
ಉಡುಪಿ: ‘ರಾಜ್ಯದಲ್ಲಿ ಬಿಜೆಪಿಯ ಜಿಲ್ಲಾ ಪದಾಧಿಕಾರಿಗಳನ್ನು ಫೆ.10ರೊಳಗೆ ಆಯ್ಕೆ ಮಾಡಬೇಕು' ಎಂಬ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ಮಾತಿಗೆ ಯಡಿಯೂರಪ್ಪ ತಾತ್ಸಾರ ತೋರುತ್ತಿದ್ದಾರೆ. ಇದರಿಂದಾಗಿ ರಾಜ್ಯ ಬಿಜೆಪಿಯ ಗೊಂದಲಕ್ಕೆ ತೆರೆ ಬೀಳುತ್ತಿಲ್ಲ' ಎಂದು ಕೆ.ಎಸ್. ಈಶ್ವರಪ್ಪ ಮತ್ತೊಮ್ಮೆ ಅಸಮಾಧಾನ ಹೊರಹಾಕಿದ್ದಾರೆ.
ಭಾನುವಾರ ಉಡುಪಿ ಕೃಷ್ಣಮಠಕ್ಕೆ ಭೇಟಿ ನೀಡಿದ ಸಂದರ್ಭ ಸುದ್ದಿಗಾರರೊಂದಿಗೆ ಮಾತನಾಡಿ, ಜಿಲ್ಲಾ ಪದಾಧಿಕಾರಿಗಳ ಆಯ್ಕೆಗೆ ಪಕ್ಷದ ವರಿಷ್ಠರಾದ ಮುರಳೀಧರ್ ರಾವ್, ಸಂತೋಷ್, ಅರುಣ್ ಮತ್ತು ಯಡಿಯೂರಪ್ಪ ಅವರಿರುವ ಸಮಿತಿ ರಚಿಸಲಾಗಿದೆ. ಆದರೆ ಗಡುವು ಮೀರಿ 3 ತಿಂಗಳಾದರೂ ಯಡಿಯೂರಪ್ಪ ನಿರ್ಲಕ್ಷ್ಯದಿಂದ ಸಮಿತಿ ಒಂದು ಬಾರಿಯೂ ಸಭೆ ಸೇರಿಲ್ಲ. ಇದರಿಂದ ಪಕ್ಷದ ಹಿರಿಯ ಕಾರ್ಯಕರ್ತರಿಗೆ ಬೇಸರವಾಗಿದೆ. ಈ ಹಿನ್ನೆಲೆಯಲ್ಲಿ ಏ. 27ರಂದು ಬಿಜೆಪಿಯ ಸಂಘಟನೆ ಉಳಿಸುವ ಬಗ್ಗೆ ಸಭೆ ಕರೆಯಲಾಗಿದೆ ಎಂದು ತಿಳಿಸಿದರು.
ಸಿದ್ದರಾಮಯ್ಯರ ಶಿಸ್ತು ಪಾಠ ಬೇಡ: ಇದೇ ವೇಳೆ ‘ಬಿಜೆಪಿಗೆ ಅಶಿಸ್ತೇ ಶಿಸ್ತು' ಎಂಬ ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿಕೆಗೆ ಪ್ರತಿಕ್ರಿಯಿಸಿದ ಈಶ್ವರಪ್ಪ, ಅವರಿಂದ ಶಿಸ್ತಿನ ಪಾಠ ಕಲಿಯುವ ಪರಿಸ್ಥಿತಿ ನಮಗಿಲ್ಲ. ತಾನೇ ಸರ್ವಾಧಿಕಾರಿಯಂತೆ ವರ್ತಿಸುತ್ತಾ ತಮ್ಮ ಪಕ್ಷದ ಶಿಸ್ತನ್ನೇ ಮರೆತಿದ್ದಾರೆ. ಕಾಂಗ್ರೆಸ್ ಹೈಕಮಾಂಡ್ ಮುಂದಿನ ಸಿಎಂ ಯಾರು ಎಂದು ಘೋಷಿಸಿಲ್ಲ. ಆದರೆ ಸಿದ್ದರಾಮಯ್ಯ ನಾನೇ ಸಿಎಂ ಎಂದು ಹೇಳುತ್ತಿದ್ದಾರೆ ಎಂದು ವ್ಯಂಗ್ಯವಾಡಿದರು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.