ರಾಜ್ಯದಲ್ಲಿ ಪಬ್ಲಿಕ್ ಶಾಲೆ ತೆರೆದ ಪೊಲೀಸರು!

By Web DeskFirst Published Jun 19, 2019, 9:53 AM IST
Highlights

ರಾಜ್ಯದಲ್ಲಿ ಪಬ್ಲಿಕ್ ಶಾಲೆ ತೆರೆದ ಪೊಲೀಸರು!| ಸಾರ್ವಜನಿಕರ ಮಕ್ಕಳಿಗೆ ಗುಣಮಟ್ಟದ ಶಿಕ್ಷಣ| ಖಾಲಿ ಜಾಗ, ಕಟ್ಟಡ ಬಳಸಿ ಶಾಲೆ ಆರಂಭ

ಗಿರೀಶ್ ಮಾದೇನಹಳ್ಳಿ, ಕನ್ನಡಪ್ರಭ

ಬೆಂಗಳೂರು[ಜೂ.19]: ತಮ್ಮಲ್ಲಿದ್ದ ಅನುಪಯುಕ್ತ ಕಟ್ಟಡಗಳು ಹಾಗೂ ವಾಹನ ಸೇರಿದಂತೆ ವಿವಿಧ ಸಂಪನ್ಮೂಲಗಳನ್ನು ಬಳಸಿಕೊಂಡು ರಾಜ್ಯ ಸಶಸ್ತ್ರ ಮೀಸಲು ಪಡೆಯ (ಕೆಎಸ್‌ಆರ್‌ಪಿ) ಪೊಲೀಸರು ಸಾರ್ವಜನಿಕರ ಮಕ್ಕಳಿಗೆ ಕಡಿಮೆ ವೆಚ್ಚದಲ್ಲಿ ಶಿಕ್ಷಣ ನೀಡಲು ‘ಪೊಲೀಸ್ ಪಬ್ಲಿಕ್ ಶಾಲೆ’ಗಳನ್ನು ಆರಂಭಿಸುವ ಹೊಸ ಯೋಜನೆ ರೂಪಿಸಿದ್ದಾರೆ.

ಇದರ ಮೊದಲ ಹಂತವಾಗಿ ಪ್ರಸಕ್ತ ಶೈಕ್ಷಣಿಕ ವರ್ಷದಿಂದ ರಾಜ್ಯದ ಮೂರು ಬೆಟಾಲಿಯನ್‌ಗಳಲ್ಲಿ ಶಾಲೆಗಳು ಆರಂಭವಾಗಿವೆ. ಮುಂದಿನ ದಿನಗಳಲ್ಲಿ ಹಂತ ಹಂತವಾಗಿ ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ಸಹ ಶಾಲೆಗಳು ಶುರುವಾಗಲಿವೆ. ಈ ವರ್ಷವೇ ಶಾಲೆಯಲ್ಲಿ ತಲಾ 100 ವಿದ್ಯಾರ್ಥಿಗಳು ಪ್ರವೇಶ ಪಡೆದಿದ್ದು, ಪೊಲೀಸರ ಹೊಸ ಪ್ರಯತ್ನವನ್ನು ಜನರು ಪ್ರೋತ್ಸಾಹಿಸಿದ್ದಾರೆ. ಈ ಶಾಲೆಗಳ ನಿರ್ವಹಣೆಯ ಜವಾಬ್ದಾರಿಯನ್ನು ಸಶಸ್ತ್ರ ಮೀಸಲು ಪಡೆಯ ಪೊಲೀಸರು ಹೊತ್ತಿದ್ದು, ಖಾಸಗಿ ಶಾಲೆ ರೀತಿಯಲ್ಲೇ ಕಾರ್ಯನಿರ್ವಹಿಸುತ್ತವೆ. ಈ ಶಾಲೆಗಳಿಗೆ ಸರ್ಕಾರ ಅಥವಾ ಇಲಾಖೆಯ ಹಣವನ್ನು ವ್ಯಯ ಮಾಡುತ್ತಿಲ್ಲ ಎಂದು ಕೆಎಸ್‌ಆರ್‌ಪಿ ಎಡಿಜಿಪಿ ಭಾಸ್ಕರ್ ರಾವ್ ಮಾಹಿತಿ ನೀಡಿದರು.

