ಕೋಟಿಲಿಂಗೇಶ್ವರ ದೇಗುಲ ಸ್ಥಾಪಿಸಿದ ಸ್ವಾಮೀಜಿ ನಿಧನ

By Web DeskFirst Published Dec 15, 2018, 10:29 AM IST
Highlights

ಕೋಟಿಲಿಂಗೇಶ್ವರ ದೇವಾಲಯದ ಸ್ಥಾಪಕ ಸಾಂಬಶಿವಸ್ವಾಮಿ ಶುಕ್ರವಾರ ನಿಧನರಾಗಿದ್ದಾರೆ.  ಹೃದಯಾಘಾತಕ್ಕೆ ಒಳಗಾಗಿದ್ದ ಅವರನ್ನು ಬೆಂಗಳೂರಿನ ಮಹಾವೀರ್‌ ಜೈನ್‌ ಆಸ್ಪತ್ರೆಗೆ ಸೇರಿಸಲಾಗಿದ್ದು, ಚಿಕಿತ್ಸೆ ಫಲಿಸದೆ ಮೃತಪಟ್ಟಿದ್ದಾರೆ.  

ಕೆಜಿಎಫ್‌: ಕಮ್ಮಸಂದ್ರದ ಕೋಟಿಲಿಂಗೇಶ್ವರ ದೇವಾಲಯದ ಸ್ಥಾಪಕ ಸಾಂಬಶಿವಸ್ವಾಮಿ (72) ಶುಕ್ರವಾರ ನಿಧನರಾಗಿದ್ದಾರೆ. ಗುರುವಾರ ಮುಂಜಾನೆ ಹೃದಯಾಘಾತಕ್ಕೆ ಒಳಗಾಗಿದ್ದ ಅವರನ್ನು ಬೆಂಗಳೂರಿನ ಮಹಾವೀರ್‌ ಜೈನ್‌ ಆಸ್ಪತ್ರೆಗೆ ಸೇರಿಸಲಾಗಿತ್ತು. 

ಆದರೆ, ಚಿಕಿತ್ಸೆ ಫಲಕಾರಿಯಾಗದೆ ಶುಕ್ರವಾರ ಸಂಜೆ 4.15 ಸುಮಾರಿಗೆ ಮೃತಪಟ್ಟಿದ್ದಾರೆ. ಗೋಪಾಲಪ್ಪ ಎಂಬ ನಾಮಧೇಯದಿಂದ ಬೆಮಲ್‌ನಲ್ಲಿ ಕಾರ್ಮಿಕರಾಗಿ ಕೆಲಸ ಮಾಡುತ್ತಿದ್ದ ಸ್ವಾಮೀಜಿ, ನಂತರ ಬೆಂಗಳೂರಿನಲ್ಲಿ ವಸತಿ ಶಾಲೆಯನ್ನು ಪ್ರಾರಂಭಿಸಿದರು. 

ಮದರ್‌ ತೆರೇಸಾ ಹೆಸರಿನಲ್ಲಿ ವಿದ್ಯಾಸಂಸ್ಥೆ ಕಟ್ಟಿದರು. 1979ರ ಸುಮಾರಿನಲ್ಲಿ ಕಮ್ಮಸಂದ್ರದ ತಮ್ಮ ಸ್ವಂತ ಜಮೀನಿನಲ್ಲಿ ದೇವಾಲಯ ನಿರ್ಮಾಣ ಮಾಡುವ ಸಂಕಲ್ಪ ಹೊಂದಿ ಕೋಟಿಲಿಂಗೇಶ್ವರ ದೇವಾಲಯಕ್ಕೆ ಅಡಿಪಾಯ ಹಾಕಿದರು. 

ನಂತರ ದೇವಾಲಯದ ಸಮುಚ್ಚಯದಲ್ಲಿ ಒಂದೊಂದೇ ದೇವಾಲಯಗಳು ಪ್ರಾರಂಭವಾದವು. ದೇವಾಲಯದ ವಿಸ್ತೀರ್ಣ ಹೆಚ್ಚಾಯಿತು. ಸ್ವಾಮೀಜಿಯವರ ಆಸೆಯಂತೆ 108 ಅಡಿಗಳ ಬೃಹತ್‌ ಲಿಂಗವನ್ನು ಪ್ರತಿಷ್ಠಾಪನೆ ಮಾಡಲಾಯಿತು. ನಂತರ 60 ಅಡಿ ಲಿಂಗ ಬೃಹತ್‌ ನಂದಿ ಸೇರಿದಂತೆ ಸಹಸ್ರಾರು ಲಿಂಗಗಳ ಪ್ರತಿಷ್ಠಾಪನೆ ಮಾಡಲಾಯಿತು.

click me!