3 ವರ್ಷದಿಂದ ಸಮವಸ್ತ್ರ ನೀಡದ ಕೆಎಸ್‌ಆರ್‌ಟಿಸಿ!

By Kannadaprabha NewsFirst Published Aug 4, 2019, 11:32 AM IST
Highlights

3 ವರ್ಷದಿಂದ ಸಮವಸ್ತ್ರ ನೀಡದ ಕೆಎಸ್‌ಆರ್‌ಟಿಸಿ!| ವರ್ಷಕ್ಕೆ ಎರಡು ಜೊತೆ ವಿತರಿಸಬೇಕು, ಆದರೆ 3 ವರ್ಷದಿಂದ ಒಂದೂ ಜೊತೆ ನೀಡಿಲ್ಲ| ಸಮವಸ್ತ್ರ ಧರಿಸಿ ಬರದಿದ್ದರೆ ದಂಡ ಹಾಕ್ತಾರೆ|

-ವಿಶೇಷ ವರದಿ

ಬೆಂಗಳೂರು[ಆ.04]: ರಾಜ್ಯದ ನಾಲ್ಕು ಸಾರಿಗೆ ನಿಗಮಗಳ ಆರ್ಥಿಕ ಸ್ಥಿತಿ ನೌಕರರಿಗೆ ಕನಿಷ್ಠ ಸವಲತ್ತು ಕಲ್ಪಿಸಲಾಗದಷ್ಟುಅಧೋಗತಿ ತಲುಪಿದೆಯೇ? ಕಳೆದ ಮೂರು ವರ್ಷಗಳಿಂದ ನಾಲ್ಕು ನಿಗಮಗಳ ನೌಕರರಿಗೆ ಸಮವಸ್ತ್ರ ವಿತರಿಸದೇ ಇರುವುದು ಇಂತಹ ಪ್ರಶ್ನೆ ಹುಟ್ಟುಹಾಕಿದೆ.

ವರ್ಷಕ್ಕೆ ನೂರಾರು ಕೋಟಿ ರು. ವೆಚ್ಚ ಮಾಡುವ ಸಾರಿಗೆ ನಿಗಮ ತನ್ನ ನೌಕರರಿಗೆ ಸಮವಸ್ತ್ರ ನೀಡದಂತಹ ದುಸ್ಥಿತಿಗೆ ಬಂದಿದೆ. ನಿಯಮದ ಪ್ರಕಾರ ಸಾರಿಗೆ ನೌಕರರಿಗೆ ವರ್ಷಕ್ಕೆ ಎರಡು ಜೊತೆ ಸಮವಸ್ತ್ರ ವಿತರಿಸಬೇಕು. ಆದರೆ, ನಿಗಮದ ಆಡಳಿತ ಮಂಡಳಿಗಳು ಕಳೆದ ಮೂರು ವರ್ಷಗಳಿಂದ ಕನಿಷ್ಠ ಒಂದೇ ಒಂದು ಜತೆ ಸಮವಸ್ತ್ರ ವಿತರಿಸದೆ ನಿರ್ಲಕ್ಷ್ಯ ವಹಿಸಿವೆ.

ಕೆಎಸ್‌ಆರ್‌ಟಿಸಿ, ಬಿಎಂಟಿಸಿ, ಎನ್‌ಡಬ್ಲ್ಯೂಕೆಆರ್‌ಟಿಸಿ, ಎನ್‌ಇಕೆಆರ್‌ಟಿಸಿ ಈ ನಾಲ್ಕು ಸಾರಿಗೆ ನಿಗಮಗಳಲ್ಲಿ ಒಟ್ಟು 1.20 ಲಕ್ಷ ಮಂದಿ ನೌಕರರು ಕಾರ್ಯ ನಿರ್ವಹಿಸುತ್ತಿದ್ದಾರೆ. ಈ ಪೈಕಿ ಚಾಲಕ, ನಿರ್ವಾಹಕ, ಸಂಚಾರ ನಿರೀಕ್ಷಕ, ಸಹಾಯಕ ಸಂಚಾರ ನಿರೀಕ್ಷ, ಸಹಾಯಕ ಸಂಚಾರ ಆಧೀಕ್ಷಕ, ಮೆಕ್ಯಾನಿಕ್‌, ಕಚೇರಿಗಳಲ್ಲಿ ಕೆಲಸ ಮಾಡುವ ‘ಡಿ’ ದರ್ಜೆ ನೌಕರರು ಸೇರಿ ಶೇ.80ರಷ್ಟುನೌಕರರು ಪ್ರತಿ ದಿನ ಕಡ್ಡಾಯವಾಗಿ ಸಮವಸ್ತ್ರ ಧರಿಸಬೇಕು. ಸಮವಸ್ತ್ರ ಧರಿಸದಿದ್ದರೆ ನಿಯಮದ ಪ್ರಕಾರ ದಂಡ ವಿಧಿಸಲು ಅವಕಾಶವಿದೆ. ಆದರೆ ಈ ನಾಲ್ಕು ನಿಗಮಗಳು ನೌಕರರಿಗೆ 2016ರಲ್ಲಿ ಕಡೆಯದಾಗಿ ಸಮವಸ್ತ್ರ ವಿತರಿಸಿ ಕೈ ತೊಳೆದುಕೊಂಡಿವೆ.

