ಗಂಗಾವತಿ ತಾಲೂಕಿನ ಹೇಮಗುಡ್ಡ ಗ್ರಾಮದ ಬಳಿ ಇರುವ ಮೊರಾರ್ಜಿ ದೇಸಾಯಿ ವಸತಿ ಶಾಲೆಗೆ ಭೇಟಿ ನೀಡಿ ಮಧ್ಯರಾತ್ರಿಯವರೆಗೂ ವಿದ್ಯಾರ್ಥಿಗಳೊಂದಿಗೆ ಸಂವಾದ ನಡೆಸಿದ ಕೊಪ್ಪಳ ಡಿಸಿ ಅಲ್ಲಿಯೇ ವಾಸ್ತವ್ಯ ಹೂಡಿದ್ದರು. ಈ ವೇಳೆ ವಿದ್ಯಾರ್ಥಿಗಳಿಗೆ ಪ್ರೇರಣೆಯಾಗುವ ಹಲವು ಮಾತುಗಳನ್ನು ಹೇಳಿ ಮಾದರಿ ಎನಿಸಿಕೊಂಡರು.
ಕೊಪ್ಪಳ : ಕಾರಟಗಿಯಲ್ಲಿ ಮಂಗಳವಾರ ನಡೆದಿದ್ದ ಜನಸಂಪರ್ಕ ಸಭೆಯ ಅದ್ಧೂರಿತನಕ್ಕೆ ಅಸಮಾಧಾನ ವ್ಯಕ್ತಪಡಿಸಿದ್ದ ಕೊಪ್ಪಳ ಜಿಲ್ಲಾಧಿಕಾರಿ ಸುನೀಲ್ ಕುಮಾರ್ ಅದೇ ದಿನ ರಾತ್ರಿ ವಸತಿ ಶಾಲೆಯೊಂದಕ್ಕೆ ಹಠಾತ್ ಭೇಟಿ ನೀಡಿ ಅಚ್ಚರಿ ಮೂಡಿಸಿದ್ದಾರೆ. ಗಂಗಾವತಿ ತಾಲೂಕಿನ ಹೇಮಗುಡ್ಡ ಗ್ರಾಮದ ಬಳಿ ಇರುವ ಮೊರಾರ್ಜಿ ದೇಸಾಯಿ ವಸತಿ ಶಾಲೆಗೆ ಭೇಟಿ ನೀಡಿ ಮಧ್ಯರಾತ್ರಿಯವರೆಗೂ ವಿದ್ಯಾರ್ಥಿಗಳೊಂದಿಗೆ ಸಂವಾದ ನಡೆಸಿದರು. ತಮ್ಮ ಬದುಕಿನ ಕತೆ ಹೇಳಿ ವಿದ್ಯಾರ್ಥಿಗಳಿಗೆ ಪ್ರೇರಣೆ ನೀಡಿದರು. ಬಳಿಕ ವಿದ್ಯಾರ್ಥಿಗಳ ಜೊತೆಗೆ ರಾತ್ರಿ ಪೂರ್ತಿ ನೆಲದ ಮೇಲೆಯೇ ನಿದ್ರೆ ಮಾಡಿ ಸರಳತೆ ಮೆರೆದಿರುವುದು ಸಾರ್ವಜನಿಕರ ಪ್ರಶಂಸೆಗೆ ಪಾತ್ರರಾಗಿದ್ದಾರೆ.
ವಿದ್ಯಾರ್ಥಿಗಳ ಸಮಸ್ಯೆ ಆಲಿಸಿದ ಜಿಲ್ಲಾಧಿಕಾರಿಗಳು ಅದೆಲ್ಲವನ್ನು ಹಂತ ಹಂತವಾಗಿ ಇತ್ಯರ್ಥ ಮಾಡುವ ಭರವಸೆ ನೀಡಿದರು. ವಿದ್ಯಾರ್ಥಿಗಳು ಕೇಳಿದ ಪ್ರಶ್ನೆಗೆ ತಾಳ್ಮೆಯಿಂದಲೇ ಉತ್ತರಿಸಿದರು. ರಾತ್ರಿ 10 ಗಂಟೆಯವರೆಗೂ ವಿದ್ಯಾರ್ಥಿಗಳೊಂದಿಗೆ ಹರಟೆ ನಂತರ ವಿದ್ಯಾರ್ಥಿಗಳ ಸಾಲಿನಲ್ಲಿಯೇ ಕುಳಿತು ಊಟ ಮಾಡಿದರು.
