ದೇಶದಾದ್ಯಂತ ರೈತರ ಸಾಲ ಮನ್ನಾ..?

By Web DeskFirst Published Jul 22, 2018, 10:14 AM IST
Highlights

ರೈತರ ಹಿತ ಕಾಯುವ ಸಲುವಾಗಿ ದೇಶದಾದ್ಯಂತ ರೈತರ ಸಾಲ ಮನ್ನಾ ಮಾಡಲು ಕೇಂದ್ರ ಸರ್ಕಾರವನ್ನು ಒತ್ತಾಯಿಸಲು ಕೆಪಿಸಿಸಿ ಸಭೆನಯಲ್ಲಿ ನಿರ್ಣಯಿಸಲಾಗಿದೆ. 

ಬೆಂಗಳೂರು : ದೇಶಾದ್ಯಂತ ರೈತರ ಹಿತ ಕಾಯಲು ಕೇಂದ್ರ ಸರ್ಕಾರ ವಿಫಲವಾಗಿದೆ. ರೈತ ವರ್ಗ ಎದುರಿಸುತ್ತಿರುವ ಸಂಕಷ್ಟಕ್ಕೆ ಪರಿಹಾರವಾಗಿ ಎಲ್ಲಾ ರಾಜ್ಯದಲ್ಲೂ ರಾಷ್ಟ್ರೀಕೃತ ಬ್ಯಾಂಕ್‌ಗಳಲ್ಲಿರುವ ರೈತರ ಸಂಪೂರ್ಣ ಸಾಲ ಮನ್ನಾ ಮಾಡಬೇಕು ಎಂದು ಕೇಂದ್ರ ಸರ್ಕಾರವನ್ನು ಒತ್ತಾಯಿಸಲು ಕೆಪಿಸಿಸಿ ಪದಾಧಿಕಾರಿಗಳ ಸಭೆಯಲ್ಲಿ ನಿರ್ಣಯ ಕೈಗೊಳ್ಳಲಾಗಿದೆ. 

ಬೆಂಗಳೂರಿನ ಗುರುನಾನಕ್ ಭವನದಲ್ಲಿ ನಡೆದ ಕೆಪಿಸಿಸಿ ಪದಾಧಿಕಾರಿಗಳು, ಜಿಲ್ಲಾ ಕಾಂಗ್ರೆಸ್, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರ ಸಭೆಯಲ್ಲಿ ಕೇಂದ್ರ ಸರ್ಕಾರದ ವೈಫಲ್ಯಗಳನ್ನು ಖಂಡಿಸಿ ಹಾಗೂ ಸಾಲ ಮನ್ನಾಗೆ ಒತ್ತಾಯಿಸಿ ನಿರ್ಣಯ ಕೈಗೊಳ್ಳಲಾಯಿತು. ಇದೇ ವೇಳೆ ಕರ್ನಾಟಕ ಮಾದರಿಯಲ್ಲಿ ಎಲ್ಲಾ ರಾಜ್ಯಗಳಲ್ಲೂ 3 ಲಕ್ಷ ರು.ವರೆಗೆ ಬಡ್ಡಿ ರಹಿತ ಹಾಗೂ 10 ಲಕ್ಷದವರೆಗೆ ಶೇ.3 ರ ಬಡ್ಡಿ ದರದಲ್ಲಿ ರೈತರಿಗೆ ಸಾಲ ಒದಗಿಸಬೇಕು. 

ಚುನಾವಣಾ ಪೂರ್ವದಲ್ಲಿ ನರೇಂದ್ರ ಮೋದಿ ಅವರು ನೀಡಿದ್ದ ಭರವಸೆಗಳನ್ನು ಈಡೇರಿಸ ಬೇಕು ಎಂದು ಒತ್ತಾಯಿಸಲಾಯಿತು. ನಿರ್ಣಯ ಮಂಡಿಸಿದ ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್, 2014 ರಲ್ಲಿ ನರೇಂದ್ರ ಮೋದಿ ರೈತರ ಬದುಕಿನಲ್ಲಿ ಭಾರಿ ಬದಲಾವಣೆ ತರುವುದಾಗಿ ಹೇಳಿದ್ದರು. ಕೃಷಿಯಲ್ಲಿ ಆಮೂಲಾಗ್ರ ಬದಲಾವಣೆ ತರುತ್ತೇನೆ, ರೈತರ ಆದಾಯ ದುಪ್ಪಟ್ಟು ಮಾಡುತ್ತೇನೆ, ಗ್ರಾಮೀಣಾಭಿವೃದ್ಧಿಗೆ ಆದ್ಯತೆ ನೀಡುತ್ತೇನೆ ಎಂದು ಹೇಳಿದ್ದರು. ಆದರೆ ಯಾವೊಂದು ಭರವಸೆಯನ್ನೂ ಈಡೇರಿಸಿಲ್ಲ. 

ಪ್ರಧಾನಮಂತ್ರಿ ಫಸಲ್ ಬಿಮಾ ಯೋಜನೆಗೆ 3 ಪಟ್ಟು ಹಣ ವೆಚ್ಚವಾಗುತ್ತಿದ್ದರೂ ರೈತ ಫಲಾನುಭವಿಗಳ ಸಂಖ್ಯೆ ಹೆಚ್ಚಾಗಿಲ್ಲ.  ರಾಜ್ಯದಲ್ಲಿ 1300 ಕೋಟಿ ರು. ವೆಚ್ಚ ಮಾಡಲಾಗಿದೆ. ಆದರೆ, ರೈತರಿಗೆ ಫಲ ಸಿಗುತ್ತಿಲ್ಲ. ರೈತರ ಬೆಳೆಯ ಉತ್ಪಾದನಾ ವೆಚ್ಚಕ್ಕಿಂತ ಶೇ.50 ರಷ್ಟು ಹೆಚ್ಚು ಬೆಂಬಲ ಬೆಲೆ ನೀಡುವುದಾಗಿ ಸುಳ್ಳು ಹೇಳಿ ಮೋಸ ಮಾಡಲಾಗಿದೆ ಎಂದು ಹೇಳಿದರು.

click me!