ಸಮವಸ್ತ್ರ ಧರಿಸದಿದ್ದರೆ ದಂಡ ಹಾಕ್ತಾರೆ:

ಈ ಹಿಂದೆ ಸಾಮಾನ್ಯವಾಗಿ ಕೆಎಸ್‌ಆರ್‌ಟಿಸಿ ನೇತೃತ್ವದಲ್ಲೇ ನಾಲ್ಕು ನಿಗಮಗಳಿಗೆ ಒಮ್ಮೆಗೆ ಸಮವಸ್ತ್ರ ಖರೀದಿಸಿ ವಿತರಿಸಲಾಗುತ್ತಿತ್ತು. ವರ್ಷಕ್ಕೆ ಎರಡು ಜತೆ ಶರ್ಟ್‌ ಮತ್ತು ಪ್ಯಾಂಟ್‌ ಪೀಸ್‌ ನೀಡಲಾಗುತ್ತಿತ್ತು. ಇವುಗಳನ್ನು ಹೊಲಿಸಿಕೊಳ್ಳಲು 175 ರು. ನೀಡಲಾಗುತ್ತಿತ್ತು. ಅಂತೆಯೆ ವರ್ಷಕ್ಕೆ ಒಮ್ಮೆ ರೈನ್‌ ಕೋಟ್‌ ಹಾಗೂ ಶೂ ಖರೀದಿಸಲು 500 ರು. ನೀಡಲಾಗುತ್ತಿತ್ತು. ಕಳೆದ ಮೂರು ವರ್ಷಗಳಿಂದ ಒಮ್ಮೆಯೂ ಸಮವಸ್ತ್ರ ಹಾಗೂ ರೈನ್‌ ಕೋಟ್‌ ಹಾಗೂ ಶೂ ಖರೀದಿಸಲು ಹಣ ನೀಡಿಲ್ಲ. ಮಾರ್ಗ ತಪಾಸಣೆ ವೇಳೆ ಚಾಲಕ ಅಥವಾ ನಿರ್ವಾಹಕ ಸಮವಸ್ತ್ರ ಧರಿಸದಿರುವುದು ಕಂಡುಬಂದರೆ ಮುಲಾಜಿಲ್ಲದೆ, 200 ರು.ನಿಂದ 300 ರು. ದಂಡ ವಿಧಿಸುತ್ತಾರೆ ಎಂದು ಬಿಎಂಟಿಸಿಯ ನಿರ್ವಾಹಕರೊಬ್ಬರು ಅಳಲು ತೋಡಿಕೊಂಡರು.

ನಿಕ್ಕರ್‌ಗೂ ಹಣ ಸಾಕಾಗಲ್ಲ:

ನೌಕರರಿಗೆ ಸಮವಸ್ತ್ರ ಹೊಲಿಸಲು 175 ರು. ಹಣ ನೀಡಲಾಗುತ್ತದೆ. ವಾಸ್ತವದಲ್ಲಿ ಇಷ್ಟುಕಡಿಮೆ ಮೊತ್ತದಲ್ಲಿ ಶರ್ಟ್‌ ಮತ್ತು ಪ್ಯಾಂಟ್‌ ಹೊಲಿಸಲು ಸಾಧ್ಯವೇ? ಒಂದು ನಿಕ್ಕರ್‌ ಹೊಲಿಸಲು ಕನಿಷ್ಠ 250 ರು. ಬೇಕು. ಹೀಗಿರುವಾಗ ಇಷ್ಟುಕಡಿಮೆ ಮೊತ್ತ ಯಾವುದಕ್ಕೂ ಸಾಲುವುದಿಲ್ಲ. ಇನ್ನು ಆ ಸಮವಸ್ತ್ರದ ಬಟ್ಟೆಗಳ ಗುಣಮಟ್ಟವೂ ಅಷ್ಟಕಷ್ಟೇ. ಹಗಲು-ರಾತ್ರಿ ಲೆಕ್ಕಿಸದೆ ಕರ್ತವ್ಯ ನಿರ್ವಹಿಸಿ ನಿಗಮಗಳಿಗೆ ಆದಾಯ ತರುವ ನೌಕರರನ್ನು ಇಷ್ಟುಕಡೆಗಣಿಸುವುದು ಸರಿಯಲ್ಲ. ಆಡಳಿತ ವರ್ಗಗಳು ನೌಕರರಿಗೆ ಕನಿಷ್ಠ ಸವಲತ್ತುಗಳನ್ನಾದರೂ ಸಮರ್ಪಕವಾಗಿ ಒದಗಿಸಬೇಕು ಎಂದು ಕೆಎಸ್‌ಆರ್‌ಟಿಸಿಯ ಚಾಲಕರೊಬ್ಬರು ಹೇಳಿದರು.

