ಅತೃಪ್ತ ಹಿರಿಯರಿಂದ ಖರ್ಗೆಗೆ ‘ನಾಯಕ ಪಟ್ಟ?’

By Web DeskFirst Published Dec 15, 2018, 9:58 AM IST
Highlights

ಕಾಂಗ್ರೆಸ್ ಮುಖಂಡ ಸಿದ್ದರಾಮಯ್ಯ ದಿಢೀರ್ ನಿರ್ಧಾರ ಒಂದನ್ನು ಕೈಗೊಂಡಿದ್ದಾರೆ. ಭಾನುವಾರವೇ ಅವರು ಬೆಳಗಾವಿ ಅಧಿವೇಶನಕ್ಕೆ ತೆರಳಲು ತೀರ್ಮಾನಿಸಿದ್ದಾರೆ. 

ವಿಧಾನಸೌಧ :  ಕಾಂಗ್ರೆಸ್‌ನಲ್ಲಿ ಬಣ ರಾಜಕಾರಣ ತೀವ್ರಗೊಂಡಿರುವ ಹಿನ್ನೆಲೆಯಲ್ಲಿ ಶಾಸಕಾಂಗ ಪಕ್ಷದ ನಾಯಕ ಸಿದ್ದರಾಮಯ್ಯ ಅವರು ಭಾನುವಾರ ಮಧ್ಯಾಹ್ನವೇ ಬೆಳಗಾವಿಗೆ ಆಗಮಿಸಲು ತೀರ್ಮಾನಿಸಿದ್ದಾರೆ ಎಂದು ಮೂಲಗಳು ತಿಳಿಸಿವೆ.

ಈ ಮೊದಲು ಸೋಮವಾರದಂದು ನೇರವಾಗಿ ಅಧಿವೇಶನಕ್ಕೆ ಆಗಮಿಸಲು ಸಿದ್ದರಾಮಯ್ಯ ಅವರು ಯೋಜಿಸಿದ್ದರು. ಆದರೆ, ಬಣ ರಾಜಕಾರಣ ಹಾಗೂ ಆಪರೇಷನ್‌ ಕಮಲದ ಗುಮ್ಮದ ಪರಿಣಾಮವಾಗಿ ಒಂದು ದಿನ ಮೊದಲೇ ಬೆಳಗಾವಿಗೆ ಆಗಮಿಸಲು ಅವರು ತೀರ್ಮಾನಿಸಿದ್ದಾರೆ ಎಂದು ತಿಳಿದುಬಂದಿದೆ.

ಪಕ್ಷ ಹಾಗೂ ಸರ್ಕಾರದಲ್ಲಿ ಉತ್ತರ ಕರ್ನಾಟಕಕ್ಕೆ ಅನ್ಯಾಯವಾಗಿದೆ ಎಂದು ಈ ಭಾಗದ ಶಾಸಕರು ಒಗ್ಗೂಡಿರುವುದು ಹಾಗೂ ಹಲವು ಬಣಗಳು ರೂಪುಗೊಂಡು ಡಿ. 18ರಂದು ನಡೆಯಲಿರುವ ಶಾಸಕಾಂಗ ಪಕ್ಷದ ಸಭೆಯಲ್ಲಿ ತಮ್ಮ ದುಮ್ಮಾನ ಹೇಳಿಕೊಳ್ಳಲು ತಯಾರಾಗಿರುವ ಹಿನ್ನೆಲೆಯಲ್ಲಿ ಈ ಗುಂಪುಗಳ ನಾಯಕರೊಂದಿಗೆ ಚರ್ಚಿಸಿ, ಪರಿಸ್ಥಿತಿ ಹತೋಟಿಗೆ ತೆಗೆದುಕೊಳ್ಳಲು ಸಿದ್ದರಾಮಯ್ಯ ಭಾನುವಾರವೇ ಆಗಮಿಸಲಿದ್ದಾರೆ ಎಂದು ಅವರ ಆಪ್ತ ಮೂಲಗಳು ಹೇಳಿವೆ.

ಬಣ ರಾಜಕಾರಣದ ಲಾಭ ಪಡೆಯಲು ಬಿಜೆಪಿ ಕೂಡ ಸಜ್ಜಾಗಿದ್ದು, ಆಪರೇಷನ್‌ ಕಮಲದ ಗುಮ್ಮ ಮತ್ತೆ ಕೇಳಿ ಬರುತ್ತಿರುವುದು ಸಹ ಸಿದ್ದರಾಮಯ್ಯ ಅವರ ಈ ನಿರ್ಧಾರಕ್ಕೆ ಕಾರಣ ಎನ್ನಲಾಗಿದೆ.

ಅತೃಪ್ತ ಹಿರಿಯರಿಂದ ಖರ್ಗೆಗೆ ‘ನಾಯಕ ಪಟ್ಟ?’

ಈ ನಡುವೆ ಕಾಂಗ್ರೆಸ್‌ನ ಹಿರಿಯ ಶಾಸಕರ ಬಣವೂ ತಮ್ಮ ನಾಯಕರನ್ನಾಗಿ ಪಕ್ಷದ ಹಿರಿಯ ಮುಖಂಡ ಮಲ್ಲಿಕಾರ್ಜುನ ಖರ್ಗೆ ಅವರನ್ನು ಮಾಡಿಕೊಳ್ಳುವ ಸೂಚನೆ ಸಹ ದೊರಕಿದೆ.  ಹಿರಿಯ ನಾಯಕರಾದ ರಾಮಲಿಂಗಾರೆಡ್ಡಿ, ರೋಷನ್‌ಬೇಗ್‌ ಮೊದಲಾದವರು ಶನಿವಾರ ಅಥವಾ ಭಾನುವಾರದಂದು ಹಿರಿಯ ಮುಖಂಡ ಮಲ್ಲಿಕಾರ್ಜುನ ಖರ್ಗೆ ಅವರನ್ನು ಭೇಟಿ ಮಾಡಿ ಪಕ್ಷದ ನಿರ್ಧಾರಗಳಲ್ಲಿ ಹಿರಿಯ ಶಾಸಕರನ್ನು ನಿರ್ಲಕ್ಷಿಸುತ್ತಿರುವ ಬಗ್ಗೆ ದೂರು ನೀಡಲಿದ್ದಾರೆ ಎನ್ನಲಾಗಿದೆ.

click me!