ರಾಜ್ಯೋತ್ಸವ ದಿನದಂದು ನಾನು, ಅಂಬಿ ಗುಂಡು ಹಾಕಿ ಪರಭಾಷಿಕರಿಗೆ ಬಯ್ಯುತ್ತಿದ್ದೆವು ಎಂದು ಮಲ್ಯ ?

By Suvarna Web DeskFirst Published Nov 3, 2017, 5:38 PM IST
Highlights

ಅವರಿಬ್ಬರ ಗುಂಡು ಪಾರ್ಟಿಗಳ ಬಗ್ಗೆ ಸಾಕಷ್ಟು ಕತೆಗಳೂ ಇವೆ. ರೇಸ್, ಇಸ್ಪೀಟ್, ಪಾರ್ಟಿಗಳ ಬಗ್ಗೆ ಅವರಿಬ್ಬರೂ ಎಗ್ಗಿಲ್ಲದೆ ಮುಕ್ತವಾಗಿ ಹೇಳಿಕೊಳ್ಳುತ್ತಿರುತ್ತಾರೆ. ಇಬ್ಬರೂ ಬಿಂದಾಸ್ ವ್ಯಕ್ತಿತ್ವದವರು

9೦೦೦ ಕೋಟಿ ರು. ಸಾಲ ತೀರಿಸದೆ ಬ್ಯಾಂಕುಗಳಿಗೆ ಟೋಪಿ ಹಾಕಿ ಬ್ರಿಟನ್ನಿಗೆ ಹೋಗಿ ತಲೆಮರೆಸಿಕೊಂಡಿರುವ ಮದ್ಯದ ದೊರೆ ವಿಜಯ್ ಮಲ್ಯ ಮೊನ್ನೆ ಒಂದು ಮಜವಾದ ಟ್ವೀಟ್ ಮಾಡಿದ್ದರು. ನವೆಂಬರ್ 1ರ ಕನ್ನಡ ರಾಜ್ಯೋತ್ಸವದಂದು ಬೆಳಬೆಳಗ್ಗೆ ಅವರ ಖಾತೆಯಲ್ಲಿ ಈ ಟ್ವೀಟ್ ಪ್ರತ್ಯಕ್ಷವಾಗಿತ್ತು.

‘ನಾನು ಕನ್ನಡ ರಾಜ್ಯೋತ್ಸವ ಆಚರಣೆಯನ್ನು ಮಿಸ್ ಮಾಡಿಕೊಳ್ತಿದ್ದೇನೆ. ಹಿಂದೆಲ್ಲ ನಾನು ಮತ್ತು ಅಂಬರೀಷ್ ಬೆಳಗಿನ ಜಾವದವರೆಗೆ ಕುಡಿಯುತ್ತ ಪರಭಾಷಿಕರಿಗೆ ಹಿಗ್ಗಾಮುಗ್ಗಾ ಬೈಯುತ್ತಿದ್ದೆವು. ಮಜವಾದ ದಿನಗಳವು’ ಎಂಬುದೇ ಆ ಟ್ವೀಟ್. ತಕ್ಷಣ ಅದು ವೈರಲ್ ಆಯಿತು. ಹೇಳಿಕೇಳಿ ಮಲ್ಯ ಮತ್ತು ಅಂಬರೀಷ್ ಸ್ನೇಹಿತರು. ಅವರಿಬ್ಬರ ಗುಂಡು ಪಾರ್ಟಿಗಳ ಬಗ್ಗೆ ಸಾಕಷ್ಟು ಕತೆಗಳೂ ಇವೆ. ರೇಸ್, ಇಸ್ಪೀಟ್, ಪಾರ್ಟಿಗಳ ಬಗ್ಗೆ ಅವರಿಬ್ಬರೂ ಎಗ್ಗಿಲ್ಲದೆ ಮುಕ್ತವಾಗಿ ಹೇಳಿಕೊಳ್ಳುತ್ತಿರುತ್ತಾರೆ. ಇಬ್ಬರೂ ಬಿಂದಾಸ್ ವ್ಯಕ್ತಿತ್ವದವರು. ಮನಸ್ಸಿಗೆ ಬಂದಿದ್ದನ್ನು ಮಾಡಿಯೇ ತೀರುವವರು ಹಾಗೂ ಬದುಕನ್ನು ಎಂಜಾಯ್ ಮಾಡುವವರು. ಹಾಗಾಗಿ ಈ ಟ್ವೀಟ್ ನಿಜವೆಂದೇ ಎಲ್ಲರೂ ನಂಬಿದ್ದರು.

ಆದರೆ, ಮೂಲ ಹುಡುಕಿದಾಗ ತಿಳಿದಿದ್ದೇ ಬೇರೆ. ಮಲ್ಯರ ಹೆಸರಿನಲ್ಲಿರುವ ಫೇಕ್ ಖಾತೆಯಿಂದ ಈ ಟ್ವೀಟ್ ಮಾಡಲಾಗಿದೆ. ಮಲ್ಯರ ವೆರಿಫೈಡ್ ಟ್ವೀಟರ್ ಖಾತೆ ಬೇರೆಯೇ ಇದೆ. ಆದರೆ, ಎರಡರಲ್ಲೂ ಮಲ್ಯರ ಫೋಟೋ, ಖಾತೆಯ ಹೆಸರು ಸೇರಿದಂತೆ ಬೇರೆಲ್ಲ ವಿವರಗಳು ಒಂದೇ ರೀತಿಯಲ್ಲಿವೆ. ಒಂದೇ ಒಂದು ವ್ಯತ್ಯಾಸವೆಂದರೆ, ಒರಿಜಿನಲ್ ಖಾತೆಯ ಹೆಸರಿನಲ್ಲಿ ಮಲ್ಯ ಎಂಬುದಕ್ಕೆ ಎರಡು ‘ಎಲ್ ’ಗಳಿದ್ದರೆ ಫೇಕ್ ಖಾತೆಯಲ್ಲಿ ಮೂರು ‘ಎಲ್’ಗಳಿವೆ. ಮೇಲ್ನೋಟಕ್ಕೆ ಇದು ತಿಳಿಯುವುದೇ ಇಲ್ಲ. ಹಾಗಾಗಿ ನಕಲಿ ಟ್ವೀಟನ್ನು ನಿಜವೆಂದು ನಂಬಿ ಜನ ಬೇಸ್ತುಬಿದ್ದಿದ್ದಾರೆ.

click me!