
ಬೆಂಗಳೂರು : ಸಿದ್ದರಾಮಯ್ಯ ಮತ್ತೆ ಮುಖ್ಯಮಂತ್ರಿಯಾಗಲಿ’ ಎಂದು ಪದೇ ಪದೆ ಹೇಳಿಕೆ ನೀಡುತ್ತಿರುವ ಕಾಂಗ್ರೆಸ್ಸಿಗರ ವಿರುದ್ಧ ಜೆಡಿಎಸ್ ಹೊಸ ಬಾಂಬ್ ಸಿಡಿಸಿದೆ. ಮತ್ತೊಮ್ಮೆ ಮುಖ್ಯಮಂತ್ರಿಯಾಗಲು ಸಿದ್ದರಾಮಯ್ಯ ಈ ಹಿಂದೆ ಅಧಿಕಾರದಲ್ಲಿದ್ದಾಗ ಮಾಡಿದ ಸಾಧನೆ ಯಾದರೂ ಏನು ಎಂದು ಸ್ವತಃ ಜೆಡಿಎಸ್ ರಾಜ್ಯಾಧ್ಯಕ್ಷ ಎಚ್.ವಿಶ್ವನಾಥ್ ಅವರೇ ಪ್ರಶ್ನೆ ಎತ್ತಿದ್ದಾರೆ. ಜತೆಗೆ, ಈ ರೀತಿಯ ಹೇಳಿಕೆಗಳಿಂದ ಮೈತ್ರಿ ಧರ್ಮಕ್ಕೆ
ಕಂಟಕವಾಗಲಿದೆ ಎಂದೂ ಮಿತ್ರ ಪಕ್ಷದ ಮುಖಂಡರಿಗೆ ನೇರವಾಗಿ ಎಚ್ಚರಿಸಿದ್ದಾರೆ.
ಮೈಸೂರು, ಮದ್ದೂರಿನಲ್ಲಿ ಭಾನುವಾರ ಸುದ್ದಿಗಾರರೊಂದಿಗೆ ಮಾತನಾಡಿದ ವಿಶ್ವನಾಥ್, ಸಿದ್ದರಾಮಯ್ಯ ಮತ್ತೆ ಮುಖ್ಯಮಂತ್ರಿಯಾಗಲಿ ಎಂಬ ಕಾಂಗ್ರೆಸ್ಸಿಗರ ಹೇಳಿಕೆಗಳಿಗೆ ತೀವ್ರ ಅಸಮಾಧಾನ ವ್ಯಕ್ತಪಡಿಸಿದರು.
ಈ ರೀತಿಯ ಹೇಳಿಕೆಗಳನ್ನು ನೀಡುವ ಮೂಲಕ ಕೆಲವರು ಚಮಚಾಗಿರಿ ಮಾಡುತ್ತಿದ್ದಾರೆ ಅಷ್ಟೆ. ಅಷ್ಟಕ್ಕೂ ಸಿದ್ದರಾಮಯ್ಯ ಐದು ವರ್ಷ ಆಡಳಿತ ನಡೆಸಿ ಮಾಡಿದ್ದಾದರೂ ಏನು? ಮಾಜಿ ಮುಖ್ಯಮಂತ್ರಿ ದಿವಂಗತ ದೇವರಾಜ ಅರಸು ಅವರನ್ನು ಜನ ಈಗಲೂ ನೆನೆಯುತ್ತಾರೆ. ಸಿದ್ದರಾಮಯ್ಯ ದೇವರಾಜ ಅರಸು ರೀತಿಯ ಆಡಳಿತ ಕೊಟ್ರಾ? ಎಂದು ಕಾಲೆಳೆದರು.
