ್ಧರಿಸಿದ್ದು, ಎರಡು ಲಕ್ಷ ರು.ವರೆಗಿನ ಸುಸ್ತಿ ಸಾಲ ಮನ್ನಾ ಆಗಲಿದೆ ಎಂದು ಮುಖ್ಯಮಂತ್ರಿ ಎಚ್‌.ಡಿ. ಕುಮಾರಸ್ವಾಮಿ ತಿಳಿಸಿದ್ದಾರೆ.

ಸಂಪುಟ ಸಭೆಯ ನಂತರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಸಾಲ ಮನ್ನಾ ಮಾಡಲು ವಾಣಿಜ್ಯ ಬ್ಯಾಂಕುಗಳು ಒಪ್ಪಿಕೊಂಡಿದ್ದು, ನಾಲ್ಕು ಕಂತುಗಳಲ್ಲಿ ಸಾಲದ ಮೊತ್ತವನ್ನು ಸರ್ಕಾರ ಪಾವತಿ ಮಾಡಲಿದೆ. ಹೀಗಾಗಿ ಇನ್ನು ಮುಂದೆ ಸಾಲದ ವಿಷಯದಲ್ಲಿ ರೈತರಿಗೆ ಬ್ಯಾಂಕುಗಳಿಂದ ಯಾವುದೇ ಸಮಸ್ಯೆ ಉಂಟಾಗುವುದಿಲ್ಲ. ಸಾಲ ಮನ್ನಾ ಪ್ರಮಾಣ ಪತ್ರವನ್ನು ವಾಣಿಜ್ಯ ಬ್ಯಾಂಕುಗಳೇ ನೀಡಲಿವೆ ಎಂದರು.

ಮುಖ್ಯಮಂತ್ರಿಗಳ ಘೋಷಣೆಯ ಬೆನ್ನಲ್ಲೇ ಈ ಕುರಿತು ಸರ್ಕಾರಿ ಆದೇಶವೂ ಪ್ರಕಟವಾಗಿದೆ ಎಂದು ಮೂಲಗಳು ಹೇಳಿವೆ. ಸಾಲ ಮನ್ನಾ ಸೌಲಭ್ಯ ದುರುಪಯೋಗ ಆಗಬಾರದೆಂಬ ಉದ್ದೇಶದಿಂದ ಇಬ್ಬರು ಐಎಎಸ್‌ ಅಧಿಕಾರಿಗಳನ್ನು ಒಳಗೊಂಡ ನೋಡಲ್‌ ಸಮಿತಿ ರಚಿಸಲಾಗಿದೆ. ಈ ಸಮಿತಿ ವರದಿ ನೀಡಿದ ನಂತರ ವಾಣಿಜ್ಯ ಬ್ಯಾಂಕುಗಳಿಗೆ ಹಂತ ಹಂತವಾಗಿ ಹಣ ಮರುಪಾವತಿ ಮಾಡಲಾಗುವುದು ಎಂದು ಕುಮಾರಸ್ವಾಮಿ ತಿಳಿಸಿದರು.

ರೈತರ ಒಟ್ಟಾರೆ ಸಾಲದ ಮೊತ್ತವನ್ನು ನಾಲ್ಕು ಕಂತುಗಳಲ್ಲಿ ಕಟ್ಟಲು ಬ್ಯಾಂಕುಗಳು ಒಪ್ಪಿಲ್ಲ. ಹೀಗಾಗಿ ಶೇ.12ರಷ್ಟುಬಡ್ಡಿ ಕಟ್ಟಲು ಚರ್ಚೆ ನಡೆಸಿದ್ದೇವೆ. ನಾಲ್ಕು ವರ್ಷಕ್ಕೆ ಎಷ್ಟುಹಣ ಬಡ್ಡಿ ಮೊತ್ತ ಆಗಲಿದೆ ಎಂಬ ಬಗ್ಗೆ ಸಚಿವ ಸಂಪುಟದಲ್ಲಿ ಚರ್ಚಿಸಿದ್ದೇವೆ. ನಾಲ್ಕು ಕಂತುಗಳ ಲೆಕ್ಕದಲ್ಲಿ 2018-19ನೇ ಸಾಲಿನಲ್ಲಿ 6500 ಕೋಟಿ ರು., 2019-20ನೇ ಸಾಲಿಗೆ 8656 ಕೋಟಿ ರು., 2020-21ನೇ ಸಾಲಿಗೆ 7876 ಕೋಟಿ ರು. ಹಾಗೂ 2021-22ನೇ ಸಾಲಿಗೆ 8131 ಕೋಟಿ ರು. ಪಾವತಿ ಮಾಡಬೇಕಾಗುತ್ತದೆ. ಇದೇ ವೇಳೆಗೆ ಶೇ.12ರ ಬಡ್ಡಿ ಮೊತ್ತ 7419 ಕೋಟಿ ರು. ಆಗುತ್ತದೆ ಎಂದು ಕುಮಾರಸ್ವಾಮಿ ವಿವರಿಸಿದರು.

ಸದ್ಯ ನಾಲ್ಕು ಕಂತುಗಳಲ್ಲಿ ವಾಣಿಜ್ಯ ಬ್ಯಾಂಕುಗಳಿಗೆ ಹಣ ಪಾವತಿ ಮಾಡಲು ಉದ್ದೇಶಿಸಿದ್ದರೂ ಸರ್ಕಾರ ಅಷ್ಟರೊಳಗೆ ಹಣ ಪಾವತಿಸಲು ಪ್ರಯತ್ನ ಮಾಡುತ್ತದೆ ಎಂದು ಅವರು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.

click me!