ಸಿಬಿಎಸ್‌ಇ ಶಾಲೆಗಳಿವು:

ರಾಜ್ಯದ ಹಲವು ಕಡೆ ಕೆಎಸ್‌ಆರ್‌ಪಿ ಪಡೆಗೆ ಸರ್ಕಾರವು ವಿಶಾಲವಾದ ಜಾಗ ಕೊಟ್ಟಿದ್ದು, ಅಗತ್ಯಕ್ಕಿಂತಲೂ ದೊಡ್ಡದಾದ ಕಟ್ಟಡಗಳನ್ನು ಕಟ್ಟಿಸಿದೆ. ಆದರೆ ಈ ಕಟ್ಟಡ ಮತ್ತು ವಿಶಾಲ ಜಾಗವು ಬಳಕೆಯಾಗದೆ ಪಾಳು ಬಿದ್ದಂತೆ ಇದೆ. ಈಗ ಈ ಸಂಪನ್ಮೂಲ ಸದುಪಯೋಗಪಡಿಸಿಕೊಂಡ ಪೊಲೀಸರು, ಅಲ್ಲಿ ಸಿಬಿಎಸ್‌ಇ ಪಠ್ಯದ ಶಾಲೆಗಳನ್ನು ಪ್ರಾರಂಭಿಸಲು ಯೋಜಿಸಿದ್ದಾರೆ. ಈ ಯೋಜನೆಗೆ ಪೊಲೀಸ್ ಮಹಾನಿರ್ದೇಶಕಿ ನೀಲಮಣಿ ಎನ್.ರಾಜು ಹಸಿರು ನಿಶಾನೆ ತೋರಿಸಿದರು. ಇದರ ಫಲವಾಗಿ ಪೊಲೀಸ್ ಪಬ್ಲಿಕ್ ಶಾಲೆಗಳಲ್ಲಿ ಮಕ್ಕಳ ಕಲರವ ಕೇಳಿ ಬಂದಿದೆ.

ಮೊದಲ ಹಂತವಾಗಿ ಕಲುಬರಗಿ ಜಿಲ್ಲೆಯ ತಾಜ್ ಸುಲ್ತಾನ್‌ಪುರ, ಶಿಗ್ಗಾಂವಿ ತಾಲೂಕಿನ ಗಂಗೆ ಬಾವಿ ಹಾಗೂ ಶಿವಮೊಗ್ಗ ಜಿಲ್ಲೆಯ ಮಾಚೇನಹಳ್ಳಿಯಲ್ಲಿ ಪೊಲೀಸ್ ಪಬ್ಲಿಕ್ ಶಾಲೆಗಳು ಪ್ರಾರಂಭವಾಗಿವೆ. ಈ ಶಾಲೆಗಳ ಶಿಕ್ಷಕರು ಮತ್ತು ಸಿಬ್ಬಂದಿ ನೇಮಕಾತಿಯಲ್ಲಿ ಪೊಲೀಸ್ ಕುಟುಂಬದವರಿಗೆ ಮೊದಲ ಆದ್ಯತೆ ನೀಡಲಾಗಿದ್ದು, ಪೊಲೀಸ್ ಮಕ್ಕಳಿಗೆ ಸಹ ವಿಶೇಷ ರಿಯಾಯಿತಿ ಕಲ್ಪಿಸಲಾಗಿದೆ. ಈ ಶಾಲೆಯಲ್ಲಿ 5ನೇ ತರಗತಿಯಿಂದ 10ನೇ ತರಗತಿವರೆಗೆ ಮಕ್ಕಳಿಗೆ ಶಿಕ್ಷಣ ನೀಡಲಾಗುತ್ತಿದೆ

ಕೆಎಸ್‌ಆರ್‌ಪಿಗೆ ಬೆಟಾಲಿಯನ್‌ಗಳಿಗೆ ನೀಡಲಾದ ಕಟ್ಟಡಗಳು ಶಾಲಾ ಕಟ್ಟಡಗಳ ರೀತಿಯಲ್ಲಿ ನಿರ್ಮಾಣವಾಗಿದ್ದವು. ಹೀಗಾಗಿ ಅವುಗಳನ್ನು ನವೀಕರಣಗೊಳಿಸಿ ಶಾಲೆ ಪ್ರಾರಂಭಿಸಲು ಯೋಜಿಸಲಾಯಿತು. ಆಗ ಆನ್‌ಲೈನ್‌ನಲ್ಲಿ ಶಾಲೆ ಪ್ರಾರಂಭಕ್ಕೆ ಅರ್ಜಿ ಸಲ್ಲಿಸಲಾಯಿತು. ನಗರದ ಪ್ರದೇಶದ ಶಾಲೆಗಳಿಗೆ ಮೈದಾನಗಳ ಕೊರತೆ ದೊಡ್ಡ ಸಮಸ್ಯೆಯಾಗಿದೆ. ಆದರೆ ಪೊಲೀಸ್ ಶಾಲೆಗಳಿಗೆ ಆ ಸಮಸ್ಯೆ ಇಲ್ಲ. ಕೆಎಸ್‌ಆರ್‌ಪಿ ಮೈದಾನಗಳನ್ನು ಬಳಸಲಾಗಿದೆ. ಅಲ್ಲದೆ ನಮ್ಮ ಹಳೆಯ ವಾಹನಗಳನ್ನು ಮಕ್ಕಳನ್ನು ಶಾಲೆಗೆ ಕರೆ ತರಲು ಉಪಯೋಗಿಸಲಾಗುತ್ತಿದೆ ಎಂದು ಹೇಳಿದರು.

click me!