78ಕ್ಕೆ ಕುಸಿದದ್ದು ಹೇಗೆ?: ಸಿದ್ದರಾಮಯ್ಯ ತಮ್ಮ ಅವಧಿಯ ಕಾಲದ ಆಡಳಿತ ಚೆನ್ನಾಗಿತ್ತು. ಐದು ವರ್ಷ ಪೂರೈಸಿದ ಮುಖ್ಯಮಂತ್ರಿ ನಾನೊಬ್ಬನೇ ಅಂತಾರೆ. ಹಾಗಿದ್ದರೂ ಕಳೆದ ವಿಧಾನಸಭಾ ಚುನಾವಣೆಯಲ್ಲಿ 130 ಇದ್ದ ಕಾಂಗ್ರೆಸ್ ಸಂಖ್ಯಾಬಲ 78ಕ್ಕೆ ಇಳಿಯಿತು ಎಂದು ಲೇವಡಿ ಮಾಡಿದ ವಿಶ್ವನಾಥ್, ಸಿದ್ದರಾಮಯ್ಯ ಕೂಡ ಬಾಯಿ ಚಪಲಕ್ಕೆ ಮತ್ತೆ ಮುಖ್ಯಮಂತ್ರಿ ಆಗ್ತೇನೆ ಎಂದು ಹೇಳಿಕೊಳ್ಳುತ್ತಿದ್ದಾರೆ ಅಷ್ಟೆ. ಇನ್ನೂ ನಾಲ್ಕು ವರ್ಷ ಎಚ್.ಡಿ. ಕುಮಾರಸ್ವಾಮಿ ಅವರೇ ಮುಖ್ಯಮಂತ್ರಿ. ಮತ್ತೆ ಚುನಾವಣೆ ಬಂದಾಗ ಮುಂದಿನ ವಿಚಾರ ನೋಡೋಣ, ಸಿದ್ದರಾಮಯ್ಯ ಮುಖ್ಯಮಂತ್ರಿ ಆಗುವ ಕುರಿತು ಜನರೇ ತೀರ್ಮಾನಿಸುತ್ತಾರೆ.
ಸುಮ್ ಸುಮ್ನೆ ಅವರು ಮುಖ್ಯಮಂತ್ರಿಯಾಗಲಿ ಎಂದು ಹೇಳಿದ್ರೆ ಅದು ಹೇಗೆ ಸಾಧ್ಯ? ಬೇಕಿದ್ದರೆ ಅವರು 2022 ಕ್ಕೆ ಮುಖ್ಯಮಂತ್ರಿಯಾಗಲಿ. ಯಾರು ಬೇಡ ಅಂತಾರೆ ಎಂದು ಕಿಡಿಕಾರಿದರು. ಇದೇ ವೇಳೆ ಕಾಂಗ್ರೆಸ್‌ನ ಶಾಸಕರು, ಸಚಿವರು ಸುಖಾಸುಮ್ಮನೆ ಗೊಂದಲಕಾರಿ ಹೇಳಿಕೆಗಳನ್ನು ನೀಡಬಾರದು ಎಂದ ವಿಶ್ವನಾಥ್, ಇದರಿಂದ ಮೈತ್ರಿ ಧರ್ಮಕ್ಕೆ ಕಂಟಕವಾಗಲಿದೆ.
ಸಿದ್ದರಾಮಯ್ಯ ಮುಖ್ಯಮಂತ್ರಿಯಾಗಲು ಇದು ಸೂಕ್ತ ಸಮಯಲೂ ಅಲ್ಲ, ಮುಖ್ಯಮಂತ್ರಿ ಹುದ್ದೆ ಖಾಲಿಯೂ ಇಲ್ಲ ಎಂದು ಎಚ್ಚರಿಕೆ ನೀಡಿದರು. ಏತನ್ಮಧ್ಯೆ, ನಾನೂ ಹಿಂದೆ ಸಿದ್ದರಾಮಯ್ಯ ಮುಖ್ಯಮಂತ್ರಿ ಆಗಲಿ ಎಂದು ಸಾಕಷ್ಟು ತ್ಯಾಗ ಮಾಡಿದ್ದೆ. ಕಾಂಗ್ರೆಸ್‌ಗೆ ಅವರನ್ನು ಕರೆತಂದೆವು. ಆದರೆ ಸಿದ್ದರಾಮಯ್ಯ ಮಾಡಿದ್ದೇನು? ಅವರು ಬಹಳ ದೊಡ್ಡ ನಾಯಕ. ನಮ್ಮಂಥ ಶ್ರೀಸಾಮಾನ್ಯರು ಅವರ ಕಣ್ಣಿಗೆ ಕಾಣೋಲ್ಲ ಬಿಡಿ ಎಂದು ಕುಟುಕಿದರು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.