ಬಳಿಕ 10ನೇ ತರಗತಿ ವಿದ್ಯಾರ್ಥಿಗಳು ಇರುವ ಕೊಠಡಿಗೆ ತೆರಳಿ ಅವರೊಂದಿಗೆ ಮಧ್ಯೆರಾತ್ರಿ 12ಗಂಟೆ ವರೆಗೂ ಸಂವಾದ ನಡೆಸಿದರು. ಪಾಠಕ್ಕೆ ಸಂಬಂಧಿಸಿದ ಪ್ರಶ್ನೆಗಳು, ಸಾಮಾನ್ಯ ಪ್ರಶ್ನೆಗಳನ್ನು ಕೇಳಿ ವಿದ್ಯಾರ್ಥಿಗಳ ಜ್ಞಾನದ ಮಟ್ಟವನ್ನು ಪರಿಶೀಲನೆ ಮಾಡಿದರು. ಈ ವೇಳೆಯಲ್ಲಿ ಅಭ್ಯಾಸ ಕ್ರಮ, ಐಎಎಸ್ ಪರೀಕ್ಷೆ ತಯಾರಿ, ಇತರೆ ಕೋರ್ಸ್‌ಗಳ ಅನುಕೂಲಗಳ ಬಗ್ಗೆ ಮಾರ್ಗದರ್ಶನ ಮಾಡಿದರು.
ನಾನೂ ಹಾಸ್ಟೆಲ್‌ನಲ್ಲಿದ್ದೆ:
ನಾನು ಸಹ ಹಾಸ್ಟೆಲ್ ವಿದ್ಯಾರ್ಥಿಯೇ. ಹೈಸ್ಕೂಲು ಓದುವಾಗಿ ಒಂದು ವರ್ಷ ಹಾಸ್ಟೆಲ್‌ನಲ್ಲಿ ಇದ್ದು ಅಭ್ಯಾಸ ಮಾಡಿದ್ದೇನೆ. ಹೀಗಾಗಿ, ನಿಮ್ಮಲ್ಲಿ ಯಾರಲ್ಲಿಯೂ ಕೀಳರಿಮೆ ಬೇಡವೇ ಬೇಡ. ನಿಮಗಿರುವಷ್ಟುವಿಫುಲ ಅವಕಾಶ ಅಭ್ಯಾಸ ಮಾಡುವುದಕ್ಕೆ ಮನೆಯಲ್ಲಿ ಇರಲು ಸಾಧ್ಯವೇ ಇಲ್ಲ. ಹೀಗಾಗಿ, ಜೀವನದಲ್ಲಿ ಸಾಧನೆ ಮಾಡಲು ಹಾಸ್ಟೆಲ್ ಅದ್ಭುತ ಅವಕಾಶಗಳನ್ನು ತೆರೆದಿಡುತ್ತದೆ ಎಂದು ವಿವರಿಸಿದರು.
ಕೀಳರಿಮೆಯಿಂದ ಹೊರಬನ್ನಿ:
ನಾನು ಸಹ ತೆಲುಗು ಮಾಧ್ಯಮದಲ್ಲಿಯೇ ಓದಿದ್ದೇನೆ. ಹೀಗಾಗಿ, ನೀವು ಕನ್ನಡ ಮಾಧ್ಯಮ ಎನ್ನುವ ಕೀಳರಿಮೆ ಬೇಡ. ಜೀವನದಲ್ಲಿ ಗುರಿ ಸಾಧನೆಗೆ ಮಾತೃ ಭಾಷೆಯ ಶಿಕ್ಷಣವೇ ಉತ್ತಮ. ಹೀಗಾಗಿ, ನೀವೆಲ್ಲರೂ ಕನ್ನಡ ಮಾಧ್ಯಮ ಎನ್ನುವ ಕೀಳರಿಮೆಯಿಂದ ಹೊರಬನ್ನಿ ಎಂದು ಸಲಹೆ ನೀಡಿದರು. ನಾನು ಸಾಫ್ಟ್‌ವೇರ್ ಎಂಜನಿಯರ್ ಆಗಿದ್ದು, ಸುಮಾರು ವರ್ಷ ಕೆಲಸ ಮಾಡಿದ್ದೇನೆ. ಅಮೆರಿಕದಲ್ಲಿಯೂ ನಾಲ್ಕು ವರ್ಷ ಇದ್ದು ಬಂದಿದ್ದೇನೆ. ಆದರೆ ನನಗೆ ಅದರಲ್ಲಿ ತೃಪ್ತಿ ಇರಲಿಲ್ಲ. ಹೀಗಾಗಿ, ಪುನಃ ನಾನು ನಮ್ಮ ಗುರುಗಳ ಮಾರ್ಗದರ್ಶನ ಪಡೆದು ಐಎಎಸ್ ಮಾಡಿ ಯಶಸ್ವಿಯಾಗಿದ್ದೇನೆ ಎಂದು ರಾತ್ರಿ 12 ಗಂಟೆಯವರೆಗೂ ವಿದ್ಯಾರ್ಥಿಗಳೊಂದಿಗೆ ಸಂವಾದ ನಡೆಸಿದರು.
ಬಳಿಕ ಎಸ್ಸೆಸ್ಸೆಲ್ಸಿ ವಿದ್ಯಾರ್ಥಿಗಳೊಂದಿಗೆ ಅವರದೇ ಹಾಸಿಗೆಯಲ್ಲಿ ರಾತ್ರಿ ನಿದ್ರೆ ಮಾಡಿದರು. ಬೆಳಗ್ಗೆ 5.30ಕ್ಕೆ ಎದ್ದು, 6 ಗಂಟೆಗೆ ಕೊಪ್ಪಳಕ್ಕೆ ಪಯಣ ಬೆಳಸಿದರು.