ಟೆಂಡರ್‌ ಪ್ರಕ್ರಿಯೆಗೆ ಚಾಲನೆ:

ನಾಲ್ಕು ಸಾರಿಗೆ ನಿಗಮಗಳ ನೌಕರರಿಗೆ ಸಮವಸ್ತ್ರ ಖರೀದಿಸಿಗೆ ಅಂತಹ ದೊಡ್ಡ ಮೊತ್ತದ ಅಗತ್ಯವಿಲ್ಲ. ಸುಮಾರು 10 ಕೋಟಿ ರು. ವೆಚ್ಚವಾಗಬಹುದು. ನಾಲ್ಕು ನಿಗಮ ಒಳಗೊಂಡಂತೆ ಟೆಂಡರ್‌ ಕರೆದು ಅತಿ ಕಡಿಮೆ ಮೊತ್ತಕ್ಕೆ ಬಿಡ್‌ ಪಡೆಯುವ ಕಂಪನಿಗೆ ಸಮವಸ್ತ್ರ ಪೂರೈಸಲು ಅವಕಾಶ ನೀಡಲಾಗುತ್ತದೆ. ಹಿಂದಿನಿಂದಲೂ ಇದೇ ಕ್ರಮ ಅನುಸರಿಸಲಾಗುತ್ತಿದೆ. ಈಗಾಗಲೇ ಸಮವಸ್ತ್ರ ಪೂರೈಕೆ ಸಂಬಂಧ ಟೆಂಡರ್‌ ಪ್ರಕ್ರಿಯೆ ಆರಂಭವಾಗಿದ್ದು, ಒಂದೆರೆಡು ತಿಂಗಳಲ್ಲಿ ನೌಕರರಿಗೆ ಸಮವಸ್ತ್ರ ಒದಗಿಸಲು ಯೋಜನೆ ಹಾಕಿಕೊಳ್ಳಲಾಗಿದೆ ಎಂದು ಕೆಎಸ್‌ಆರ್‌ಟಿಸಿಯ ಹೆಸರು ಹೇಳಲು ಇಚ್ಛಿಸದ ಹಿರಿಯ ಅಧಿಕಾರಿಯೊಬ್ಬರು ತಿಳಿಸಿದರು.

ಕಳೆದ ಮೂರು ವರ್ಷಗಳಿಂದ ನಾಲ್ಕು ನಿಗಮಗಳ ನೌಕರರಿಗೆ ಸಮವಸ್ತ್ರ ನೀಡಿಲ್ಲ. ಈ ಬಗ್ಗೆ ಹಲವು ಬಾರಿ ಮನವಿ ಮಾಡಿದರೂ ಸಬೂಬು ಹೇಳಿಕೊಂಡು ವಿಳಂಬ ಮಾಡಲಾಗುತ್ತಿದೆ. ಆಡಳಿತ ಮಂಡಳಿಗಳ ವೈಫಲ್ಯದಿಂದ ನಿಗಮಗಳಲ್ಲಿ ಸಾಕಷ್ಟುಸಮಸ್ಯೆಗಳು ಉದ್ಭವಿಸಿವೆ. ಸರ್ಕಾರ ಇತ್ತ ಗಮನ ಹರಿಸಬೇಕು.

- ಎಚ್‌.ವಿ.ಅನಂತಸುಬ್ಬರಾವ್‌, ಅಧ್ಯಕ್ಷ, ಕೆಎಸ್‌ಆರ್‌ಟಿಸಿ ಸ್ಟ್ಯಾಫ್‌ ಅಂಡ್‌ ವರ್ಕರ್‌ ಯೂನಿಯನ್‌

click me!